ಮೊಳಕಾಲ್ಮುರು ತ್ಲ್ಲಾಲೂಕಿನಲ್ಲಿ ಕೂಲಿ ಕಾರ್ಮಿಕ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಂಜೆ ಆಗುತ್ತಲೇ ಅವರು ಸುಖ ನಿದ್ದೆಗೆ ಜಾರುವುದನ್ನು ಎಲ್ಲಾ ಗ್ರಾಮಗಳಲ್ಲಿ ಹೇರಳವಾಗಿ ಕಾಣಸಿಗುತ್ತದೆ. ಆದರೆ, ತಾಲ್ಲೂಕಿನ ನೇತ್ರನಹಳ್ಳಿಯಲ್ಲಿ ಕಳೆದ ಒಂದು ವಾರ ಕಾಲ ಗ್ರಾಮಸ್ಥರ ಈ ನಿದ್ದೆಗೆ `ಬ್ರೇಕ್~ ಹಾಕಿದ್ದು ವಾರ್ಷಿಕ ವಿಶೇಷ ರಾಷ್ಟ್ರೀಯ ಸೇವಾ ಯೋಜನಾ ಶಿಬಿರ.
ತಾಲ್ಲೂಕಿನ ಕೊಂಡ್ಲಹಳ್ಳಿಯ ರೇವಣ ಸಿದ್ದೇಶ್ವರ ಶಿಕ್ಷಕರ ತರಬೇತಿ ಸಂಸ್ಥೆ ಆಯೋಜಿಸಿದ್ದ ಈ ಶಿಬಿರದಲ್ಲಿ ಸಾಮಾಜಿಕ ಜಾಗೃತಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ ಆಗುವ ಮೂಲಕ ಅನೇಕ ಭಾವಿ ಶಿಕ್ಷಕರು ತಮ್ಮಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರಹಾಕಲು ಶಿಬಿರ ಸೂಕ್ತ ವೇದಿಕೆಯಾಗಿ ಮಾರ್ಪಟ್ಟಿತು.
ಬೆಳಿಗ್ಗೆ ಸಮಯದಲ್ಲಿ ಗ್ರಾಮದಲ್ಲಿ ಸ್ವಚ್ಛತೆ, ಮೂಢನಂಬಿಕೆ ಜಾಗೃತಿ ಕಾರ್ಯಕ್ರಮ, ಸಸಿ ನೆಡುವ ಮೂಲಕ ಹಸಿರಿನ ಮಹತ್ವ ಕುರಿತು ಶ್ರಮ ವಹಿಸಿದ ವಿದ್ಯಾರ್ಥಿಗಳು ಸಂಜೆ ವೇಳೆ ನಡೆಸಿಕೊಟ್ಟ `ಸಮಾಜ ಸೇವೆ ಮಾಡೋಣ, ವಿಶ್ವ ಮಾನವರಾಗೋಣ~, ಸಾಂಕ್ರಾಮಿಕ ರೋಗಗಳ ಜಾಗೃತಿ ರೂಪಕಗಳು, ಮಾಹಿತಿ ಹಕ್ಕು ಅಧಿನಿಯಮ ಮಹತ್ವದ ತಿಳುವಳಿಕೆ, ಶಿಕ್ಷಣ ಕಡ್ಡಾಯ ಹಕ್ಕಿನ ಕುರಿತು, ಹೆಣ್ಣು ಮಕ್ಕಳ ಶಿಕ್ಷಣ, ಭ್ರೂಣ ಹತ್ಯೆ, ಲಿಂಗ ಅಸಮಾನತೆ, ಅಸ್ಪೃಶ್ಯತೆ ನಿವಾರಣೆ ಮುಂತಾದ ವಿಷಯಗಳ ಬಗ್ಗೆಯ ರೂಪಕಗಳ ಮೂಲಕ ಗ್ರಾಮಸ್ಥರಿಗೆ ಅರಿವು ಮೂಡಿಸಲು ಪ್ರಶಿಕ್ಷಣಾರ್ಥಿಗಳು ಶ್ರಮ ವಹಿಸಿದರು.
ಇದರ ಜತೆ ಪಶು ಚಿಕಿತ್ಸಾ ಶಿಬಿರ, ಸಸಿ ನೆಡುವ ಕಾರ್ಯಕ್ರಮ, ಅಗ್ನಿ ಅನಾಹುತ ಮುಂಜಾಗ್ರತಾ ಕ್ರಮಗಳ ಜಾಗೃತಿ ಸೇರಿದಂತೆ ದಿನಕ್ಕೊಂದು ಕಾರ್ಯಕ್ರಮ ನಡೆಸಿಕೊಟ್ಟು ಗ್ರಾಮಸ್ಥರ ಪಾಲಿಗೆ ಎಂದೂ ಮರೆಯದ ಪ್ರಶಿಕ್ಷಣಾರ್ಥಿಗಳಾಗಿ ಏಳು ದಿನಗಳ ಕಾಲ ಕೆಲಸ ನಿರ್ವಹಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮದಕರಿ ನಾಯಕ ಪಾತ್ರದಲ್ಲಿ ಜಿ. ನಾಗರಾಜ್, ಏಡ್ಸ್ ಜಾಗೃತಿ ನಾಟಕದಲ್ಲಿ ಯಲ್ಲಮ್ಮ ಮತ್ತು ಸಂಗಡಿಗರು, ಕುರುಕ್ಷೇತ್ರ ಯಕ್ಷಗಾನದಲ್ಲಿ ಚರಣ್‌ರಾಜ್, ವಂದೇಮಾತರಂ ನೃತ್ಯದಲ್ಲಿ ಉಮ್ಮೀ ಸಲ್ಮಾ ಹಾಗೂ ಸಂಗಡಿಗರು, ಧಾರ್ಮಿಕ ಅಸಮಾನತೆ ರೂಪಕದಲ್ಲಿ ಕರಿಬಸಪ್ಪ ಸಂಗಡಿಗರು, ಕಡ್ಡಾಯ ಶಿಕ್ಷಣ ಹಕ್ಕು ರೂಪಕದಲ್ಲಿ ವಿ.ಎಸ್. ಸುಮಾ ಸಂಗಡಿಗರು ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.