ADVERTISEMENT

1,99,760 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 4:50 IST
Last Updated 5 ಜುಲೈ 2013, 4:50 IST

ದಾವಣಗೆರೆ: ಜಿಲ್ಲೆಯ ವಾಡಿಕೆ ಮುಂಗಾರು ಬೆಳೆ ಕ್ಷೇತ್ರ 3,40,000 ಹೆಕ್ಟೇರ್ ಇದ್ದು, ಈವರೆಗೆ 1,99,760 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ನಡೆದಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಆರ್.ಜಿ.ಗೊಲ್ಲರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮೆಕ್ಕೆ ಜೋಳ (1,47,610 ಹೆಕ್ಟೇರ್), ಜೋಳ (12,080 ಹೆಕ್ಟೇರ್), ತೊಗರಿ (7,600 ಹೆಕ್ಟೇರ್), ಶೇಂಗಾ (4,950 ಹೆಕ್ಟೇರ್), ಹತ್ತಿ (18,800 ಹೆಕ್ಟೇರ್), ಕಬ್ಬು (4,500 ಹೆಕ್ಟೇರ್) ಬಿತ್ತನೆಯಾಗಿದೆ. ರಾಗಿ ಬಿತ್ತನೆ ಆರಂಭ ಆಗಿದ್ದು, ಸಸಿ ಮಡಿಯಲ್ಲಿ ಭತ್ತದ ಬಿತ್ತನೆ ಕಾರ್ಯ ಭರದಿಂದ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಮೆಕ್ಕೆಜೋಳದಲ್ಲಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗೊಣ್ಣೆ ಹುಳು ಬಾಧೆ ಮರಳು ಮಿಶ್ರಿತ ಜಮೀನುಗಳಲ್ಲಿ ಕಾಣಿಸಿಕೊಂಡಿದೆ. ಸಸಿಗಳ ಸಂಖ್ಯೆ ತುಂಬಾ ಕಡಿಮೆಯಾಗಲು ಗೊಣ್ಣೆಹುಳು (ಬೇರು ಹುಳು) ಬಾಧೆ ಕಾರಣವಾಗಿದೆ. ಇದರ ಹತೋಟಿಗೆ, ಈಗ ಬಿತ್ತನೆ ಮಾಡ ಬಯಸುವವರು ಬಿತ್ತನೆ ಕಾಲಕ್ಕೆ ಪ್ರತಿ ಎಕರೆಗೆ 10 ಕೆಜಿ `ಕಾರ್ಬೋಫ್ಯುರಾನ್' ಕೀಟನಾಶಕವನ್ನು ಬೆಳೆಯ ಸಾಲುಗಳಿಗುಂಟ ಹಾಕಬೇಕು. ಹಾಲಿ 15-30 ದಿನಗಳ ಬೆಳೆ ಇದ್ದಲ್ಲಿ ಬೆಳೆಯ ಬೇರು ಭಾಗಕ್ಕೆ ಪ್ರತಿ ಲೀಟರ್ ನೀರಿಗೆ 3 ಮಿ.ಲೀ. `ಕ್ಲೋರ್‌ಪೈರಿಫಾಸ್' ಬೆರೆಸಿದ ದ್ರಾವಣ ಸುರಿಯಬೇಕು.

ಪ್ರತಿ ಎಕರೆಗೆ 250ರಿಂದ 300 ಲೀಟರ್ ಸಿಂಪರಣಾ ದ್ರಾವಣ ಬಳಸಬೇಕು. ಎರೆ ಜಮೀನುಗಳಲ್ಲಿ ಕಾಂಡಕೊರಕದ ಬಾಧೆ ಮೂರು ವರ್ಷಗಳಂತೆ ಈ ಹಂಗಾಮಿನಲ್ಲಿ ಕೂಡ ಮಳೆ ಕಡಿಮೆ ಇರುವ ದಾವಣಗೆರೆ, ಚನ್ನಗಿರಿ, ಜಗಳೂರು, ಹೊನ್ನಾಳಿ ತಾಲ್ಲೂಕುಗಳಲ್ಲಿ ಕಾಣಿಸಿದೆ. ಈ ಕೀಟದ ಹತೋಟಿಗೆ ಪ್ರತಿ ಲೀಟರ್ ನೀರಿಗೆ 2 ಮಿ.ಲೀ. `ಕ್ಲೋರ್‌ಪೈರಿಫಾಸ್' ಬೆರೆಸಿದ ದ್ರಾವಣವನ್ನು ಬೆಳೆಯ ನೇರಕ್ಕೆ ಸಿಂಪಡಿಸಬೇಕು. ಪ್ರತಿ ಎಕರೆಗೆ 150 ಲೀಟರ್ ಬಳಸಬೇಕು.

ಜಿಟಿ ಜಿಟಿ ಮಳೆಯಿಂದ ಹತ್ತಿ ಬೆಳೆಯಲ್ಲಿ ಮೊಗ್ಗು ಮತ್ತು ಹೂವು ಕೊಳೆರೋಗ ಬಾಧೆ ಸಾಧ್ಯತೆ ಇದೆ. ರಸಹೀರುವ ಕೀಟ, ಮೊಗ್ಗು ಮತ್ತು ಹೂವು ಇರುವ ಬೆಳೆಯಲ್ಲಿ `ಮಿರಿಡ್' ತಿಗಣೆ ಬಾಧೆ ಬರುವ ಸಾಧ್ಯತೆ ಇದೆ. ಈ ರೋಗದ ಹತೋಟಿಗೆ 3 ಗ್ರಾಂ. ತಾಮ್ರದ `ಆಕ್ಸಿಕ್ಲೋರೈಡ್', 2 ಗ್ರಾಂ. `ಕಾರ್ಬೆಂಡೆಜಿಂ' ಅಥವಾ `ಮ್ಯೋಂಕೋಜೆಬ್' ಇವುಗಳಲ್ಲಿ ಒಂದನ್ನು 0.3 ಮಿ.ಲೀ. `ಇಮಿಡಾಕ್ಲೋಪ್ರಿಡ್', `ಇಂಡಾಕ್ಸಿಕಾರ್ಬ್' ಅಥವಾ `ಅಸಿಟಮಾಪ್ರಿಡ್'- ಇವುಗಳಲ್ಲಿ ಒಂದು ಕೀಟನಾಶಕದೊಂದಿಗೆ ಬೆರೆಸಿ ಸಿಂಪಡಿಸಬೇಕು.

ಪ್ರತಿ ಸಿಂಪರಣೆ ಕಾಲಕ್ಕೆ ನೀರಿನಲ್ಲಿ ಕರಗುವ 19:19:19, 18:18:18, 13:0:45 ಇವುಗಳಲ್ಲಿ ಒಂದು ರಸಗೊಬ್ಬರ (ಎಕರೆಗೆ ಒಂದು ಕೆಜಿ ಪಾಕೆಟ್)ವನ್ನು ಪ್ರತಿ ಲೀಟರ್ ನೀರಿಗೆ 2-3 ಗ್ರಾಂ.ನಂತೆ ಬಳಸಬೇಕು. ಲಘುಪೋಷಕಾಂಶ ಮಿಶ್ರಣಗಳನ್ನು ಸಹ ಪ್ರತಿ ಲೀಟರ್ ನೀರಿಗೆ 2 ಮಿ.ಲೀ. ಪ್ರಮಾಣದಲ್ಲಿ ಬಳಸಬೇಕು. ಜಗಳೂರು, ಹೊನ್ನಾಳಿ ಮತ್ತು ಹರಪನಹಳ್ಳಿ ತಾಲ್ಲೂಕುಗಳಲ್ಲಿ ಬಿತ್ತನೆಯಾಗಿ 60 ದಿನ ದಾಟಿದ ಬೆಳೆಗಳಲ್ಲಿ ಸಸ್ಯ ಸಂರಕ್ಷಣಾ ಕಾರ್ಯ ಅತಿ ಅವಶ್ಯವಿದೆ ಎಂದು ಸಲಹೆ ನೀಡಿದ್ದಾರೆ.

ಶೇಂಗಾ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಲ್ಲಿ ಅತಿ ತೇವಾಂಶ ಬಾಧೆಯಿಂದ ಬೆಳೆ ಬೆಳ್ಳಗಾಗುವುದು ಅಥವಾ ತಿಳಿ ಹಳದಿ ಬಣ್ಣಕ್ಕೆ ತಿರುಗುವುದು ಕಂಡುಬಂದಲ್ಲಿ ಹತ್ತಿ ಬೆಳೆಗೆ ತಿಳಿಸಿದಂತೆ ನೀರಿನಲ್ಲಿ ಕರಗುವ ರಸಗೊಬ್ಬರ ಬಳಸುವುದು ಸೂಕ್ತ. `ಭೂಚೇತನ' ಪರಿಕರಗಳಾದ ಜಿಪ್ಸಂ, ಜಿಂಕ್ ಮತ್ತು ಬೋರಾನ್ ಹಾಕುವ ಕುರಿತು ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ಪಡೆಯಬೇಕು ಎಂದು ತಿಳಿಸಿದ್ದಾರೆ.

ಭತ್ತದ ಬೀಜಗಳ ರಿಯಾಯಿತಿ ಮಾರಾಟವನ್ನು ಇದೇ 6ರವರೆಗೆ ಮುಂದುವರಿಸಿದ್ದು, ರೈತರು ರಿಯಾಯಿತಿ ಸೌಲಭ್ಯ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.