ADVERTISEMENT

ಮುಂದಿನ ಒಲಿಂಪಿಕ್ಸ್ ರಾಜ್ಯದಿಂದ 75 ಕ್ರೀಡಾಪಟುಗಳು: ಕೆ.ಸಿ. ನಾರಾಯಣಗೌಡ

ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 16:21 IST
Last Updated 22 ಅಕ್ಟೋಬರ್ 2021, 16:21 IST
ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿಲ್ಲಾ ಘಟಕದ ಧ್ಯಕ್ಷ ಬಿ. ಪಾಲಾಕ್ಷಿ ಇದ್ದಾರೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮದಲ್ಲಿ ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಜಿಲ್ಲಾ ಘಟಕದ ಧ್ಯಕ್ಷ ಬಿ. ಪಾಲಾಕ್ಷಿ ಇದ್ದಾರೆ –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ‘ಅಮೃತ್ ಯೋಜನೆಯಡಿ 2024ರ ಒಲಿಂಪಿಕ್‌ಗೆ 75 ಕ್ರೀಡಾಪಟುಗಳನ್ನು ಕಳುಹಿಸಲು ತೀರ್ಮಾನ ಮಾಡಲಾಗಿದೆ ಎಂದು ಕ್ರೀಡೆ, ಯುವಜನ ಮತ್ತು ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.

ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಇಲಾಖೆಯಿಂದ ಶುಕ್ರವಾರ ಆರಂಭವಾದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಖಾಸಗಿ ಕಂಪನಿಗಳ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ ನಿಧಿಯಿಂದ (ಸಿಎಸ್‌ಆರ್) 150 ಕಂಪನಿಗೆ ಪತ್ರ ಬರೆದಿದ್ದು, 40 ಕಂಪನಿಗಳು ಮುಂದೆ ಬಂದಿವೆ. ಜಿಂದಾಲ್ ಕಂಪೆನಿಯವರು 50 ಮಕ್ಕಳನ್ನು ದತ್ತು ಪಡೆದಿದ್ದಾರೆ’ ಎಂದು ಹೇಳಿದರು.

ADVERTISEMENT

ಜಕ್ಕೂರು ವೈಮಾನಿಕ ತರಬೇತಿ ಪುನರಾರಂಭ:

‘ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಕೇಂದ್ರವನ್ನು ಪುನರಾರಂಭಿಸಲು ತೀರ್ಮಾನಿಸಿದ್ದು, ಈಗಾಗಲೇ 35 ವಿದ್ಯಾರ್ಥಿಗಳು ವೈಮಾನಿಕ ಚಾಲನಾ ತರಬೇತಿ ಪಡೆಯಲು ಪ್ರವೇಶ ಪಡೆದಿದ್ದಾರೆ. 7 ವಿಮಾನಗಳ ಉಪಕರಣಗಳು ಹಾಳಾಗಿದ್ದು, ಅವುಗಳನ್ನು ಮರುನಿರ್ಮಾಣ ಮಾಡಿ ಮೂರು ಪೈಲೆಟ್‌ಗಳನ್ನು ನೇಮಿಸಲಾಗುವುದು. 15 ದಿನಗಳಲ್ಲಿ ಕೇಂದ್ರದವನ್ನು ಸಜ್ಜುಗೊಳಿಸಿ 100 ಮಕ್ಕಳಿಗೆ ತರಬೇತಿ ಆರಂಭಿಸಲಾಗುವುದು’ ಎಂದು ಹೇಳಿದರು.

ರಾಜ್ಯದಲ್ಲಿ ಹುಡುಗಿಯರಿಗೆ ಪ್ರತ್ಯೇಕ ಕ್ರೀಡಾ ವಸತಿ ನಿಲಯಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡುವವರನ್ನು ಕರೆಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿಗೆ ಪೂರಕವಾಗಿ ವಸತಿ ನಿಲಯಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಸಂಬಂಧ ತಜ್ಞರನ್ನು ನೇಮಿಸಿದ್ದು, ಅವರ ವರದಿಯನ್ನು ಆಧರಿಸಿ ಅಭಿವೃದ್ಧಿಪಡಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಮೇಯರ್ ಎಸ್‌.ಟಿ.ವೀರೇಶ್, ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ ಗೌಡಪ್ಪ ಪಾಟೀಲ, ಖಜಾಂಚಿ ಆರ್.ಶ್ರೀನಿವಾಸ್, ರಾಜು ಲಿಂಗೇಶ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಸಿಇಒ ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀನಿವಾಸ್ ಬಿ ಹಾಗೂ ವಿವಿಧ ಜಿಲ್ಲೆಗಳ ಘಟಕದ ಅಧ್ಯಕ್ಷ ಪಾಲ್ಗೊಂಡಿದ್ದರು.

ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಾಲಾಕ್ಷಿ ಸ್ವಾಗತಿಸಿದರು.

ವೇತನ ಆಯೋಗ ಶಿಫಾರಸು ಮಾಡಲು ಆಗ್ರಹ

ದಾವಣಗೆರೆ: 2022ರ ವೇಳೆಗೆ ನೂತನ ವೇತನ ಆಯೋಗ ರಚಿಸಿ ಅದನ್ನು ಜಾರಿಗೊಳಿಸಲು ಶಿಫಾರಸು ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌. ಷಡಕ್ಷರಿ ಸರ್ಕಾರವನ್ನು ಆಗ್ರಹಿಸಿದರು.

ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಶುಕ್ರವಾರ ಆರಂಭವಾದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

‘ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಕಡಿಮೆ ಇದೆ. ಶೇ 12ರಿಂದ ಶೇ40ರಷ್ಟು ವ್ಯತ್ಯಾಸವಿದ್ದುಮ ಈ ತಾರತಮ್ಯ ಸರಿಪಡಿಸಬೇಕು. ವಿಶೇಷವಾಗಿ ಶಿಕ್ಷಕರಿಗೆ ಹಲವು ಸಮಸ್ಯೆಗಳು ಇದ್ದು, ಅವುಗಳನ್ನು ನಿವಾರಿಸಬೇಕು. ರಾಜ್ಯದಲ್ಲಿ 2.20 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ವೇತನ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿ ಮುಂದಿನ 3 ತಿಂಗಳಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸರ್ಕಾರಿ ನೌಕರರ ಬೃಹತ್ ಸಮಾವೇಶ ಆಯೋಜಿಸಲಾಗುವುದು’ ಎಂದು ಹೇಳಿದರು.

‘ಸರ್ಕಾರಿ ನೌಕರರಿಗೆ ಶೇ 3ರಷ್ಟು ತುಟ್ಟಿಭತ್ಯೆ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮನವಿ ಮಾಡಿ, ವಾರದಲ್ಲಿ ತುಟ್ಟಿಭತ್ಯೆ ಕೊಡಿಸುತ್ತೇನೆ‘ ಎಂದು ಭರವಸೆ ನೀಡಿದರು.

‘ಸರ್ಕಾರಿ ನೌಕರರ ಕುಟುಂಬಗಳ 25 ಲಕ್ಷ ಸದಸ್ಯರಿಗೆ ಯಾವುದೇ ಆಸ್ಪತ್ರೆಯಲ್ಲಾದರೂ ನಗದುರಹಿತ ಚಿಕಿತ್ಸೆ ಸಿಗಲಿದ್ದು, ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು’ ವಿಶ್ವಾಸ ವ್ಯಕ್ತಪಡಿಸಿದರು.

’ಈ ಹಿಂದೆ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ₹35 ಲಕ್ಷದಿಂದ ₹40 ಲಕ್ಷ ಅನುದಾನ ಸಿಗುತ್ತಿತ್ತು. ಇದು ಯಾವುದಕ್ಕೂ ಸಾಲುತ್ತಿರಲಿಲ್ಲ. ಇದರಿಂದ ಗಲಾಟೆಗಳು ಆಗುತ್ತಿದ್ದು, ಈಗ ಕ್ರೀಡಾ ಸಚಿವರು ₹2 ಕೋಟಿ ಅನುದಾನ ನೀಡಿದ್ದಾರೆ.

‘25 ವರ್ಷಗಳು ಆಗದ ಕೆಲಸ ಯಡಿಯೂರಪ್ಪ ಅವರ ಅವಧಿಯಲ್ಲಿ ಆಗಿದೆ. 18 ಸರ್ಕಾರಿ ಆದೇಶಗಳಾಗಿದ್ದು, ವೇತನ, ತುಟ್ಟಿಭತ್ಯೆ, ರಜೆ ನೀಡಲಾಗಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.