ADVERTISEMENT

ಬಿಜೆಪಿ ಗೆಲುವಿನ ಕಂಬ; ಬಿಎಸ್‌ವೈ ಬಿಂಬ

ಜಿಲ್ಲೆಯಲ್ಲಿ ಅಮಿತ್‌ ಶಾ ತಂತ್ರಗಾರಿಕೆ, ಮೋದಿ ಅಲೆಗೆ ಕೊಚ್ಚಿಹೋದ ಕಾಂಗ್ರೆಸ್‌

ಪ್ರಕಾಶ ಕುಗ್ವೆ
Published 16 ಮೇ 2018, 6:31 IST
Last Updated 16 ಮೇ 2018, 6:31 IST

ದಾವಣಗೆರೆ: ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬಿಂಬಿಸಿದ್ದು ಬೆಣ್ಣೆದೋಸೆ ನಗರಿ ದಾವಣಗೆರೆಯಲ್ಲಿ ಭರ್ಜರಿ ಬೆಳೆ ಕೊಟ್ಟಿದೆ. ಅಮಿತ್‌ ಶಾ ತಂತ್ರಗಾರಿಕೆ, ಮೋದಿ ಅಲೆಗೆ ಕಾಂಗ್ರೆಸ್‌ ಕೊಚ್ಚಿಹೋಗಿದೆ.

2013ರಲ್ಲಿ ಕೆಜೆಪಿ–ಬಿಜೆಪಿ ಮತ ವಿಭಜನೆಯ ಲಾಭವನ್ನು ಕಾಂಗ್ರೆಸ್‌ ಪಡೆದುಕೊಂಡಿತ್ತು. ಈ ಬಾರಿ ಬಿಜೆಪಿ ಒಗ್ಗಟ್ಟು ಪ್ರದರ್ಶಿಸಿ ಕಾಂಗ್ರೆಸ್‌ ಅನ್ನು ಸೋಲಿಸಿ, ಸೇಡು ತೀರಿಸಿಕೊಂಡಿದೆ. ದಾವಣಗೆರೆಯಲ್ಲಿ ರೈತಬಂಧು ಸಮಾವೇಶ ಮಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕರೆಸಿದ್ದು ಫಲ ಕೊಟ್ಟಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜಿಲ್ಲೆಗೆ ಎರಡೆರೆಡು ಬಾರಿ ಬಂದು ಅಲೆ ಎಬ್ಬಿಸಿದ್ದು ಗೆಲುವಿಗೆ ಕಾರಣವಾಗಿವೆ.

ಲಿಂಗಾಯತರ ಪ್ರಾಬಲ್ಯದ ಈ ಜಿಲ್ಲೆಯಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ್ದರಿಂದ ಇಡೀ ಸಮುದಾಯ ಒಗ್ಗಟ್ಟು ಪ್ರದರ್ಶಿಸಿತು. ಅದರಿಂದಾಗಿಯೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೋಲು ಉಣ್ಣಬೇಕಾಯಿತು. ಕಳೆದ ಚುನಾವಣೆಯಲ್ಲಿ 57 ಸಾವಿರ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದ ಅವರು ಈ ಬಾರಿ 4 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.

ADVERTISEMENT

‘ದಾವಣಗೆರೆ ನಗರಕ್ಕೆ ₹ 3 ಸಾವಿರ ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದೇನೆ’ ಎಂದು ಪದೇ ಪದೇ ಹೇಳಿ ಗೆಲುವಿನ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಮಲ್ಲಿಕಾರ್ಜುನ ಅವರಿಗೆ ಅಭಿವೃದ್ಧಿ ಆಚೆಗೂ ಹಲವು ವಿಷಯಗಳು ನಿರ್ಣಾಯಕವಾಗುತ್ತವೆ ಎಂಬ ಅಂಶ ಅರಿವಿಗೆ ಬರಲೇ ಇಲ್ಲ. ಹಾಗಾಗಿಯೇ ಹಿರಿಯ ರಾಜಕಾರಣಿ ಎಸ್‌.ಎ. ರವೀಂದ್ರನಾಥ್‌,‘ ಅಭಿವೃದ್ಧಿ ಒಂದೇ ನಿರ್ಣಾಯಕವಲ್ಲ; ಜನಪ್ರತಿನಿಧಿ ಜನರ ಜತೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದೂ ಮುಖ್ಯ’ ಎಂದು ಒತ್ತಿ ಒತ್ತಿ ಹೇಳುತ್ತಿದ್ದರು.

ಪಿ.ಬಿ. ರಸ್ತೆ ವಿಸ್ತರಣೆ, 22 ಕೆರೆಗಳಿಗೆ ನೀರು ತುಂಬಿಸಲು ಪ್ರಯತ್ನಿಸಿದ್ದು, ಊರ ತುಂಬಾ ಸಿಮೆಂಟ್‌ ರಸ್ತೆ ಮಾಡಿಸಿದ್ದು, ಈ ಯಾವುದೂ ಮಲ್ಲಿಕಾರ್ಜುನರ ‘ಕೈ’ ಹಿಡಿದಿಲ್ಲ. ವೀರಶೈವ, ಲಿಂಗಾಯತ ವಿಭಜನೆಗೆ ಸ್ವತಃ ಮಲ್ಲಿಕಾರ್ಜುನ ಅವರ ವಿರೋಧ ಇದ್ದರೂ, ಸರ್ಕಾರದ ಮೇಲಿನ ಸಿಟ್ಟನ್ನು ಕ್ಷೇತ್ರದ ಜನ ಮಲ್ಲಿಕಾರ್ಜುನ ವಿರುದ್ಧ ಮತ ಹಾಕಿ ತೀರಿಸಿಕೊಂಡಿದ್ದಾರೆ. ಸ್ಮಾರ್ಟ್ ಸಿಟಿ ಅನುದಾನ ಬಳಕೆ ಮಾಡದಿರುವುದು, ಕುಡಿಯುವ ನೀರು ನಿರ್ವಹಣೆಯಲ್ಲಿ ವಿಫಲ, ತುಂಗಭದ್ರಾ ಕೊನೆ ಭಾಗದ ರೈತರ ಹೊಲಗಳಿಗೆ ನೀರು ತಲುಪದಿರುವುದು ಕೇವಲ ನೆಪಗಳಷ್ಟೇ.

ಮುಸ್ಲಿಂ ಪ್ರಾಬಲ್ಯದ ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಹ್ಯಾಟ್ರಿಕ್‌ ಜಯ ಸಾಧಿಸಿದ್ದಾರೆ. ಈ ಭಾಗದಲ್ಲಿ ಅಭಿವೃದ್ಧಿ ಎಂಬುದು ಇನ್ನೂ ಮರೀಚಿಕೆಯಾದರೂ ಕೋಮುಸೌಹಾರ್ದ ಉತ್ತಮವಾಗಿರುವುದರಿಂದ ಶಾಮನೂರು ನೆಮ್ಮದಿಗೆ ಭಂಗ ಇಲ್ಲದಂತಾಗಿದೆ.

ಹೊನ್ನಾಳಿಯ ಶಾಂತನಗೌಡರಿಗೂ ಕ್ಷೇತ್ರದಲ್ಲಿನ ಕೆಲಸಗಳು ಕೈ ಹಿಡಿಯಲಿಲ್ಲ. ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ನೀಡಿದ್ದಲ್ಲದೆ, ನ್ಯಾಮತಿಯನ್ನು ಹೊಸ ತಾಲ್ಲೂಕು ಮಾಡಿ ಅಧಿಕೃತಗೊಳಿಸಿದರು. ಆದರೆ, ರೇಣುಕಾಚಾರ್ಯ ಅವರ ಆರ್ಭಟದ ಹೋರಾಟಗಳ ಎದುರು ಡಿಜಿಎಸ್‌ ತಂತ್ರಗಾರಿಕೆ ಕೆಲಸ ಮಾಡಲಿಲ್ಲ.

371 ‘ಜೆ’ ಅಡಿ ಸೌಲಭ್ಯ ಕಲ್ಪಿಸಲು ಕೊನೆಗಳಿಗೆಯಲ್ಲಿ ಹರಪನಹಳ್ಳಿಯನ್ನು ಬಳ್ಳಾರಿಗೆ ಸೇರಿಸಿದ ಸರ್ಕಾರದ ನಿರ್ಧಾರಕ್ಕೂ ಜನ ಬೆಂಬಲ ವ್ಯಕ್ತಪಡಿಸಿಲ್ಲ. ಬಂಡಾಯ ಇದ್ದರೂ ಜಿ. ಕರುಣಾಕರ ರೆಡ್ಡಿ ಗೆಲ್ಲಲು ಕಾರಣ
ವಾದದ್ದು ಅವರ ಜನಪ್ರಿಯತೆಯಲ್ಲ; ಕ್ಷೇತ್ರದ ಬಗ್ಗೆ ಶಾಸಕ ಎಂ.ಪಿ. ರವೀಂದ್ರರ ಬಹುಕಾಲದ ಅವಜ್ಞೆ.

ಬಹು ಬಂಡಾಯದ ಮಾಯಕೊಂಡದಲ್ಲಿ ಎನ್‌. ಲಿಂಗಣ್ಣ ಗೆದ್ದಿದ್ದು ದೊಡ್ಡ ಸಾಧನೆ. ಬಿಜೆಪಿ ಬಂಡಾಯ ಅಭ್ಯರ್ಥಿಗಳಾದ ಎಂ. ಬಸವರಾಜ್‌ ನಾಯ್ಕ ಜೆಡಿಯುನಿಂದ, ಪಕ್ಷೇತರ ಅಭ್ಯರ್ಥಿಯಾಗಿ ಎಚ್‌. ಆನಂದಪ್ಪ ಸ್ಪರ್ಧೆ ಮಾಡಿದರೂ ಲಿಂಗಣ್ಣ ಅವರ ಗೆಲುವು ಕಸಿಯಲು ಸಾಧ್ಯವಾಗಲಿಲ್ಲ. ಹೊಸ ಮುಖಕ್ಕೆ ಟಿಕೆಟ್‌ ನೀಡಲಾಗಿದೆ ಎಂಬ ಒಂದೇ ಕಾರಣಕ್ಕೆ ಸ್ಥಳೀಯ ಕಾಂಗ್ರೆಸ್‌ ಮುಖಂಡರು ಕೆ.ಎಸ್‌. ಬಸವರಾಜ್‌ ಬೆಂಬಲಕ್ಕೆ ನಿಲ್ಲಲೇ ಇಲ್ಲ.

ಹರಿಹರ ಕ್ಷೇತ್ರದಲ್ಲಿ ಹಾಲಿ ಶಾಸಕ ಜೆಡಿಎಸ್‌ನ ಎಚ್‌.ಎಸ್‌. ಶಿವಶಂಕರ್‌ಗೆ ಸೋಲಾಗಿದೆ. ಕಾಗಿನೆಲೆಯ ಪೀಠದ ಶಾಖಾ ಮಠ ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿರುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ಈ ಕ್ಷೇತ್ರಕ್ಕೆ ಭೇಟಿ ನೀಡಿರುವುದು ಮತದಾರರ ಮೇಲೆ ಸಾಕಷ್ಟು ಪರಿಣಾಮ ಮತ್ತು ಪ್ರಭಾವ ಬೀರಿದ್ದರಿಂದ ಎಸ್‌. ರಾಮಪ್ಪ ಅವರ ಗೆಲುವು ಸುಲಭವಾಗಿದೆ.

ಹಟ ಹಿಡಿದು ಜಗಳೂರು ಕಾಂಗ್ರೆಸ್‌ ಟಿಕೆಟ್‌ ಪಡೆದಿದ್ದ ರಾಜೇಶ್‌ ಪಾಲಿಗೆ ಅದು ಸಾರ್ಥಕವಾಗಲಿಲ್ಲ. ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದ್ದಿದ್ದನ್ನು ಎಸ್‌.ವಿ. ರಾಮಚಂದ್ರ ಸಮರ್ಥವಾಗಿ ಬಳಸಿಕೊಂಡರು. ಚನ್ನಗಿರಿಯಲ್ಲಿ ಒಮ್ಮೆ ಗೆದ್ದವರು ಮುಂದಿನ ಚುನಾವಣೆಯಲ್ಲಿ ಗೆದ್ದ ಉದಾಹರಣೆ ಇಲ್ಲ. ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಈ ಬಾರಿ ಗೆಲ್ಲುವ ಮೂಲಕ ಚನ್ನಗಿರಿಯ ಪರಂಪರೆಯನ್ನು ಮುಂದುವರಿಸಿದ್ದಾರೆ. ಇಲ್ಲಿಯೂ ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಅಂಶವೇ ಮಾಡಾಳ್‌ ಗೆಲುವಿಗೆ ನಿರ್ಣಾಯಕವಾಗಿತ್ತು.

ಶಾಸಕರಲ್ಲಿ ಶಾಮನೂರು ಒಬ್ಬರೇ ಪುನರಾಯ್ಕೆ ‌

ಜಿಲ್ಲೆಯ 8 ಕ್ಷೇತ್ರಗಳಲ್ಲಿ ಬಿಜೆಪಿ 6, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಶಾಸಕರಲ್ಲಿ ಶಾಮನೂರು ಶಿವಶಂಕರಪ್ಪ ಮಾತ್ರ ಪುನರಾಯ್ಕೆ ಆಗಿದ್ದಾರೆ. ಶಾಸಕರಾದ ಎಂ.ಪಿ. ರವೀಂದ್ರ, ವಡ್ನಾಳ್ ರಾಜಣ್ಣ, ಡಿ.ಜಿ. ಶಾಂತನಗೌಡ, ಎಚ್.ಪಿ.ರಾಜೇಶ್ ಸೋಲು ಕಂಡಿದ್ದಾರೆ. ಮೊದಲ ಬಾರಿಗೆ ಮಾಯಕೊಂಡ ಕ್ಷೇತ್ರದಿಂದ ಲಿಂಗಣ್ಣ, ಹರಿಹರದಿಂದ ಎಸ್. ರಾಮಪ್ಪ ಗೆಲುವು ಕಂಡಿದ್ದಾರೆ.

ಧರ್ಮ ಒಡೆಯಲು ಪ್ರಯತ್ನ ನಡೆಸಿದ ಕಾಂಗ್ರೆಸ್‌ಗೆ ಜನ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ. ಭ್ರಷ್ಟಾಚಾರಕ್ಕೆ ಮತದಾರರು ಸರಿಯಾದ ಉತ್ತರ ನೀಡಿದ್ದಾರೆ
– ಎಂ.ಪಿ. ರೇಣುಕಾಚಾರ್ಯ, ಹೊನ್ನಾಳಿ ಶಾಸಕ

ದಾವಣಗೆರೆ ದಕ್ಷಿಣ ಮತ್ತು ಹರಿಹರ ಕ್ಷೇತ್ರಗಳಲ್ಲೂ ಗೆಲ್ಲುವ ನಿರೀಕ್ಷೆಯಿತ್ತು. ಆದರೆ, ಆಗಿಲ್ಲ. ಜಿಲ್ಲೆಯಲ್ಲಿ ಹಿಂದೆ ಕಾಂಗ್ರೆಸ್‌ ಗೆದ್ದಿತ್ತು. ಈಗ ಬಿಜೆಪಿ ವಿಜಯ ಸಾಧಿಸಿದೆ
– ಎಸ್‌.ಎ. ರವೀಂದ್ರನಾಥ್, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ

ಹಿಂದಿನ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳು, ಮೋದಿ ಅಲೆ ಬಿಜೆಪಿ ಗೆಲುವಿಗೆ ಪೂರಕವಾಗಿ ಕೆಲಸ ಮಾಡಿವೆ
– ಮಾಡಾಳ್‌ ವಿರೂಪಾಕ್ಷಪ್ಪ, ಚನ್ನಗಿರಿ ಶಾಸಕ

ಕ್ಷೇತ್ರದಲ್ಲಿ ಬಿಜೆಪಿಯಲ್ಲಿರುವ ಭಿನ್ನಮತ ಬಗೆಹರಿಸುವುದು ವರಿಷ್ಠರ ಕೆಲಸ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ
– ಎನ್‌. ಲಿಂಗಣ್ಣ, ಮಾಯಕೊಂಡ ಶಾಸಕ

ಹರಪನಹಳ್ಳಿ ಕ್ಷೇತ್ರದಲ್ಲಿನ ಬಿಜೆಪಿ ಬಂಡಾಯ ನನಗೆ ‘ಪ್ಲಸ್‌’, ‘ಮೈನಸ್‌’ ಅಲ್ಲವೇ ಅಲ್ಲ. ಕೆಲಸ ನೋಡಿ ಜನ ಮತ ಕೊಟ್ಟಿದ್ದಾರೆ
– ಕರುಣಾಕರ ರೆಡ್ಡಿ, ಹರಪನಹಳ್ಳಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.