ADVERTISEMENT

ಪೊಲೀಸರಿಗೆ ಮುಂದಿನ ತಿಂಗಳು 100 ಮನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 2:43 IST
Last Updated 27 ಫೆಬ್ರುವರಿ 2021, 2:43 IST
ದಾವಣಗೆರೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ಮಾತನಾಡಿದರು. ಪೂರ್ವವಲಯದ ಐಜಿಪಿ ಎಸ್‌.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಇದ್ದರು.
ದಾವಣಗೆರೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ಮಾತನಾಡಿದರು. ಪೂರ್ವವಲಯದ ಐಜಿಪಿ ಎಸ್‌.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಇದ್ದರು.   

ದಾವಣಗೆರೆ: ಜಿಲ್ಲೆಯಲ್ಲಿ ಪೊಲೀಸರಿಗೆ ಮನೆಗಳು ಇಲ್ಲ ಎಂಬ ವಿಷಯ ತಿಳಿದಿದ್ದು, ಮುಂದಿನ ತಿಂಗಳಲ್ಲಿ 100ಕ್ಕಿಂತಲೂ ಹೆಚ್ಚಿನ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್ ಭರವಸೆ ನೀಡಿದರು.

ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘2025ರ ವೇಳೆಗೆ ಇನ್ನಷ್ಟು ಮನೆಗಳನ್ನು ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

ಕೆಲವು ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ಹಾಗೂ ಪೊಲೀಸರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದ ಅವರು, ‘ಡಿಜಿಯಾಗಿ ಅಧಿಕಾರ ವಹಿಸಿಕೊಂಡ ದಾವಣಗೆರೆಯಲ್ಲಿ ಮೊದಲ ಬಾರಿಗೆ ಇನ್‌ಸ್ಪೆಕ್ಟರ್‌ಗಳ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದು, ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಎಸ್‌ಪಿ, ಐಜಿಯ ತನಕ ಎಲ್ಲರೂ ಕಷ್ಟದಿಂದ ಕೆಲಸ ಮಾಡಿದ್ದಾರೆ. ಕೋವಿಡ್ ಸಮಯದಲ್ಲೂ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಮಾಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಒಂದು ವರ್ಷದಲ್ಲಿ ಒಳ್ಳೆಯ ಕೆಲಸಗಳು ಆಗಿವೆ’ ಎಂದು ಶ್ಲಾಘಿಸಿದರು.

ADVERTISEMENT

‘ಒನ್ ನೇಷನ್ ಒನ್ ನಂಬರ್’ ಎಂಬ ಪ್ರಧಾನಿ ಆಶಯದಂತೆ ಜಿಲ್ಲೆಯಲ್ಲಿ ಇಆರ್‌ಎಸ್‌ಎಸ್ ಪದ್ಧತಿಯನ್ನು ಜಾರಿಗೆ ತಂದಿದ್ದು, ಸಾರ್ವಜನಿಕರಿಂದ ಉತ್ತಮ ಸ್ಪಂದನ ಸಿಗುತ್ತಿದೆ. ಸರ್ಕಾರದ ಕಡೆಯಿಂದಲೂ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ’ ಎಂದು ಹೇಳಿದರು.

ತನಿಖೆಯನ್ನು ಯಾವ ರೀತಿ ಕೈಗೊಳ್ಳಬೇಕು. ತುರ್ತು ಸಂದರ್ಭದಲ್ಲಿ ಜನರಿಗೆ ಯಾವ ರೀತಿ ಸ್ಪಂದಿಸಬೇಕು. ಯಾವ ರೀತಿ ಕೆಲಸ ಮಾಡಬೇಕು. ಬೀಟ್ ಸಿಸ್ಟಂ ಸುಧಾರಣೆಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಯಿತು.

ಸಭೆಯಲ್ಲಿ ಪೂರ್ವ ವಲಯದ ಐಜಿಪಿ ಎಸ್. ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಎಎಸ್ಪಿ ಎಂ.ರಾಜೀವ್, ಡಿವೈಎಸ್‌ಪಿ ನಾಗೇಶ್ ಐತಾಳ್, ಡಿಸಿ‌ಆರ್‌ಬಿ ಡಿವೈಎಸ್ಪಿ ಬಸವರಾಜ್ ಹಾಗೂ ಇನ್‌ಸ್ಪೆಕ್ಟರ್‌ಗಳು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.