ADVERTISEMENT

ಬಣ್ಣದ ಓಕುಳಿಯಲ್ಲಿ ನೃತ್ಯದ ಅಬ್ಬರ

ದೇವನಗರಿ: ಹೋಳಿಯಲ್ಲಿ ಮಿಂದೆದ್ದ ಯುವಕರು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 13:55 IST
Last Updated 10 ಮಾರ್ಚ್ 2020, 13:55 IST
ಹೋಳಿ ಹಬ್ಬದ ಅಂಗವಾಗಿ ದಾವಣಗೆರೆಯ ರಾಮ್‌ ಅಂಡ್ ಕೋ ವೃತ್ತದಲ್ಲಿ ಯುವತಿಯರು ಡಿಜೆ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಹೋಳಿ ಹಬ್ಬದ ಅಂಗವಾಗಿ ದಾವಣಗೆರೆಯ ರಾಮ್‌ ಅಂಡ್ ಕೋ ವೃತ್ತದಲ್ಲಿ ಯುವತಿಯರು ಡಿಜೆ ಹಾಡಿಗೆ ನೃತ್ಯ ಮಾಡಿ ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಪಿಚಕಾರಿಯಲ್ಲಿ ನೀರಿನ ಕಚಗುಳಿ... ಪಡ್ಡೆ ಹುಡುಗರ ಮೈಮೇಲೆ ಬಣ್ದಗಳ ಮಜ್ಜನ.. ಡಿ.ಜೆ. ಸೌಂಡ್ ಅಬ್ಬರಕ್ಕೆ ಹುಚ್ಚೆದ್ದು ಕುಣಿದ ಯುವಕ–ಯುವತಿಯರು..

–ಇವು ನಗರದ ರಾಮ್ ಆ್ಯಂಡ್ ಕೊ ವೃತ್ತದಲ್ಲಿ ಕಂಡು ಬಂದ ದೃಶ್ಯಗಳು. ಹೋಳಿ ಹಬ್ಬದ ಅಂಗವಾಗಿ ಇಡೀ ವೃತ್ತ ಅಕ್ಷರಶಃ ಬಣ್ಣದೋಕುಳಿಯಲ್ಲಿ ಮಿಂದು ಹೋಗಿತ್ತು. ಅಕ್ಕಪಕ್ಕದ ರಸ್ತೆಗಳು ಬಣ್ಣಗಳಿಂದ ಅದ್ದಿದಂತಾಗಿದ್ದವು. ಸೋಮವಾರ ರಾತ್ರಿ ಕಾಮದಹನದೊಂದಿಗೆ ಹೋಳಿ ಹಬ್ಬಕ್ಕೆ ಚಾಲನೆ ಸಿಕ್ಕಿದ್ದು, ಮಂಗಳವಾರ ಸಂಭ್ರಮ ಮನೆ ಮಾಡಿತ್ತು.

ಕಣ್ಣಿಗೊಂದು ಕೂಲಿಂಗ್ ಗ್ಲಾಸ್‌, ಬಾಯಲ್ಲಿ ಪೀಪಿ ಊದುತ್ತಾ ವಿವಿಧ ಬಡಾವಣೆಗಳ ಯುವಕರು ತ್ರಿಬಲ್‌ ರೈಡಿಂಗ್‌ನಲ್ಲಿ ರಸ್ತೆಯುದ್ದಕ್ಕೂ ಸ್ನೇಹಿತರಿಗೆ ಬಣ್ಣ ಹಚ್ಚುತ್ತಾ ಬೈಕ್‌ಗಳಲ್ಲಿ ರಾಮ್‌ ಅಂಡ್ ಕೊ ವೃತ್ತದಲ್ಲಿ ಜಮಾಯಿಸಿದ ಸಾವಿರಾರು ಯುವಕ–ಯುವತಿಯರು ಹಬ್ಬಕ್ಕೆ ವಿಶೇಷ ಮೆರುಗು ನೀಡಿದರು. ಈ ಓಕುಳಿಯಾಟವನ್ನು ಕಣ್ತುಂಬಿಕೊಳ್ಳಲು ನಗರದ ವಿವಿಧೆಡೆಯಿಂದ ಜನ ಸಾಗರೋಪಾದಿಯಲ್ಲಿ ಬರುತ್ತಲೇ ಇದ್ದರು.

ADVERTISEMENT

ಪೈಪ್‌ನಲ್ಲಿ ಹುಡುಗರ ಮೇಲೆ ನೀರು ಹಾರಿಸುತ್ತಿದ್ದರೆ, ಹುಡುಗಿಯರ ಮೇಲೆ ತುಂತುರು ನೀರು ಬೀಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ಗ್ಯಾಸ್ ಮೂಲಕ ಬೆಂಕಿಯನ್ನು ಉಗುಳುವಂತೆ ಮಾಡಿದ್ದರು. ಡಿಜೆಯಿಂದ ತೇಲಿ ಬರುತ್ತಿದ್ದ ಹಾಡುಗಳಿಗೆ ಯುವಕ–ಯುವತಿಯರು ಹೆಜ್ಜೆ ಹಾಕಿದರು. ದರ್ಶನ್ ಅಭಿನಯದ ಯಜಮಾನ ಚಿತ್ರದ ‘ಬಸಣ್ಣಿ ಬಾ’, ವಿಲನ್ ಚಿತ್ರದ ‘ಅಣ್ಣಾ ನನ್ನ ಊರು, ಅಣ್ಣಾ ನನ್ನ ಹೆಸರು’ ಸೇರಿ ವಿವಿಧ ಚಿತ್ರಗಳ ಹಾಡಿಗೆ ನೃತ್ಯ ಪ್ರದರ್ಶಿಸಿದರು. ಕೆಲವರು ನೃತ್ಯದ ಅಮಲಿನಲ್ಲಿ ಬಾಲಕರನ್ನು ಮೇಲಕ್ಕೆ ಎಸೆದು ಸಂಭ್ರಮಿಸಿದರೆ, ಮತ್ತೆ ಕೆಲವರು ಯುವಕರ ಭುಜದ ಮೇಲೆ ನಿಂತು ನೃತ್ಯ ಪ್ರದರ್ಶಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

ಸ್ನೇಹಿತರ ತಲೆ ಮೇಲೆ ಕೋಳಿ ಮೊಟ್ಟೆ ಹೊಡೆದು ಮಜ್ಜಿಗೆಯ ಪ್ಯಾಕೆಟ್ ಅನ್ನು ಸುರಿದು ಖುಷಿಪಟ್ಟರು. ನೃತ್ಯದ ಅಬ್ಬರ ರಂಗೇರುತ್ತಿದ್ದಂತೆ ಪಡ್ಡೆ ಹುಡುಗರು ಅಂಗಿಯನ್ನು ಹರಿದು ಮೇಲಕ್ಕೆ ಎಸೆಯುತ್ತಿದ್ದರು. ವಿದ್ಯುತ್‌ ತಂತಿಗೆ ಸಿಲುಕಿಕೊಂಡ ನೂರಾರು ಅಂಗಿಗಳು ತೋರಣದಂತೆ ಕಂಡುಬಂದವು. ಪಡ್ಡೆ ಹುಡುಗರು ಶರ್ಟ್‌ ಬಿಚ್ಚಿಹಾಕಿ ಅರೆ ಬೆತ್ತಲಾಗಿ ಕೇಕೆ ಹಾಕುತ್ತ ಬೈಕ್‌ನಲ್ಲಿ ಸಾಗುವ ಮೂಲಕ ಸಾರ್ವಜನಿಕರಿಗೆ ಮುಜುಗರ ಮೂಡಿಸಿದರು.

ಜೆ.ಜೆ.ಎಂ. ವೈದ್ಯಕೀಯ ಕಾಲೇಜ್‌, ಯುಬಿಡಿಟಿ ಕಾಲೇಜು, ಬಿಐಇಟಿ ಕಾಲೇಜು ಸೇರಿ ವಿವಿಧ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸಂಭ್ರಮದಿಂದ ಬಣ್ಣದಾಟದಲ್ಲಿ ತೊಡಗಿದ್ದರು. ಕೋವಿಡ್–19 ಭೀತಿಯಿದ್ದರೂ ಅದನ್ನು ಲೆಕ್ಕಿಸದೇ ಜನರು ರಂಗಿನಾಟದಲ್ಲಿ ಮಿಂದೆದ್ದರು. ನಗರದ ವಿವಿಧ ಬೀದಿಗಳಲ್ಲಿ ಹೋಳಿ ಹಬ್ಬ ಕಳೆಗಟ್ಟಿತ್ತು. ಕೆಲವು ಬಡಾವಣೆಗಳಲ್ಲಿ ಕುಟುಂಬದ ಸದಸ್ಯರು ಹಾಡು ಹಾಕಿಕೊಂಡು ನೃತ್ಯ ಮಾಡಿ ಸಂಭ್ರಮಿಸಿದರು.

ನಗರದ ಪಿ.ಜೆ ಬಡಾವಣೆ, ಎಂಸಿಸಿ ಬಿ ಬ್ಲಾಕ್‌, ವಿನೋಬನಗರ, ವಿದ್ಯಾನಗರ, ಶಿವಕುಮಾರಸ್ವಾಮಿ ಬಡಾವಣೆ, ಬಿಐಇಟಿ ರಸ್ತೆ, ನಿಜಲಿಂಗಪ್ಪ ಬಡಾವಣೆ, ಬಿಡಿಟಿ ರಸ್ತೆ, ಮೆಡಿಕಲ್‌ ಕಾಲೇಜು ಹಾಸ್ಟೆಲ್‌ ರಸ್ತೆ, ಸಿದ್ದವೀರಪ್ಪ ಬಡಾವಣೆ, ಗಡಿಯಾರ ಕಂಬ, ಹಳೆ ದಾವಣಗೆರೆ, ಆಂಜನೇಯ ಬಡಾವಣೆ, ಪಿಸಾಳೆ ಕಾಂಪೌಂಡ್‌, ಗಾಂಧಿ ವೃತ್ತ, ವಿನೋಬನಗರ, ಕಾಯಿಪೇಟೆ, ನಿಟ್ಟುವಳ್ಳಿಯಲ್ಲಿ ಹೋಳಿ ಆಚರಣೆ ಜೋರಾಗಿತ್ತು.

ಸೆಲ್ಫಿ ಸಂಭ್ರಮ

ಬಣ್ಣದೊಂದಿಗೆ ಆಟವಾಡಿದ ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಲು ತಮ್ಮ ಸಹಪಾಠಿಗಳ ಜತೆ ಸೆಲ್ಫಿ ತೆಗೆದುಕೊಂಡರು. ಬಣ್ಣ ಎರಚುವುದು, ಸ್ನೇಹಿತರೊಂದಿಗೆ ಕಳೆದ ಕ್ಷ ಣಗಳನ್ನು ಮೊಬೈಲ್‌ಗಳನ್ನು ಸೆರೆ ಹಿಡಿಯುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು.

ಬಿಗಿ ಭದ್ರತೆ : ಹೋಳಿ ಆಚರಣೆ ಹಿನ್ನೆಲೆಯಲ್ಲಿ ನಗರಾದ್ಯಂತ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿತ್ತು. ಎಲ್ಲೆಡೆ ಪೊಲೀಸರು ಗಸ್ತು ತಿರುಗಿದರು. ಬಿಐಇಟಿ ರಸ್ತೆಯಲ್ಲಿ ಕರ್ಕಶ ಶಬ್ದ ಮಾಡುತ್ತಾ ಬೈಕ್‌ನಲ್ಲಿ ತ್ರಿಬಲ್‌ ರೈಡಿಂಗ್‌ ಬರುತ್ತಿದ್ದವರನ್ನು ಪೊಲೀಸರು ಹಿಡಿದರು. ಶಬ್ಧ ಮಾಡುತ್ತಿದ್ದ ಪೀಪಿಗಳನ್ನು ಕಿತ್ತುಕೊಂಡರು. ಎಲ್ಲೆಂದರಲ್ಲಿ ಪಾರ್ಕಿಂಗ್‌ ವಾಹನಗಳನ್ನು ಸಂಚಾರ ಪೊಲೀಸರು ಬೈಕ್‌ಗಳನ್ನು ಸಾಗಿಸಿದರು.

ಶಾರದಾಂಬ ಸ್ನೇಹಿತರ ಬಳಗದಿಂದ ಹರ್ಬಲ್ ಹೋಳಿ

ಎಸ್‌ಎಸ್‌ ಲೇಔಟ್ ಕುಂದವಾಡ ಕೆರೆ ರಸ್ತೆಯ ಬಳಿ ಶಾರದಾಂಬ ಸ್ನೇಹಿತರ ಬಳಗದ ಸದಸ್ಯೆಯರು ಬಣ್ಣಗಳನ್ನು ಬಳಸದೇ ವಿಶಿಷ್ಟವಾಗಿ ಹರ್ಬಲ್ ಹೋಳಿ ಆಚರಿಸಿದರು.

ತರಕಾರಿ, ಹಣ್ಣು, ಸೊಪ್ಪುಗಳಿಂದ ಪೇಸ್ಟ್ ತಯಾರಿಸಿ ಅವುಗಳನ್ನು ಮುಖಕ್ಕೆ ಬಳಿದುಕೊಂಡು ಸಂಭ್ರಮಿಸಿದರು. ಟೊಮೆಟೊ, ಕ್ಯಾರೆಟ್, ಬೀಟ್‌ರೂಟ್‌, ಸೌತೇಕಾಯಿಗಳೇ ಬಣ್ಣಗಳನ್ನು ಬಿಂಬಿಸಿದವು. ಅಕ್ಕಿ ಹಾಗೂ ಕಡಲೆ ಹಿಟ್ಟು ಕಲ್ಲಂಗಡಿ, ಬಾಳೆಹಣ್ಣುಗಳು, ದಾಸವಾಳದ ಎಲೆ, ಲೋಳೆಸರ ಎಲ್ಲವನ್ನೂ ಮಿಶ್ರಣ ಮಾಡಿ ನೀರಿನಲ್ಲಿ ಮಿಶ್ರಣ ಮಾಡಿ ಪರಸ್ಪರ ಅದ್ದಿಕೊಂಡು ಹೋಳಿ ಆಚರಿಸಿದರು.

‘ತರಕಾರಿ ಹಾಗೂ ಹಣ್ಣುಗಳು ದೇಹಕ್ಕೆ ಹಾಗೂ ಚರ್ಮಕ್ಕೆ ಕಾಂತಿಯನ್ನು ನೀಡಲಿದ್ದು, ಯಾವುದೇ ಹಾನಿಯಾಗುವುದಿಲ್ಲ. ಚೈನಾದಿಂದ ತಯಾರಿಸಿದ ಬಣ್ಣಗಳನ್ನು ಬಳಸುವುದಕ್ಕಿಂತ ನೈಸರ್ಗಿಕವಾಗಿ ತಯಾರಿಸಿದ ಬಣ್ಣವನ್ನು ಬಳಸುವುದರಿಂದ ಮುಖಕ್ಕೆ ಕಾಂತಿಯುತವಾಗುತ್ತವೆ. ತೊಳೆಯುವುದು ಸುಲಭ, ಕಡಿಮೆ ನೀರು ಖರ್ಚು ಆಗುತ್ತದೆ. 10 ವರ್ಷಗಳಿಂದ ಹರ್ಬಲ್ ಹೋಳಿಯನ್ನು ಆಚರಿಸುತ್ತಿದ್ದೇವೆ’ ಎನ್ನುತ್ತಾರೆ ಸಂಘದ ಸೌಮ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.