ADVERTISEMENT

ಪಂಕ್ತಿಭೇದ ವಿರುದ್ಧ 26ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 9:45 IST
Last Updated 19 ಜನವರಿ 2012, 9:45 IST

ದಾವಣಗೆರೆ: ಉಡುಪಿಯ ಅಷ್ಟ ಮಠಗಳಲ್ಲಿನ ಊಟದ ಪಂಕ್ತಿಭೇದ ಮತ್ತು ಜಾತಿಭೇದ ಆಚರಣೆ ವಿರೋಧಿಸಿ ಭಾರತ ಕಮ್ಯುನಿಸ್ಟ್ ಪಕ್ಷ  (ಮಾರ್ಕ್ಸ್‌ವಾದಿ) ಜ. 26ರಂದು ಉಡುಪಿಯ ಶ್ರೀಕೃಷ್ಣ ದೇವಾಲಯದ ಮುಂದೆ  ಪ್ರತಿಭಟನೆ ನಡೆಸಲಿದೆ.

ಭಾರತದ ಸಂವಿಧಾನ ದೇಶದ ಎಲ್ಲ ಪ್ರಜೆಗಳು ಜಾತಿ, ಲಿಂಗ ಮತ್ತು ಮತಭೇದವಿಲ್ಲದೇ ಎಲ್ಲರೂ ಸಮಾನರೆಂದು ಸಾರಿ 63ವರ್ಷವಾಯಿತು. ಆದರೆ, ಉಡುಪಿಯ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರು, ಪಂಕ್ತಿಭೇದ ಆಚರಿಸುತ್ತಲೇ, ಅಸ್ಪೃಶ್ಯತೆಯ ವಿರುದ್ಧ ಮಾತನಾಡಿ, ಹೊರಗೊಂದು ಒಳಗೊಂದು ವರ್ತನೆಯನ್ನು ತೋರಿಸುತ್ತಿದ್ದಾರೆ. ಇದು ಸಂವಿಧಾನ ನಿರ್ದೇಶನದ ಉಲ್ಲಂಘನೆ. ಇದನ್ನು ಸಿಪಿಎಂ ತೀವ್ರವಾಗಿ ಖಂಡಿಸಿ, ಗಣರಾಜ್ಯೋತ್ಸವ ದಿನ  ಪ್ರತಿಭಟನೆಗೆ ಕರೆ ನೀಡಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮಾರುತಿ ಮಾನ್ಪಡೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಪರಿಶಿಷ್ಟರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಿವೆ. 2010ರಲ್ಲಿ ರಾಜ್ಯದಲ್ಲಿ 1,563 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದನ್ನು ರಾಜ್ಯ ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿಯ ಮಂಡಳಿಯ ಅಧ್ಯಕ್ಷ ನೆಹರು ಓಲೇಕಾರ ಅವರೇ ವರದಿಯಲ್ಲಿ ತಿಳಿಸಿದ್ದಾರೆ. ಬಿಜೆಪಿ ಆಡಳಿತ ವರ್ಣಾಶ್ರಮ ಭೇದ, ಜಾತಿ ಪದ್ಧತಿಗೆ ಮತ್ತುಷ್ಟು ಪ್ರೋತ್ಸಾಹ ನೀಡುತ್ತಿದೆ. ಭಗವದ್ಗೀತೆ ಅಭಿಯಾನಕ್ಕೆ ಸರ್ಕಾರದ ಬೆಂಬಲ, ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಯತ್ನ ಇದಕ್ಕೊಂದು ಉದಾಹರಣೆ. ಜನರ ನಂಬಿಕೆಗಳು ದೇಶದ ಕಾನೂನು, ಮಾನವೀಯತೆಗಿಂತ ಹೆಚ್ಚಿನವು ಎಂದು ಬಿಜೆಪಿಯ ಸಚಿವರು, ಇಂತಹ ಆಚರಣೆಗಳನ್ನು ಬೆಂಬಲಿಸಿ, ಅಧಿಕಾರದ ಮೂಲಕ ಸಂವಿಧಾನ ಧಿಕ್ಕರಿಸಿ ಮಾತನಾಡುತ್ತಿದ್ದಾರೆ. ಮಡೆ ಸ್ನಾನದ ಬಗೆಗಿನ ಸಂವಾದವೊಂದರಲ್ಲಿ ಪೇಜಾವರ ಶ್ರೀ ಅವರು ಸಂವಿಧಾನಕ್ಕಿಂತ ನಮ್ಮ ಶಾಸ್ತ್ರ ಶ್ರೇಷ್ಠ ಎನ್ನುವ ಶಾಸ್ತ್ರಾಂಧದ ಮಾತುಗಳನ್ನಾಡಿದ್ದಾರೆ. ಇದನ್ನೆಲ್ಲಾ ವಿರೋಧಿಸಲು 26ರಂದು ಉಡುಪಿಯಲ್ಲಿ ಸಿಪಿಎಂನ ಐದು ಸಾವಿರ ಕಾರ್ಯಕರ್ತರು ಸೇರಲಿದ್ದಾರೆ. ಇದಕ್ಕೆ ಪ್ರಗತಿಪರರು, ಮಠಾಧೀಶರು ಬೆಂಬಲಿಸಬೇಕೆಂದು ಮಾನ್ಪಡೆ ಕೋರಿದರು.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.