ADVERTISEMENT

ಪರಿಸರ ಸಂರಕ್ಷಣೆ ಜಾಗೃತಿಗೆ ವಾಕಥಾನ್‌

ಕಸ ಹೆಕ್ಕಿದ ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 6:24 IST
Last Updated 6 ಜೂನ್ 2018, 6:24 IST
ದಾವಣಗೆರೆಯಲ್ಲಿ ಮಂಗಳವಾರ ಕಸ ಹೆಕ್ಕಿ ಪರಿಸರದ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌
ದಾವಣಗೆರೆಯಲ್ಲಿ ಮಂಗಳವಾರ ಕಸ ಹೆಕ್ಕಿ ಪರಿಸರದ ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌   

ದಾವಣಗೆರೆ: ವಿದ್ಯಾರ್ಥಿಗಳು, ವಿವಿಧ ಸಂಘ-ಸಂಸ್ಥೆಗಳ ಸದಸ್ಯರ ಜತೆಗೆ ವಾಕಥಾನ್‌ ನಡೆಸಿದ್ದಲ್ಲದೆ ರಸ್ತೆಯಲ್ಲಿದ್ದ ಕಸ ಹೆಕ್ಕಿ, ಕಸ ಒಯ್ಯುವ ವಾಹನಕ್ಕೆ ಹಾಕುವ ಮೂಲಕ ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌ ಅವರು ವಿಶಿಷ್ಟವಾಗಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದರು.

‘ಗಿಡ ನೆಡಿ ಇಂದೇ, ಸುಖ ಪಡಿ ಮುಂದೆ’, ‘ಪರಿಸರ ನಾಶ, ಮನುಕುಲದ ವಿನಾಶ’, ‘ಡಬಡಬ ಶಬ್ದ ಹೃದಯ ಸ್ತಬ್ಧ’, ‘ಮನೆಗೊಂದು ಮರ-ಊರಿಗೊಂದು ವನ’ ಹೀಗೆ ಹತ್ತು ಹಲವು ಘೋಷಣೆಗಳ ಭಿತ್ತಿಪತ್ರಗಳನ್ನು ಹಿಡಿದು ವಿದ್ಯಾರ್ಥಿ ಸಮೂಹವು ಜಿಲ್ಲಾಧಿಕಾರಿ ಜತೆಗೆ ಹೈಸ್ಕೂಲ್ ಮೈದಾನದತ್ತ ಹೆಜ್ಜೆ ಹಾಕಿತು.

ವಿಶ್ವ ಪರಿಸರದ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಯುವಜನ ಸಬಲೀಕರಣ ಇಲಾಖೆ ಮುಂತಾದವುಗಳ ಸಹಕಾರ ನೀಡಿದವು.

ADVERTISEMENT

ಜಾಥಾವನ್ನು ಬಿ.ಎಸ್.ಎನ್.ಎಲ್ ಕಚೇರಿ ಬಳಿ ಉದ್ಘಾಟಿಸಿದ ಜಿಲ್ಲಾಧಿ ಕಾರಿ, ಪರಿಸರ ಮಾಲಿನ್ಯದಿಂದ ಇಂದು ಈಗಾಗಲೇ ಅನುಭವಿಸುತ್ತಿರುವ ಸಂಕಟ ಗಳು ಪರಿಸರ ಮಾಲಿನ್ಯ, ಪ್ಲಾಸ್ಟಿಕ್ ಬಳಕೆಯಿಂದಾಗುತ್ತಿರುವ ಅನಾಹುತಗಳ ಎಳೆ-ಎಳೆಯಾಗಿ ಬಿಚ್ಚಿಟ್ಟರು. ಪರಿಸರವನ್ನು ಮುಂದಿನ ದಿನಗಳಲ್ಲಿ ಹೇಗೆ ಕಾಪಾಡಿಕೊಳ್ಳಬೇಕೆಂಬ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರೇತರ ಸಂಘಟನೆಗಳು, ಯೋಗ ತಂಡಗಳ ಯೋಗಪಟುಗಳು, ರೋಟರಿ, ಲಯನ್ಸ್, ಸ್ಕೌಟ್ಸ್‌– ಗೈಡ್ಸ್, ಮಹಿಳಾ ಸಮಾಜದ ಪ್ರತಿನಿಧಿಗಳು, ಹಲವು ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಷಡಕ್ಷರಪ್ಪ , ಡಿ.ಡಿ.ಪಿ.ಐ ಕೋದಂಡರಾಮ ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.