ADVERTISEMENT

ರೂ 22.75 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 9:25 IST
Last Updated 16 ಅಕ್ಟೋಬರ್ 2012, 9:25 IST
ರೂ 22.75 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ
ರೂ 22.75 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ   

ಹೊನ್ನಾಳಿ: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬಹಳಷ್ಟು ಅನುದಾನ ಬಿಡುಗಡೆ ಆಗಿದೆ ಎಂದು ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಇಲ್ಲಿನ ಹಿರೇಕಲ್ಮಠದ ರಸ್ತೆ ಬದಿ ರೂ 30.50 ಲಕ್ಷ ವೆಚ್ಚದ ಬಾಕ್ಸ್ ಚರಂಡಿ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಸುಂದರ, ಸ್ವಚ್ಛ ಪಟ್ಟಣ ನಿರ್ಮಾಣ ಮಾಡುವ ಸವಾಲನ್ನು ಹೊನ್ನಾಳಿ ಪಟ್ಟಣ ಪಂಚಾಯ್ತಿ ಸ್ವೀಕರಿಸಿದೆ. ಎಲ್ಲಾ ಸದಸರು ತಮ್ಮ ತಮ್ಮ ವಾರ್ಡ್‌ಗಳಲ್ಲಿ ವಿವಿಧ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. 16 ವಾರ್ಡ್‌ಗಳಲ್ಲಿ ಅಭಿವೃದ್ಧಿ, ಮೂಲಸೌಲಭ್ಯ ಕಲ್ಪಿಸಲು ರೂ15 ಕೋಟಿ ಬಿಡಗಡೆಯಾಗಿದೆ ಎಂದರು.

ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿವೆ. ತುಂಗಭದ್ರಾ ನದಿಗೆ ರೂ22.75 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಿಸಲಾಗುತ್ತಿದೆ. ರೂ5.80 ಕೋಟಿ ವೆಚ್ಚದಲ್ಲಿ ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ರೂ1.05 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ನಿರ್ವಹಿಸ ಲಾಗಿದೆ. ಪಟ್ಟಣ ಪಂಚಾಯ್ತಿ ಕಚೇರಿ ಬಳಿ ರೂ25 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಿಸಲಾಗುತ್ತಿದೆ ಎಂದು ವಿವರಿಸಿದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಮಂಜಪ್ಪ, ಉಪಾಧ್ಯಕ್ಷೆ ಸುಶೀಲಮ್ಮ ದುರುಗಪ್ಪ, ಸದಸ್ಯರಾದ ಪಟ್ಟಣಶೆಟ್ಟಿ ಪರಮೇಶ್ವರಪ್ಪ, ಲತಾ ಸಿದ್ದಪ್ಪ, ಕೆ. ನಿಂಗಪ್ಪ, ಎನ್. ಜಯರಾವ್, ಮಲ್ಲೇಶಪ್ಪ, ಮುಖ್ಯಾಧಿಕಾರಿ ಟಿ.ಎಲ್. ಮಂಜುನಾಥ್, ಟಿ.ಎಚ್. ಮಂಜಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎ.ಬಿ. ಹನುಮಂತಪ್ಪ, ರಾಮಮೂರ್ತಿ, ರಮೇಶ್, ಪ್ರಶಾಂತ್, ರಾಜು, ಕಂಬಳಿ ಸಿದ್ದಪ್ಪ ಇದ್ದರು. 

`ಹನುಮಂತ ವಿಜಯ~ : ತಾಲ್ಲೂಕಿನ ನರಸಗೊಂಡನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಅ. 16ರಿಂದ 24ರವರೆಗೆ `ಹನುಮಂತ ವಿಜಯ~ ಪುರಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಹಿರೇಕಬ್ಬಾರ್ ಗ್ರಾಮದ ಬಸಪ್ಪ ಪುರಾಣ ವಾಚನ ಕಾರ್ಯಕ್ರಮ ನಡೆಸಿಕೊಡುವರು ಎಂದು ದೇವಸ್ಥಾನ ಸಮಿತಿ ಪ್ರಮುಖರು ತಿಳಿಸಿದ್ದಾರೆ.

ನಾಳೆ ರೈತ ಸಂಘದ ಸಭೆ:  ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕಾರಿ ಸಮಿತಿ ಪುನಾರಚನೆ ಸಂಬಂಧ ಅ. 17ರಂದು ಬೆಳಿಗ್ಗೆ 11ಕ್ಕೆ ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ರೈತರ ಸಭೆ ಕರೆಯಲಾಗಿದೆ ಎಂದು ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಭರ್ಮಪ್ಪ ಮಾಸಡಿ ಹೇಳಿದರು.

ತಾಲ್ಲೂಕಿನ ಎಲ್ಲಾ ರೈತರು ಆಗಮಿಸಿ, ನೂತನ ಕಾರ್ಯಕಾರಿ ಸಮಿತಿ ಪುನಾರಚನೆ ಬಗ್ಗೆ ಸಲಹೆ-ಸಹಕಾರ ನೀಡಬೇಕು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿನಂತಿಸಿದರು.  ರೈತ ಸಂಘದ ಅಧ್ಯಕ್ಷ ಎ.ಜಿ. ಚನ್ನಪ್ಪ ನಂದೇರ, ಮುಖಂಡರಾದ ಶಿವಾನಂದಪ್ಪ, ಎಂ. ಬೆನಕಯ್ಯ, ಉಮೇಶ್, ಶುಂಠಿ ಗಣೇಶಪ್ಪ, ಬಿ. ಅಬ್ದುಲ್ ರಬ್ಬಾನಿ, ನೇರಲಗುಂಡಿ ಶಿವಾನಂದಪ್ಪ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.