ADVERTISEMENT

ಖಾಸಗಿ ಆಸ್ಪತ್ರೆಗಳ ನಿಗಾಕ್ಕೆ ಐದು ತಂಡ: ಸಚಿವ ಬೈರತಿ ಬಸವರಾಜ

ರೋಗಿಗಳಿಗೆ ತೊಂದರೆಯಾಗದಿರಲು ಕ್ರಮ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 13:42 IST
Last Updated 27 ಜುಲೈ 2020, 13:42 IST
ಬೈರತಿ ಬಸವರಾಜ
ಬೈರತಿ ಬಸವರಾಜ   

ದಾವಣಗೆರೆ: ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯಬೇಕು. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಬಾರದು. ಅದಕ್ಕಾಗಿ ಐದು ತಂಡಗಳನ್ನು ರಚಿಸಿ ಆಸ್ಪತ್ರೆಗಳ ಮೇಲೆ ನಿಗಾ ಇಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ತಿಳಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಪ್ರಯುಕ್ತ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದರು.

‘ಭಾನುವಾರ ಮೃತಪಟ್ಟಿರುವ ಕುಮಾರ್‌ ಪೌರ ಕಾರ್ಮಿಕರಲ್ಲ. ಅವರ ತಾಯಿ ಪೌರಕಾರ್ಮಿಕರು. ಕುಮಾರ್‌ ಮ್ಯಾನ್ಯುವಲ್‌ ಸ್ಕ್ಯಾವೆಂಜರ್‌ ಆಗಿದ್ದು, ಪಾಲಿಕೆಯ ಅಧೀನದ ಉದ್ಯೋಗಿ ಅಲ್ಲ. ಹಾಗಾಗಿ ಅವರಿಗೆ ಸರ್ಕಾರದ ನಿಯಮದಡಿ ಪರಿಹಾರ ಒದಗಿಸಲು ಅವಕಾಶ ಇದೆಯೇ ಎಂದು ಪರಿಶೀಲಿಸಿ, ಅವಕಾಶ ಇದ್ದರೆ ಒದಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ADVERTISEMENT

ಕೊರೊನೇತರ ರೋಗಿಗಳಿಗೆ ಚಿಕಿತ್ಸೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

‘ಕೊರೊನಾಕ್ಕೆ ಉಚಿತ ಚಿಕಿತ್ಸೆ’

ಜಿಲ್ಲಾ ಆಸ್ಪತ್ರೆ ಅಥವಾ ಜಿಲ್ಲಾಧಿಕಾರಿ ಅವರ ಶಿಫಾರಸ್ಸಿನಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್‌ ಸೋಂಕಿಗೆ ಚಿಕಿತ್ಸೆ ಪಡೆದರೆ ಅವರ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಅವರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ ಎಂದು ಸಚಿವ ಬೈರತಿ ಬಸವರಾಜ ಸ್ಪಷ್ಟಪಡಿಸಿದರು.

ಕೊರೊನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕ ವೆಚ್ಚ ವಿಧಿಸಲಾಗುತ್ತಿದೆ ಎಂಬ ಆರೋಪದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.