ADVERTISEMENT

ಜೈನ ಸನ್ಯಾಸ ಸ್ವೀಕರಿಸಿದ ಪೂಜಾ ಕುಮಾರಿ

ಹರಪನಹಳ್ಳಿ: ‘ಗೀತಾರ್ಥಪ್ರಿಯ ಶ್ರೀಜಿ’ ಎಂದು ಮರುನಾಮಕರಣ ಮಾಡಿದ ಮುನಿಗಳು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 10:12 IST
Last Updated 29 ಏಪ್ರಿಲ್ 2018, 10:12 IST
ಹರಪನಹಳ್ಳಿ ಪಟ್ಟಣದಲ್ಲಿ ಶನಿವಾರ ಜೈನ ಮುನಿಗಳ ನೇತೃತ್ವದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಪೂಜಾ ಕುಮಾರಿ
ಹರಪನಹಳ್ಳಿ ಪಟ್ಟಣದಲ್ಲಿ ಶನಿವಾರ ಜೈನ ಮುನಿಗಳ ನೇತೃತ್ವದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ ಪೂಜಾ ಕುಮಾರಿ   

ಹರಪನಹಳ್ಳಿ: ಪಟ್ಟಣದ ಶೇಷಜೀ ಹಸ್ತಮಲ್ ಜೈನ್ ವಸತಿ ನಿಲಯದ ಆವರಣದಲ್ಲಿ ಶನಿವಾರ ಜೈನ ಮುನಿಗಳ ಸಮ್ಮುಖದಲ್ಲಿ ಪೂಜಾ ಕುಮಾರಿ ಸನ್ಯಾಸ ಸ್ವೀಕಾರಿಸಿದರು. ಸಮಾಜದ ಸಹಸ್ರಾರು ಮಂದಿ ಸನ್ಯಾಸ ಸ್ವೀಕಾರ ಸಂಪ್ರದಾಯಕ್ಕೆ ಸಾಕ್ಷಿಯಾದರು.

ಚಿನ್ನದ ಒಡವೆ ಹಾಗೂ ಬೆಲೆಬಾಳುವ ವಸ್ತ್ರಾಭರಣ ತೊಟ್ಟಿದ್ದ ಪೂಜಾ ಕುಮಾರಿ ನಂತರ ಶ್ವೇತ ವಸ್ತ್ರಧಾರಿಯಾಗಿ, ಮುನಿಗಳು ಹಾಗೂ ಸಾಧ್ವಿಗಳು ಇದ್ದ ಸ್ಥಳಕ್ಕೆ ಬಂದು ಅವರು ವಂದನೆ ಸಲ್ಲಿಸಿದರು. ಅಭಯ್‌ಚಂದ್ರ ಸುರೀಶ್ವರಜಿ ಮಹಾರಾಜ್, ವಿಜಯ ಹೀರಚಂದ್ರ ಸುರೀಶ್ವರಜಿ ಸಾನ್ನಿಧ್ಯದಲ್ಲಿ ಶ್ರದ್ಧಾಂಗಪ್ರಿಯ ಶ್ರೀಜಿ ಹಾಗೂ ಕರುಣಾಂಗಪ್ರಿಯ ಶ್ರೀಜಿ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆ ಪಡೆದುಕೊಂಡರು.

ಪೂಜಾ ಅವರಿಗೆ ‘ಗೀತಾರ್ಥಪ್ರಿಯ ಶ್ರೀಜಿ’ ಎಂದು ಮರುನಾಮಕರಣ ಮಾಡಲಾಯಿತು. ಶ್ರದ್ಧಾಂಗಪ್ರಿಯ ಶ್ರೀಜಿ ಹಾಗೂ ಕರುಣಾಂಗಪ್ರಿಯ ಶ್ರೀಜಿ ಅವರನ್ನು ಗುರುಗಳನ್ನಾಗಿ ಪೂಜಾ ಸ್ವೀಕರಿಸಿದರು. ಮನಸ್ಸನ್ನು ಶುಭ್ರಗೊಳಿಸಿಕೊಳ್ಳುವ ಸಂಕೇತವಾಗಿ ಕೆಲವು ವಿಧಿವಿಧಾನಗಳನ್ನು ಅವರು ಪಾಲಿಸಿದರು.

ADVERTISEMENT

ಇದಕ್ಕೂ ಮೊದಲು ಪೂಜಾ ಅವರ ಕೇಶ ಮುಂಡನ ಸಂಪ್ರದಾಯ ನಡೆಯಿತು. ಸಾಧ್ವಿಯಾಗಿ ಅಹಿಂಸಾವ್ರತ, ಬ್ರಹ್ಮಚರ್ಯ, ಸತ್ಯಸಂಧತೆ ಹಾಗೂ ಆಚೌರ್ಯ ವ್ರತವನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಪೂಜಾ ಪ್ರಮಾಣ ಮಾಡಿದರು. ಮಗಳು ಸನ್ಯಾಸ ದೀಕ್ಷೆ ಸ್ವೀಕರಿಸುವಾಗ ತಂದೆ ಗಣಪತರಾಜೈನ್, ತಾಯಿ ಕುಂಕುಮಬೆನ್ ಭಾವುಕರಾಗಿದ್ದರು.

ಪೂಜಾಕುಮಾರಿ ಸಹೋದರರಾದ ಅಭಯಚಂದ್ರ, ಸಂತೋಷ, ಸಮಾಜದ ಮುಖಂಡರಾದ
ಧನರಾಜ, ಸುಮೀರ್‌ಲಾಲ್, ವಿಜಯಕುಮಾರ್, ಮಹಾವೀರ ಕುಮಾರ್, ಗೌತಮಚಂದ್, ಅಶೋಕಕುಮಾರ್, ಕಾಂತಿಲಾಲ್, ಉತ್ತಮಚಂದ್ ಜೈನ್‌, ಶ್ರೀಪಾಲ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.