ADVERTISEMENT

ಬಾರದ ಮಳೆ: ವರುಣನ ಕೃಪೆಗಾಗಿ ಕತ್ತೆಗಳ ಮದುವೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 7:35 IST
Last Updated 9 ಜುಲೈ 2012, 7:35 IST
ಬಾರದ ಮಳೆ:  ವರುಣನ ಕೃಪೆಗಾಗಿ ಕತ್ತೆಗಳ ಮದುವೆ
ಬಾರದ ಮಳೆ: ವರುಣನ ಕೃಪೆಗಾಗಿ ಕತ್ತೆಗಳ ಮದುವೆ   

ನಾಯಕನಹಟ್ಟಿ: ಬಿತ್ತನೆ ಅವಧಿ ಮುಗಿಯುತ್ತಾ ಬಂದರೂ ವರುಣನ ಮುನಿಸು ಏಕೋ ಬದಲಾಗದ ಕಾರಣ ಇಲ್ಲಿನ ಯುವಕರು ಕತ್ತೆಗಳ ಮದುವೆಗೆ ಮುಂದಾದರು.

ಭಾನುವಾರ ಹೆಣ್ಣು-ಹಾಗೂ ಗಂಡು ಕತ್ತೆಗಳನ್ನು ತಂದು ಸಿಂಗರಿಸಲಾಯಿತು. ಹೊರಮಠದ ಬಳಿ ಮದುವೆ ವಿಜೃಂಭಣೆಯಾಗಿ ಜರುಗಿತು.

ನಂತರ ಗ್ರಾಮದ ಪ್ರಮಖ ಬೀದಿಗಳಲ್ಲಿ ವಾದ್ಯಗಳೊಂದಿಗೆ ಕತ್ತೆಗಳನ್ನು ಮೆರವಣಿಗೆ ಮಾಡಲಾಯಿತು. ಗ್ರಾಮದ ಹೊರಭಾಗದಲ್ಲಿನ ಪಾದಗಟ್ಟೆಯ ದೇವಸ್ಥಾನದ ಬಳಿ ಕತ್ತೆಗಳನ್ನು ಮೂರು ಸುತ್ತು ಹಾಕಿಸಲಾಯಿತು. ಗ್ರಾಮದ ಯುವಕರು ಮೈಗೆ ಬಣ್ಣವನ್ನು ಬಳಿದು ಕೊಂಡು ಕತ್ತೆಗಳ ಮದುವೆಯಲ್ಲಿ ಸಂಭ್ರಮಿಸಿದರಲ್ಲದೇ ಬಾರದ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಬೋರಯ್ಯ, ತಿಪ್ಪೇಸ್ವಾಮಿ ಮತ್ತು ಯುವಕರು, ಗ್ರಾಮಸ್ಥರು ಹಾಜರಿದ್ದರು.

ಸಂಕಟದಲ್ಲಿ...
ಚಿಕ್ಕಜಾಜೂರು:
ಆಗೊಮ್ಮೆ ಈಗೊಮ್ಮೆ ಬಿದ್ದ ಮಳೆಯಿಂದ ಬಿತ್ತನೆಗೆ ಸಿದ್ಧತೆ ನಡೆಸಿದ್ದ ಸುತ್ತಲಿನ ರೈತರು, ದುಬಾರಿ ಬೆಲೆ ತೆತ್ತು ಕಾಳ ಸಂತೆಯಲ್ಲಿ ಹತ್ತಿ, ಮೆಕ್ಕೆಜೋಳ ಮೊದಲಾದ ಬಿತ್ತನೆಬೀಜಗಳನ್ನು ಖರೀದಿಸಿದ್ದರು. ಕೆಲವರು ಬಿತ್ತನೆಯನ್ನೂ ಮಾಡಿದ್ದು, ಬೆಳವಣಿಗೆ ಹಂತದಲ್ಲಿರುವ ಹತ್ತಿ, ಮೆಕ್ಕೆಜೋಳದ ಬೆಳೆ ಮಳೆ ಕೊರತೆಯಿಂದ ಬಾಡುತ್ತಿದ್ದು, ರೈತರನ್ನು ಕಂಗೆಡಿಸಿದೆ.

ಇರುವ ಅಲ್ಪ-ಸ್ವಲ್ಪ ಫಸಲನ್ನು ಇಟ್ಟುಕೊಳ್ಳಲಾಗದೆ, ಅಳಿಸಲೂ ಆಗದೆ ರೈತರು ಚಿಂತಿಸುತ್ತಿದ್ದಾರೆ. ಬಿತ್ತನೆ ಮಾಡಿ ಕಂಗಾಲಾಗಿರುವ ರೈತರು ಸಾಲದ ಬಗ್ಗೆ ಚಿಂತಿಸುತ್ತಿದ್ದಾರೆ. ಹಿಂಗಾರು ಮಳೆ ಬಿದ್ದರೆ ಬಿತ್ತನೆಗೆ ಹಣ ಹೊಂದಿಸುವುದು ಹೇಗೆ ಎಂಬ ಯೋಚನೆಯಲ್ಲಿದ್ದಾರೆ.

ಉತ್ತಮ ಮಳೆಯಾಗಿದ್ದರೆ ಈ ವೇಳೆಗೆ ಮೆಕ್ಕೆಜೋಳ ಸೂಲಂಗಿ ಕೀಳುವ ಹಂತದಲ್ಲಿ ಇರಬೇಕಾಗಿತ್ತು. ಹತ್ತಿ ಹೂ-ಕಾಯಿ ಆಗಬೇಕಿತ್ತು. ಮಳೆ ಕೊರತೆಯಿಂದ ಮೆಕ್ಕೆಜೋಳ ಬಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.