ADVERTISEMENT

ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಗ್ರಾಮಸ್ಥರು.

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2017, 7:17 IST
Last Updated 25 ನವೆಂಬರ್ 2017, 7:17 IST

ಹರಿಹರ: ನಗರದ ಹಳೆ ಹರ್ಲಾಪುರದ ಚರಂಡಿಗಳು ಯುಜಿಡಿ (ಒಳಚರಂಡಿ) ಕಾಮಗಾರಿಯಿಂದ ಮುಚ್ಚಿಕೊಂಡು ಮಲಿನ ನೀರು ಸರಾಗವಾಗಿ ಹರಿಯದೇ, ರಸ್ತೆಗಳ ಮೇಲೆ ಹರಿಯುವ ಮೂಲಕ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದ್ದರೂ, ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸಿದೆ.

ನಗರದ ಹೊರವಲಯದಲ್ಲಿದ್ದ ಹಳೆ ಹರ್ಲಾಪುರ ಗ್ರಾಮ, ಶೇರಾಪುರ ಗ್ರಾಮ, ಮಾಜೇನಹಳ್ಳಿ ಗ್ರಾಮ, ಅಮರಾವತಿ ಗ್ರಾಮ, ಅಂಜನೇಯ ಬಡಾವಣೆ, ಅಮರಾವತಿ ಹೌಸಿಂಗ್ ಬೋರ್ಡ್ ಕಾಲೊನಿ, ಕರ್ನಾಟಕ ಗೃಹ ಮಂಡಳಿ ಕಾಲೊನಿಗಳನ್ನು 2014ರಲ್ಲಿ ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿತು.

ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಂಡ ಗ್ರಾಮಗಳೂ ಸಹ ನಗರಗಳಂತೆ ಸ್ವಚ್ಛಗೊಂಡು, ಮೂಲಸೌಲಭ್ಯಗಳಿಂದ ಅಭಿವೃದ್ಧಿಯಾಗುತ್ತವೆ ಎಂಬ ಗ್ರಾಮಸ್ಥರು ಕನಸು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನುಚ್ಚು ನೂರಾಗಿದೆ. ಗ್ರಾಮ ಪಂಚಾಯ್ತಿ ವ್ಯವಸ್ಥೆ ಅತ್ಯುತ್ತಮವಾಗಿತ್ತು. ಸರ್ಕಾರ, ಯಾಕಾದರೂ ಗ್ರಾಮವನ್ನು ನಗರ ವ್ಯಾಪ್ತಿಗೆ ಸೇರ್ಪಡೆ ಮಾಡಿತೋ ಎಂದು ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

ADVERTISEMENT

ಹಳೆ ಹರ್ಲಾಪುರದ ಆಂಜನೇಯ ಬಡಾವಣೆಯಲ್ಲಿ ಯುಜಿಡಿ ಕಾಮಗಾರಿ ಸಂದರ್ಭದಲ್ಲಿ ಚರಂಡಿಗಳನ್ನು ಮುಚ್ಚಿದ್ದಾರೆ. ಚರಂಡಿ ನೀರು ಹರಿಯಲು ಪರ್ಯಾಯ ವ್ಯವಸ್ಥೆ ಮಾಡದ ಹಿನ್ನೆಲೆ, ಮಲಿನ ನೀರು ರಸ್ತೆಯಲ್ಲಿ ಹರಿದು, ರಸ್ತೆಗಳು ಗದ್ದೆಗಳಾಗಿವೆ.

ಕೆಲವು ಮನೆಗಳಂತೂ ಸಂಪೂರ್ಣವಾಗಿ ಚರಂಡಿ ನೀರಿನಿಂದ ಅವೃತಗೊಂಡಿದ್ದು, ಅಕ್ಷರಶಃ ದ್ವೀಪಗಳಾಗಿವೆ. ಸೊಳ್ಳೆ ಹಾಗೂ ಹಂದಿಗಳ ಕಾಟ ಅಧಿಕವಾಗಿದ್ದು, ದುರ್ವಾಸನೆಯ ತಾಣಗಳಾಗಿವೆ ಎಂಬುದು ಸ್ಥಳಿಯರಾದ ಕೊಟ್ರೇಶ್ ಅವರ ದೂರು.

ಆಂಜನೇಯ ಬಡಾವಣೆಯ 1ನೇ ಮೇನ್‌ನಲ್ಲಿರುವ ಆಂಜನೇಯ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಚರಂಡಿ ನೀರು ನಿರಂತರವಾಗಿ ಹರಿಯುತ್ತಿದ್ದು ಆರು ತಿಂಗಳಾಗಿವೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳಿಯರ ದೂರು.

ಯುಜಿಡಿ ಕಾಮಗಾರಿಯಿಂದ ಹಳೆ ಹರ್ಲಾಪುರದಲ್ಲಿ ಕುಡಿಯುವ ನೀರಿನ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು, ನೀರಿಗಾಗಿ ದೂರದ ಆಶ್ರಯ ಕಾಲೊನಿಯಿಂದ ತರಬೇಕಾಗಿದೆ. ಸಾರ್ವಜನಿಕರು ತಮಗೆ ಲಭ್ಯವಿರುವ ಸೈಕಲ್, ಬೈಕ್ ಹಾಗೂ ಆಟೋರಿಕ್ಷಾಗಳಲ್ಲಿ ನಿತ್ಯವೂ ಕುಡಿಯುವ ನೀರು ತರುವ ದೃಶ್ಯ ಸಾಮಾನ್ಯವಾಗಿದೆ.

ನಗರಸಭೆ ಅಧಿಕಾರಿಗಳು ಕೂಡಲೇ, ಹಳೆ ಹರ್ಲಾಪುರಕ್ಕೆ ಕುಡಿಯುವ ನೀರಿನ ಸರಬರಾಜು, ಚರಂಡಿ, ರಸ್ತೆ ದುರಸ್ತಿ ಹಾಗೂ ಬೀದಿ ದೀಪಗಳ ವ್ಯವಸ್ಥೆ ಮಾಡಿಕೊಡಬೇಕೆಂಬುದು ಸ್ಥಳಿಯರ ಆಗ್ರಹ.

* * 

ಹಳೆ ಹರ್ಲಾಪುರದಲ್ಲಿ ಚರಂಡಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸ್ವಚ್ಛತಾ ಕಾರ್ಯದ ಬಗ್ಗೆ ಪರಿಶೀಲನೆ ನಡೆಸುತ್ತೇನೆ.
-ಲಕ್ಷ್ಮೀ, ಪೌರಾಯುಕ್ತೆ, ನಗರಸಭೆ, ಹರಿಹರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.