ADVERTISEMENT

ಸದನದಲ್ಲಿ ಸೆಕ್ಸ್ ಫಿಲಂ ವೀಕ್ಷಣೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 7:35 IST
Last Updated 10 ಫೆಬ್ರುವರಿ 2012, 7:35 IST

ಹರಪನಹಳ್ಳಿ: ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವ ಮೂಲಕ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಲುಷಿತಗೊಳಿಸಿರುವ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಹಾಗೂ ಕೃಷ್ಣ ಪಾಲೆಮಾರ್ ಅವರನ್ನು `ಮಂತ್ರಿ~ ಸ್ಥಾನದಿಂದ ತೆರವುಗೊಳಿಸಿದರೆ ಸಾಲದು, ಶಾಸಕತ್ವ ಸ್ಥಾನದಿಂದಲೂ ಅನರ್ಹಗೊಳಿಸುವಂತೆ ಒತ್ತಾಯಿಸಿ ಬುಧವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ, ಪ್ರತಿಕೃತಿ ದಹಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ(ಡಿಎಸ್‌ಎಸ್) ಕಾರ್ಯಕರ್ತರು ಪ್ರವಾಸಿಮಂದಿರ ವೃತ್ತದಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ ಪ್ರತಿಕೃತಿ ದಹಿಸಿದರೆ, ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ) ಹಾಗೂ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕಿಸ್ಟ್)ದ ಅಂಗ ಸಂಘಟನೆಯ ಕಾರ್ಯಕರ್ತರು ಬಸ್‌ನಿಲ್ದಾಣ ಬಳಿಯ ಇಜಾರಿ ಸಿರಸಪ್ಪ ವೃತ್ತದಲ್ಲಿ ಸವದಿ ಪ್ರತಿಕೃತಿಗೆ ಬೆಂಕಿಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಡಿಎಸ್‌ಎಸ್ ಸಂಘಟನೆಯ ಪ್ರತಿಭಟನಾ ನೇತೃತ್ವ ವಹಿಸಿದ್ದ ಸಂಘಟನೆಯ ತಾಲ್ಲೂಕು ಘಟಕದ ಸಂಚಾಲಕ ಕಬ್ಬಳ್ಳಿ ಮೈಲಪ್ಪ ಮಾತನಾಡಿ, ಪ್ರಜಾಪ್ರಭುತ್ವದ ಪಾವಿತ್ರ್ಯದ ಸ್ಥಾನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿ, ಸದನದ ಘನತೆಗೆ ಚ್ಯುತಿ ಉಂಟುಮಾಡಿರುವ ಮಂತ್ರಿಗಳಿಂದ ಕೇವಲ ರಾಜೀನಾಮೆ ಪಡೆದರೆಸಾಲದು. ವಿಧಾನಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಬೇಕು. ಜತೆಗೆ, ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಬಂಧಿಸುವಂತೆ ಒತ್ತಾಯಿಸಿದರು.

ಸಂಘಟನೆಯ ಮುಖಂಡರಾದ ತಲುವಾಗಲು ಕರಿಯಪ್ಪ, ಕಂಚಿಕೇರಿ ಕೆಂಚಪ್ಪ, ಎಚ್. ಹನುಮಂತಪ್ಪ, ಗೋಣೆಪ್ಪ ಚಿಗಟೇರಿ, ಮದನ್ ಕುಣೇಮಾದಿಹಳ್ಳಿ, ಮಲ್ಲೇಶ್ ನಿಚ್ಚವ್ವನಹಳ್ಳಿ, ಚಂದ್ರು ತಲವಾಗಲು ಇತರರು ಪಾಲ್ಗೊಂಡಿದ್ದರು.

ಸಿಪಿಐ: ಅಶ್ಲೀಲ ಚಿತ್ರಗಳನ್ನು ವಿಧಾನಸಭೆಯಲ್ಲಿ ವೀಕ್ಷಿಸಿದ ಮಾಜಿ ಸಚಿವರನ್ನು ಶಾಸಕತ್ವ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಕಾರ್ಯಕರ್ತರು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವಹಿಸಿದ್ದ ಪಕ್ಷದ ಮುಖಂಡ ಹೊಸಳ್ಳಿ ಮಲ್ಲೇಶ್ ಮಾತನಾಡಿ, ಮುಂಗಾರು-ಹಿಂಗಾರು ವೈಫಲ್ಯದಿಂದ ರಾಜ್ಯಕ್ಕೆ ಭೀಕರ ಬರದ ಕರಾಳತೆ ಆವರಿಸಿದೆ. ಜನ ತುತ್ತು ಕೂಳಿಗಾಗಿ ವಲಸೆ ಹೋಗುತ್ತಿದ್ದಾರೆ. ಅದನ್ನು ತಡೆಯುವ ಹಾಗೂ ಹಸಿದ ಹೊಟ್ಟೆಗೆ ಅನ್ನ ಕೊಡುವ ನಿಟ್ಟಿನಲ್ಲಿ ಚಿಂತಿಸಬೇಕಾದ ಹಾಗೂ ಪರಿಹಾರೋಪಾಯ  ಕಂಡುಕೊಳ್ಳ ಬೇಕಾದ ವಿಧಾನಸಭೆಯ ಮೊಗಸಾಲೆಗೆ ಲಂಪಟರು ಒಕ್ಕರಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಗುಡಿಹಳ್ಳಿ ಹಾಲೇಶ್, ಎಚ್.ಎಂ. ಸಂತೋಷ್, ಒಂಟೆತ್ತಿನ ಬಂಡಿ ಹಮಾಲರ ಸಂಘದ ಅಧ್ಯಕ್ಷ ಪಂಪಣ್ಣ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮಹಬೂಬ್ ಬಾಷಾ, ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಯ ಅಧ್ಯಕ್ಷೆ ಬಿ.ಎಂ. ತ್ರಿವೇಣಿ  ಪಾಲ್ಗೊಂಡಿದ್ದರು.

ಸಿಪಿಐ(ಎಂ): ಭಾರತ ಕಮ್ಯುನಿಸ್ಟ್ ಪಕ್ಷದ(ಮಾರ್ಕಿಸ್ಟ್) ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪಕ್ಷದ ಅಂಗ ಸಂಘಟನೆಯ ಮುಖಂಡ ವೆಂಕಟೇಶ್ ಬೇವಿನಹಳ್ಳಿ ಮಾತನಾಡಿ, ವಿಧಾನಸಭೆಯಲ್ಲಿ ರಾಜ್ಯದ ಜನತೆಯ ದುಃಖ-ದುಮ್ಮಾನುಗಳ ಕುರಿತು ಚರ್ಚಿಸಬೇಕಾದ ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ್ ಹಾಗೂ ಕೃಷ್ಣ ಪಾಲೆಮಾರ್ ಬ್ಲೂಫಿಲಂ ವೀಕ್ಷಿಸುತ್ತ ಕಾಲಹರಣ ಮಾಡಿರುವುದು ರಾಜ್ಯದ ಜನರು ತಲೆತಗ್ಗಿಸುವಂತಾಗಿದೆ.

ಇದು ರಾಜ್ಯಕ್ಕೆ ಮಾಡಿದ ಅವಮಾನ. ಹೀಗಾಗಿ, ಮೂವರ ವಿರುದ್ಧ  ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಬೇಕು. ಸದನದ ಸದಸ್ಯತ್ವ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಪಕ್ಷದ ಅಂಗ ಸಂಘಟನೆ ಮುಖಂಡ ರಾದ ಕಲ್ಲಹಳ್ಳಿ ಮಂಜುನಾಥ, ಎಚ್. ವೆಂಕಟೇಶ, ಎಲ್.ಬಿ. ಹಾಲೇಶನಾಯ್ಕ, ಟಿ.ವಿ. ರೇಣುಕಮ್ಮ, ವೈ. ಬಸವರಾಜ, ಕೆಂಚಮ್ಮ, ಸಂತೋಷ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.