ADVERTISEMENT

80 ಗ್ರಾಂ ಗಾಂಜಾ ವಶಕ್ಕೆ: ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 3:44 IST
Last Updated 27 ಜನವರಿ 2021, 3:44 IST

ಹೊನ್ನಾಳಿ: ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದಲ್ಲಿ ಗಾಂಜಾ ಮಾರಲು ಯತ್ನಿಸುತ್ತಿದ್ದ ಮೂವರನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ.

ಸಂತೇಬೆನ್ನೂರಿನ ಜಾಕೀರ್ ಹುಸೇನ್ ಸಾಬ್, ಭದ್ರಾವತಿಯ ಅಬ್ದುಲ್ ಅಜೀಜ್‌ ಹಾಗೂ ಹೊನ್ನಾಳಿಯ ಕಾರ್ತಿಕ್ ಶ್ರೀನಿವಾಸ್ ಬಂಧಿತ ಆರೋಪಿಗಳು. ಗಾಂಜಾ ಮಾರಾಟಕ್ಕೆ ಬಳಸಿದ ಕಾರು ಹಾಗೂ 80 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಮೂವರು ಜ. 24ರಂದು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಎದುರು ಸ್ಯಾಂಟ್ರೋ ಕಾರಿನಲ್ಲಿ ಗಾಂಜಾ ಸೊಪ್ಪು ಇಟ್ಟುಕೊಂಡು ಮಾರಲು ಯತ್ನಿಸುತ್ತಿದ್ದರು ಎಂಬ ಖಚಿತ ಮಾಹಿತಿಯ ಮೇರೆಗೆ ಎಸ್‍ಐ ಬಸವನಗೌಡ ಬಿರಾದರ್ ಮತ್ತು ಪೊಲೀಸರ ತಂಡ ದಾಳಿ ನಡೆಸಿ ಅವರನ್ನು ಬಂಧಿಸಿದೆ ಎಂದು ಎಂದು ಸಿಪಿಐ ಟಿ.ವಿ. ದೇವರಾಜ್ ಹೇಳಿದರು.

ADVERTISEMENT

‘ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿ, ಇ–ಮೇಲ್ ಮೂಲಕ ಮನವಿ ಮಾಡಿ ದೂರು ದಾಖಲಿಸಿಕೊಳ್ಳಲಾಗಿದೆ. ತನಿಖೆ ಕೈಗೊಳ್ಳಲು ಅನುಮತಿ ಪಡೆದುಕೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

‘ಸರ್ಕಾರಿ ಪದವಿ ಕಾಲೇಜಿನ ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಆಗಾಗ ಆರೋಪ ಕೇಳಿ ಬರುತ್ತಿತ್ತು. ಶಿವಮೊಗ್ಗ ಹಾಗೂ ಭದ್ರಾವತಿಯಿಂದ ಗಾಂಜಾ ತಂದು ಪಟ್ಟಣದಲ್ಲಿಯ ಕೆಲ ಯುವಕರಿಗೆ ಹಾಗೂ ಕೆಲವು ಕಾಲೇಜ್ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು’ ಎಂದು ಅವರು ತಿಳಿಸಿದರು.

ದಾಳಿ ಸಂದರ್ಭದಲ್ಲಿ ಪೊಲೀಸರಾದ ಹೇಮರಾಜ್, ಶಂಕರಗೌಡ, ಗುರುಬಸಪ್ಪ, ರಮೇಶ್ ಹಾಗೂ ನಾಗರಾಜ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.