ADVERTISEMENT

ಮತದಾರರ ಆರೋಗ್ಯಕರ ಪಟ್ಟಿಗಾಗಿ ಆಧಾರ್‌ ಲಿಂಕ್‌

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:19 IST
Last Updated 28 ಜನವರಿ 2023, 6:19 IST
‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿದರು –ಪ್ರಜಾವಾಣಿ ಚಿತ್ರ
‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಒಬ್ಬ ವ್ಯಕ್ತಿಯ ಹೆಸರು ಒಂದಕ್ಕಿಂತ ಹೆಚ್ಚು ಕಡೆ ಇರುವುದನ್ನು ಪತ್ತೆ ಮಾಡಿ, ಮತದಾರರ ಆರೋಗ್ಯಕರ ಪಟ್ಟಿಯನ್ನು ಸಿದ್ಧಪಡಿಸಲು ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಲಿಂಕ್‌ ಮಾಡಲು ಚುನಾವಣಾ ಆಯೋಗ ಮುಂದಾಗಿದೆ. ಆಧಾರ್‌ ಲಿಂಕ್‌ ಮಾಡದಿದ್ದರೂ ಮತದಾನ ಮಾಡಲು ಸದ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ, ಮತದಾರರ ಗುರುತಿನ ಚೀಟಿ, ಮತದಾನ ಹಾಗೂ ಚುನಾವಣೆಗೆ ಸಂಬಂಧಿಸಿದಂತೆ ಶುಕ್ರವಾರ ಹಮ್ಮಿಕೊಂಡಿದ್ದ ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ನಾಗರಿಕರು ಕೇಳಿದ ಪ್ರಶ್ನೆಗಳಿಗೆ ಜಿಲ್ಲಾಧಿಕಾರಿ ಉತ್ತರಿಸುವ ಮೂಲಕ ಗೊಂದಲ ನಿವಾರಿಸಿದರು.

‘ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಲಿಂಕ್‌ ಮಾಡುವುದರಿಂದ ಏನು ಪ್ರಯೋಜನವಾಗಲಿದೆ? ಲಿಂಕ್‌ ಮಾಡದಿದ್ದರೆ ಮತದಾನ ಮಾಡಲು ಸಾಧ್ಯವಿಲ್ಲವೇ’ ಎಂದು ಜಗಳೂರಿನ ಕಲ್ಲೇಶ್‌ರಾಜ್‌ ಪಾಟೀಲ್‌, ಹರಿಹರ ತಾಲ್ಲೂಕಿನ ಮಲ್ಲನಾಯಕನಹಳ್ಳಿಯ ರಾಜಪ್ಪ, ಕೆ.ಬೇವಿನಹಳ್ಳಿಯ ಮಹೇಶ್‌ ಅವರು ಪ್ರಶ್ನೆ ಕೇಳಿದರು.

ADVERTISEMENT

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ‘ಕೆಲ ಮತದಾರರು ತಮ್ಮ ವಾಸಸ್ಥಳ ಬದಲಾಯಿಸಿದಾಗ, ಅಲ್ಲಿನ ಮತದಾರರ ಪಟ್ಟಿಯಲ್ಲೂ ಹೆಸರು ಸೇರಿಸಿಕೊಳ್ಳುತ್ತಿದ್ದಾರೆ. ಮೊದಲಿದ್ದ ಪಟ್ಟಿಯಲ್ಲಿ ಹೆಸರನ್ನು ತೆಗೆಸಿರುವುದಿಲ್ಲ. ಇದರಿಂದ ಒಬ್ಬರ ಹೆಸರು ಎರಡು–ಮೂರು ಕಡೆ ಇರುವಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಇಂತಹ ಕಡೆ ಬೇರೆ ವ್ಯಕ್ತಿಗಳು ಅಕ್ರಮವಾಗಿ ಮತ ಚಲಾಯಿಸುವ ಸಾಧ್ಯತೆಗಳಿವೆ. ಹೀಗಾಗಿ, ಎರಡು–ಮೂರು ಕಡೆ ಇರುವ ಹೆಸರನ್ನು ಪತ್ತೆ ಮಾಡಿ, ಒಂದೇ ಕಡೆ ಹೆಸರು ಇರುವಂತೆ ನೋಡಿಕೊಳ್ಳಲು ಚುನಾವಣಾ ಆಯೋಗವು ಮತದಾರರ ಗುರುತಿನ ಚೀಟಿಗೆ ಆಧಾರ್‌ ಲಿಂಕ್‌ ಮಾಡಲು ಮುಂದಾಗಿದೆ. ನಾವು ಸಂಗ್ರಹಿಸಿದ ಆಧಾರ್‌ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆಧಾರ್‌ ಲಿಂಕ್‌ ಆಗಿಲ್ಲ ಎಂದು ಭಯ ಪಡಬೇಕಾಗಿಲ್ಲ. ಸದ್ಯದ ಆದೇಶದ ಪ್ರಕಾರ ಆಧಾರ್‌ ಲಿಂಕ್‌ ಆಗದಿದ್ದರೂ ಮತ ಚಲಾಯಿಸುವ ಸಂಪೂರ್ಣ ಅಧಿಕಾರ ಮತದಾರರಿಗೆ ಇರಲಿದೆ’ ಎಂದು ಸ್ಪಷ್ಟಪಡಿಸಿದರು.

‘ಜನಗಣತಿ ಆಧಾರದಲ್ಲಿ ಲೆಕ್ಕಹಾಕಿದಾಗ ಸಾಮಾನ್ಯವಾಗಿ ಒಟ್ಟು ಜನಸಂಖ್ಯೆಯಲ್ಲಿ ಶೇ 75ರಷ್ಟು ಜನ ಮತದಾನದ ಹಕ್ಕು (ಎಲೆಕ್ಟ್ರೋಲ್‌ ಪಾಪ್ಯುಲೇಷನ್‌ ರೇಷಿಯೊ) ಹೊಂದಿರುವುದು ವಾಡಿಕೆ. 2022ರ ಜನವರಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಪರಿಶೀಲಿಸಿದಾಗ ಇ.ಪಿ. ರೇಷಿಯೊ ಶೇ 83ರಷ್ಟು ಇತ್ತು. ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಲಿಂಕ್ ಮಾಡಿದ್ದರಿಂದ ಇದೀಗ ಇ.ಪಿ. ರೇಷಿಯೊ ಶೇ 74.68ಕ್ಕೆ ಬಂದಿದೆ. ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ 81ರಷ್ಟು
ಆಧಾರ್‌ ಲಿಂಕ್‌ ಕಾರ್ಯ ಪೂರ್ಣಗೊಂಡಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.