ADVERTISEMENT

ರೇಣುಕಾಬಾಯಿ ಮೇಯರ್‌, ಉಪ ಮೇಯರ್‌ಗೆ ಪೈಪೋಟಿ

ಇಂದು ಚುನಾವಣೆ, ನಾಲ್ಕು ಸ್ಥಾಯಿ ಸಮಿತಿಗೂ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2014, 5:36 IST
Last Updated 12 ಮಾರ್ಚ್ 2014, 5:36 IST

ದಾವಣಗೆರೆ: ಚುನಾಯಿತರಾಗಿದ್ದರೂ ಅಧಿಕಾರ ಸ್ವೀಕರಿಸಿ ಆಡಳಿತ ನಡೆಸಲಾಗದ ಸ್ಥಿತಿಯಲ್ಲಿದ್ದ ನಗರಪಾಲಿಕೆ ಸದಸ್ಯರ ‘ಕಾಯುವಿಕೆ’ ಕೊನೆಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಚುನಾಯಿತ ಸದಸ್ಯರಿಗೆ ಅಧಿಕೃತವಾಗಿ ನಗರಪಾಲಿಕೆ ‘ಪ್ರವೇಶ’ ಮಾಡುವುದಕ್ಕೆ ಮುಹೂರ್ತ ಕೂಡಿಬಂದಿದೆ. ಬುಧವಾರ ಮೇಯರ್‌ ಹಾಗೂ ಉಪ ಮೇಯರ್‌ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿರುವುದು ಇದಕ್ಕೆ ಕಾರಣ.

ಚುನಾವಣೆ ನಡೆದು ವರ್ಷದ ನಂತರ, ಮೇಯರ್‌ ಹಾಗೂ ಉಪ ಮೇಯರ್‌ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಕಳೆದ ಆಗಸ್ಟ್‌ನಲ್ಲಿ ಮೀಸಲಾತಿ ಪ್ರಕಟಿಸಲಾಗಿತ್ತಾದರೂ, ಕೆಲವರು ಕೋರ್ಟ್‌ನಲ್ಲಿ ತಡೆಯಾಜ್ಞೆ ನೀಡಿದ್ದರಿಂದ ಚುನಾವಣೆ ನಡೆದಿರಲಿಲ್ಲ. ಈಚೆಗಷ್ಟೇ ತಡೆಯಾಜ್ಞೆ ತೆರವುಗೊಂಡಿದ್ದು, ಮಾರ್ಚ್‌ 12ರಂದು ಪಾಲಿಕೆ ಸಭಾಂಗಣದಲ್ಲಿ ಚುನಾವಣೆ ನಡೆಯಲಿದೆ. ಇದೇ ವೇಳೆ, ವಿವಿಧ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಯೂ ಜರುಗಲಿದೆ.

ಮೇಯರ್‌ ಗಾದಿಯು ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪ ಮೇಯರ್‌ ಹುದ್ದೆ ಹಿಂದುಳಿದ ವರ್ಗ ‘ಎ’ಗೆ ಮೀಸಲಾಗಿದೆ. ಚುನಾಯಿತ ಸದಸ್ಯರಲ್ಲಿ ಪರಿಶಿಷ್ಟ ಜಾತಿ ಮಹಿಳೆ ಒಬ್ಬರೇ ಇರುವುದರಿಂದ ಮೇಯರ್‌ ಆಯ್ಕೆ ಸುಗಮವಾಗಿ ನಡೆಯಲಿದೆ. ನಗರದ ‘ಪ್ರಥಮ ಪ್ರಜೆ’ಯಾಗುವ ಅವಕಾಶ 15ನೇ ವಾರ್ಡ್‌ನಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ನ ರೇಣುಕಾಬಾಯಿ ವೆಂಕಟೇಶ ನಾಯ್ಕ ಅವರಿಗೆ ಒಲಿದುಬಂದಿದೆ.

ಆದರೆ, ಉಪ ಮೇಯರ್‌ ಸ್ಥಾನಕ್ಕೆ ನಿಗದಿಯಾಗಿರುವ ಬಿಸಿಎಂ ‘ಎ’ ವರ್ಗದಲ್ಲಿ ಹಲವು ಮಂದಿ ಇದ್ದಾರೆ. ಹೀಗಾಗಿ, ಅಲ್ಲಿ ತೀವ್ರ ಪೈಪೋಟಿ ಕಂಡುಬಂದಿದೆ. ಸ್ಥಾನ ತಮ್ಮದಾಗಿಸಿ ಕೊಳ್ಳಲು ಅರ್ಹ ಸದಸ್ಯರೆಲ್ಲರೂ ಜಿಲ್ಲೆಯ ಪಕ್ಷದ ವರಿಷ್ಠರ ‘ಆಶೀರ್ವಾದ’ ಪಡೆಯಲು ಸಾಹಸಪಡುತ್ತಿದ್ದಾರೆ.

ಮೇಯರ್‌ ಸ್ಥಾನ ಮಹಿಳೆಗೆ ಸಿಗುತ್ತಿರುವುದರಿಂದ ಉಪ ಮೇಯರ್‌ ಹುದ್ದೆಯನ್ನು ಪುರುಷರಿಗೆ ನೀಡಬೇಕು ಎಂದು ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ. ಉಪಮೇಯರ್‌ ಸ್ಥಾನಕ್ಕೆ ನಿಗದಿಯಾಗಿರುವ ಮೀಸಲಾತಿ ವರ್ಗದಲ್ಲಿ, ಎಸ್‌.ಜಿ.ಗೌಸ್‌ ಅಹಮದ್‌(3), ಕೆ.ಆರ್‌. ಮೆಹಬೂಬ್‌ಸಾಬ್‌ (7), ಅಲ್ತಾಫ್‌ ಹುಸೇನ್‌ (12), ಸುರೇಂದ್ರ ಮೊಯಿಲಿ (22), ಜೆ.ಎನ್‌.ಶ್ರೀನಿವಾಸ್‌ (25), ಅಬ್ದುಲ್‌ ಲತೀಫ್‌ (27), ತಿಪ್ಪಣ್ಣ (30), ಎಚ್‌.ಗುರುರಾಜ್‌ (36), ಎ.ಬಿ.ರಹೀಂ (4), ಎಚ್‌.ಬಿ.ಗೋಣೆಪ್ಪ (8) ಬರುತ್ತಾರೆ. ಇವರಲ್ಲಿ ವರಿಷ್ಠರು ಯಾರನ್ನು ಆಯ್ಕೆ ಮಾಡುತ್ತಾರೆಯೋ ಅವರಿಗೆ ‘ಗಾದಿ’ ಸಿಗಲಿದೆ. ಬಹುತೇಕ ಅವಿರೋಧ ಆಯ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಉಪ ಮೇಯರ್‌ ಸ್ಥಾನಕ್ಕೆ ಆಕಾಂಕ್ಷಿಗಳಲ್ಲಿ ಬಹುತೇಕರು ಮೊದಲಿಗೆ ಆಯ್ಕೆಯಾದವರು. ಅಲ್ತಾಫ್‌ ಹುಸೇನ್‌ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಮೇಯರ್‌ ಹುದ್ದೆ ಮಹಿಳೆಗೆ ಮೀಸಲಾಗಿರುವುದರಿಂದ, ಉಪ ಮೇಯರ್‌ ಸ್ಥಾನ ಪುರುಷ ಸದಸ್ಯನಿಗೆ ನೀಡಬೇಕು; ಮುಸ್ಲಿಂ ಸಮಾಜಕ್ಕೆ ಪ್ರಾತಿನಿಧ್ಯ ಕೊಡಬೇಕು ಎನ್ನುವ ಲೆಕ್ಕಾಚಾರದಲ್ಲಿ ನೋಡಿದರೆ, ಹಿರಿತನದ ಆಧಾರದ ಮೇಲೆ ಅಲ್ತಾಫ್‌ ಹುಸೇನ್‌ ಅವರಿಗೆ ಹೆಚ್ಚಿನ ಅವಕಾಶಗಳಿವೆ. ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಮುಸ್ಲಿಂ ಸಮಾಜದ ‘ಪ್ರೀತಿ’ ಗಳಿಸಲು, ಮುಸ್ಲಿಂ ಅಭ್ಯರ್ಥಿಗೆ ಅವಕಾಶ ಮಾಡಿಕೊಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

1951ರ ಆ.7ರಿಂದಲೂ ನಗರಸಭೆಯಾಗಿದ್ದ ದಾವಣಗೆರೆ ಸ್ಥಳೀಯ ಸಂಸ್ಥೆಯನ್ನು 2007ರ ಜ.6ರಿಂದ ನಗರಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಮೊದಲ ಅವಧಿಯಾದ 2008ರಿಂದ 2013ರವರೆಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 2ನೇ ಅವಧಿಯಲ್ಲಿ ಕಾಂಗ್ರೆಸ್‌ ನಿಚ್ಚಳ ಬಹುಮತ ಪಡೆದಿದೆ.

ಅತ್ತೆ ನಂತರ ಸೊಸೆ...
ರೇಣುಕಾಬಾಯಿ ಅವರು 15ನೇ ವಾರ್ಡ್‌ (ಭಾರತ್‌ ಕಾಲೊನಿ)ನಿಂದ  ಚುನಾಯಿತರಾಗಿದ್ದಾರೆ. ಅವರು ಬಿಜೆಪಿಯ ದೇವೀರಮ್ಮ ವಿರುದ್ಧ 423 ಮತಗಳ ಅಂತರದಲ್ಲಿ ಜಯ ಗಳಿಸಿದ್ದರು. ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.

ರೇಣುಕಾಬಾಯಿ ಅವರ ಅತ್ತೆ ಸೀತಮ್ಮ ನಾಗನಾಯ್ಕ ಅವರು ಹಿಂದೆ ನಗರಸಭೆ ಉಪಾಧ್ಯಕ್ಷರಾಗಿದ್ದರು (ಯಶವಂತರಾವ್‌ ಜಾದವ್‌್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT