ADVERTISEMENT

ವಾರ್ಡ್‌ವಾರು ಕಂದಾಯ ಬಳಕೆಗೆ ಒಲವು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 9:00 IST
Last Updated 14 ಫೆಬ್ರುವರಿ 2011, 9:00 IST

ದಾವಣಗೆರೆ: ಆಯಾ ವಾರ್ಡ್‌ನಲ್ಲಿ ಸಂಗ್ರಹವಾದ ಕಂದಾಯವನ್ನು ಅದೇ ವಾರ್ಡ್‌ನ ಅಭಿವೃದ್ಧಿಗೆ ಬಳಸುವ ಕುರಿತು ಪಾಲಿಕೆ ಸಭೆಯಲ್ಲಿ ತೀರ್ಮಾನ ತೆಗೆದು ಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಸಲಹೆ ನೀಡಿದರು.

ನಗರದ 36ನೇ ವಾರ್ಡ್‌ನಲ್ಲಿ ಶನಿವಾರ ಮುಖ್ಯಮಂತ್ರಿ ವಿಶೇಷ ಅನುದಾನ ಹಾಗೂ ಸ್ಥಳೀಯ ಪ್ರದೇಶಾ ಭಿವೃದ್ಧಿ ಯೋಜನೆ ಅಡಿ ನಿರ್ಮಿಸಿರುವ ವಾಣಿಜ್ಯ ಮಳಿಗೆ, ವಾರ್ಡ್ ಕಚೇರಿ ಹಾಗೂ ವ್ಯಾಯಾಮ ಶಾಲೆ ಉದ್ಘಾಟಿಸಿ, ಅವರು ಮಾತನಾಡಿದರು.

ಜನರು ಕಂದಾಯ ಕಟ್ಟುವ ಹಣ ತಮ್ಮ ಬಡಾವಣೆಯ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ ಎಂಬ ಬಗ್ಗೆ ಮನವರಿಕೆಯಾದರೆ, ಕಂದಾಯ ಕಟ್ಟಲು ಉತ್ಸಾಹ ತೋರುತ್ತಾರೆ. ವಸೂಲಾತಿಯ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಲ್ಲಿ ಸುಮಾರು 20 ಸಾವಿರ ಮನೆ ಅಕ್ರಮವಾಗಿ ನಿರ್ಮಿಸಿದ್ದಾರೆ. ಕಂದಾಯ ಭೂಮಿಯನ್ನು ನಿವೇಶನಕ್ಕೆ ಪರಿವರ್ತಿಸಿಲ್ಲ. ಆದರೂ, ಎಲ್ಲ ವಾರ್ಡ್‌ಗಳಲ್ಲೂ ತಾರತಮ್ಯವಿಲ್ಲದೇ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಇನ್ನಾದರೂ ಜನರು ತಪ್ಪು ಮಾಡದೇ ಸರಿಯಾದ ರೀತಿಯಲ್ಲಿ ನಡೆದು ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ಪಾಲಿಕೆ ಸಾರ್ವಜನಿಕರಿಗೆ ಉಪಯುಕ್ತವಾಗುವ ಯೋಜನೆ ರೂಪಿಸಬೇಕು. ಸವಲತ್ತುಗಳು ಜನರಿಗೆ ತಲುಪುವಂತಾಗಬೇಕು ಎಂದು ಕಿವಿ ಮಾತು ಹೇಳಿದರು.

ವಾರ್ಡ್ ಸದಸ್ಯ ಪಿ.ಎಸ್. ಜಯಣ್ಣ ಮಾತನಾಡಿ, ಹಿಂದೆ ವಾರ್ಡ್‌ನಲ್ಲಿ ಅಭಿವೃದ್ಧಿಯೇ ಆಗಿರಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಿನ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಆದ್ಯತೆ ನೀಡಲಾಗುವುದು ಎಂದರು.

ಮೇಯರ್ ಎಂ.ಜಿ. ಬಕ್ಕೇಶ್, ಸ್ಥಾಯಿ ಸಮಿತಿ  ಅಧ್ಯಕ್ಷ ಬಿ. ಲೋಕೇಶ್, ಮಾಜಿ ಮೇಯರ್ ಉಮಾ ಪ್ರಕಾಶ್, ಆಯಕ್ತ ಪ್ರಸನ್ನ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಆಯುಕ್ತ ಅನಾಥ!: ಪಾಲಿಕೆ ಕಾರ್ಯಕ್ರಮಗಳಲ್ಲಿ ಆಯಕ್ತರನ್ನು ವೇದಿಕೆಗೆ ಆಹ್ವಾನಿಸುವುದು ಸಂಪ್ರದಾಯ. ಆದರೆ, ಶನಿವಾರ ನಗರದ 36ನೇ ವಾರ್ಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯಕ್ತರು ಹಾಜರಿದ್ದರೂ, ಅವರನ್ನು ವೇದಿಕೆಗೆ ಕರೆಯಲಿಲ್ಲ.

ಕಾರ್ಯಕ್ರಮ ಮುಗಿಯುವವರೆಗೂ ಆಯಕ್ತರು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸಿದರು. ಆಡಳಿತ ಪಕ್ಷ ಹಾಗೂ ಆಯಕ್ತರ ನಡುವಿನ ಮುಸುಕಿನ ತಿಕ್ಕಾಟ ಇಲ್ಲೂ ಮುಂದುವರಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.