ADVERTISEMENT

23ರಂದು ‘ದಾವಣಗೆರೆ ಬಂದ್‌’ಗೆ ಕರೆ

ಲೋಕಸಭಾ ಚುನಾವಣೆಗಾಗಿ ಹಣ ವಸೂಲಿ: ರೇಣುಕಾಚಾರ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 9:30 IST
Last Updated 19 ಡಿಸೆಂಬರ್ 2013, 9:30 IST

ದಾವಣಗೆರೆ: ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ನಗರದ ಮಹಾ ನಗರಪಾಲಿಕೆಯ ಎದುರು ನಡೆಯುತ್ತಿರುವ ಅಹೋರಾತ್ರಿ ಧರಣಿ 3ನೇ ದಿನಕ್ಕೆ ಕಾಲಿಟ್ಟಿದ್ದು, ಡಿ. 23ರ ಬಳಿಕ ಹೋರಾಟದ ಸ್ವರೂಪವನ್ನು ಬದಲಾವಣೆ ಮಾಡಿಕೊಳ್ಳಲು ಮುಖಂಡರು ತೀರ್ಮಾನಿಸಿದ್ದಾರೆ.

ಧರಣಿ ಸ್ಥಳದಲ್ಲಿ ಬುಧವಾರ ಮಾತನಾಡಿದ ರೇಣುಕಾಚಾರ್ಯ, 23ರಂದು ‘ದಾವಣಗೆರೆ ಬಂದ್‌’ ಕರೆ ನೀಡಲಾಗುವುದು. ಬಳಿಕ ‘ಜೈಲ್‌ ಭರೋ’, ರಸ್ತೆತಡೆ ಚಳವಳಿ ನಡೆಸಲಾಗುವುದು. 23ರ ಬಳಿಕ ಹೋರಾಟ ಸ್ವರೂಪ ಬದಲಾಗಲಿದೆ. ರೈತ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿ ಮಾಡಿ ಆದೇಶ ಹೊರಡಿಸುವ ತನಕ ಹೋರಾಟ ನಿಲ್ಲುವುದಿಲ್ಲ ಎಂದು ಘೋಷಿಸಿದರು.

‘ಇದು ಬಡವರ ಪರವಾದ ಸರ್ಕಾರವಲ್ಲ. ಖಾಸಗಿ ವೃತ್ತಿಪರ ಶಿಕ್ಷಣ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ರದ್ದು ಮಾಡುವ ಮೂಲಕ ಲೋಕಸಭಾ ಚುನಾವಣೆಗೆ ಹಣ ಮಾಡಲು ಹೊರಟಿದೆ. ಮುಂದೆ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಮೂಲಕ ಹಣ ಪಡೆಯುತ್ತಿದೆ. ಇದು ಬಡವರ ವಿರೋಧಿ ಸರ್ಕಾರ’ ಎಂದು ಗಂಭೀರ ಆರೋಪ ಮಾಡಿದರು.

‘ರೈತರನ್ನು ಕಡೆಗಣಿಸುವ ಸರ್ಕಾರ ಬಹುದಿನ  ಅಧಿಕಾರದಲ್ಲಿ ಉಳಿಯುವುದಿಲ್ಲ. ನಾನು ಸಂಕಲ್ಪ ಮಾಡಿರುವೆ. ಇಲ್ಲಿಯೇ ನನ್ನ ಸಮಾಧಿಯಾದರೂ ಹೋರಾಟ ನಿಲ್ಲುವುದಿಲ್ಲ. ಇಲ್ಲಿಯೇ ಅಂತ್ಯಕ್ರಿಯೆ ಮಾಡಲಿ. ನನಗೆ ಅಧಿಕಾರ ಮುಖ್ಯವಲ್ಲ; ಅನ್ನದಾತನ ಬಾಳು ಹಸನಗಾಬೇಕು’ ಎಂದು ಹೇಳಿದರು.

ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿರೋಧಿ ಸರ್ಕಾರವಾಗಿದೆ. 7 ಬಾರಿ ಬಜೆಟ್‌ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ರಾಜ್ಯಕ್ಕೆ ಉತ್ತಮ ಆಡಳಿತ ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಅದು ಹುಸಿಯಾಗಿದೆ. ಅಬ್ಬರದ ಪ್ರಚಾರಕ್ಕಾಗಿ ಅಗ್ಗದ ಕಾರ್ಯಕ್ರಮ ಜಾರಿ ಮಾಡುತ್ತಿದ್ದಾರೆ. ಸರ್ಕಾರ ನಿಗದಿ ಮಾಡಿದ ದರದಲ್ಲೂ ಕಬ್ಬು ಖರೀದಿ ಮಾಡುತ್ತಿಲ್ಲ. ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡರೂ ಸರ್ಕಾರಕ್ಕೆ ಬುದ್ಧಿ ಬಂದಿಲ್ಲ ಎಂದು ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ಅಡಿಕೆ
ಬೆಳೆಯನ್ನೇ ನಾಶ ಮಾಡಲು ಹೊರಟಿದೆ. ಈಚೆಗೆ ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅಡಿಕೆ ಬೆಳೆ ನಿಷೇಧ ಮಾಡುವ ಚಿಂತನೆಯಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅದು ಸುಳ್ಳು. ಹಾಗಿದ್ದರೆ ಕೇಂದ್ರ ಸರ್ಕಾರದ ಆರೋಗ್ಯ ಸಚಿವರೇ ಹೇಳಿಕೆ ನೀಡಲಿ. ಆಂತರಿಕ ಕಚ್ಚಾಟ ಬಗೆಹರಿಸಿಕೊಳ್ಳಲು ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದರೇ ವಿನಾ ರೈತಪರ ಕಾಳಿಜಿಯಿಂದ ಅಲ್ಲ ಎಂದು ಆರೋಪಿಸಿದರು.

ಮುಖಂಡರಾದ ಬಿ.ಎಂ.ಸತೀಶ್‌, ಬಿ.ಎಸ್‌.ಜಗದೀಶ್‌, ಕೊಟ್ರೇಶ್‌, ಸಾಗರಪೇಟೆ ರಾಜಣ್ಣ, ಶಾಂತರಾಜ ಪಾಟೀಲ್‌, ಕರಿಲಿಂಗಪ್ಪ, ಫಾಲಾಕ್ಷಪ್ಪ, ಧರ್ಮಣ್ಣ, ವೀರಭದ್ರಸ್ವಾಮಿ, ಮಂಜುನಾಥ್‌ ಮೊದಲಾದವರು ಹಾಜರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.