ADVERTISEMENT

ದಾವಣಗೆರೆ: ಮೇಲೆ ರಾಯಣ್ಣನ ಹೆಸರು, ಕೆಳಗೆ ಅರಸು ಪ್ರತಿಮೆ

ಇದರಲ್ಲಿ ಗೊಂದಲವಿಲ್ಲ, ಭಾವೈಕ್ಯದ ಪ್ರತೀಕ: ಧೂಡಾ ಅಧ್ಯಕ್ಷರ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 5:00 IST
Last Updated 16 ಜುಲೈ 2021, 5:00 IST
ದಾವಣಗೆರೆ ಬಿಎಸ್‌ಎನ್‌ಎಲ್‌ ಕಚೇರಿ ಎದುರು ಇರುವ ಮೇಲ್ಸೇತುವೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿನ ದ್ವಾರ ಹಾಗೂ ಅದರ ಕೆಳಗೆ ದೇವರಾಜ ಅರಸು ಪ್ರತಿಮೆಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ ಬಿಎಸ್‌ಎನ್‌ಎಲ್‌ ಕಚೇರಿ ಎದುರು ಇರುವ ಮೇಲ್ಸೇತುವೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿನ ದ್ವಾರ ಹಾಗೂ ಅದರ ಕೆಳಗೆ ದೇವರಾಜ ಅರಸು ಪ್ರತಿಮೆಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೇಲುಸೇತುವೆ’ ಎಂಬ ಬೃಹತ್‌ ಫಲಕ ಮೇಲೆ ಕಾಣಿಸುತ್ತಿದ್ದರೆ, ಅದರ ಅಡಿಯಲ್ಲಿ ದೇವರಾಜ ಅರಸು ಪ್ರತಿಮೆ ಇದೆ. ಇತಿಹಾಸದ ಅರಿವಿಲ್ಲದವರು ತಟ್ಟನೇ ಆ ಪ್ರತಿಮೆಯನ್ನೇ ಸಂಗೊಳ್ಳಿ ರಾಯಣ್ಣ ಎಂದು ಭಾವಿಸುವ ಅಪಾಯ, ಗೊಂದಲಕ್ಕೆ ಈಡಾಗುವ ಸಾಧ್ಯತೆಗೆ ಇದು ಅವಕಾಶವಾಗಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯೂ ಇದೆ. ಅದು ಈ ನಾಮಫಲಕದ ಎದುರು ರಿಂಗ್‌ರಸ್ತೆಯಲ್ಲಿದೆ. ಇವೆಲ್ಲವೂ ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವಂಥವುಗಳಾಗಿವೆ.

‘ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿದವರು. ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾಗಿ ಹಿಂದುಳಿದ ವರ್ಗದವರಿಗೆ ಶಕ್ತಿ ತುಂಬಿದವರು. ಇಬ್ಬರೂ ರಾಷ್ಟ್ರೀಯ ಪುರುಷರು. ಒಂದೇ ವೃತ್ತದಲ್ಲಿ ಯಾರೇ ಇಬ್ಬರ ಪ್ರತಿಮೆ ಬೇರೆಲ್ಲೂ ಕಾಣ ಸಿಗದು. ಇಂಥ ಭಾವೈಕ್ಯ ದಾವಣಗೆರೆಯಲ್ಲಿ ಮಾತ್ರ ಇದೆ. ಅದರಲ್ಲಿ ಹುಳುಕು ಹುಡುಕಬಾರದು’ ಎಂದು ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಸಂಗೊಳ್ಳಿ ರಾಯಣ್ಣನ ಹೆಸರು ನೋಡಿದ ತಕ್ಷಣ ಅವರ ಚಿತ್ರ, ಸಾಧನೆ, ಇತಿಹಾಸ ಕಣ್ಣ ಮುಂದೆ ಬರಬೇಕು. ಅರಸು ಪ್ರತಿಮೆ ಕಂಡ ತಕ್ಷಣ ಅವರ ಸಾಧನೆ, ಇತಿಹಾಸಗಳು ಮನದಲ್ಲಿ ಮೂಡಬೇಕು. ಮುಂದಿನ ಪೀಳಿಗೆಗೆ ಗೊಂದಲ ಆಗುತ್ತದೆ ಎಂಬುದರ ಅರ್ಥವೇ ನಾವು ಅಂಥ ಶಿಕ್ಷಣವನ್ನು ಮಕ್ಕಳಿಗೆ ನೀಡುವುದಿಲ್ಲ ಎಂದಾಗುತ್ತದೆ ಎಂದು ವಿವರಿಸಿದರು.

ಇದು ಸಂಗೊಳ್ಳಿ ರಾಯಣ್ಣನ ವೃತ್ತ. ಇಲ್ಲಿ ರಾಯಣ್ಣನ ಪ್ರತಿಮೆ ಮಾತ್ರ ಇತ್ತು. ಅರಸು ಅವರ ಪ್ರತಿಮೆ ಧೂಡಾ ಕಚೇರಿ ಬಳಿ ಇತ್ತು. ಮೇಲುಸೇತುವೆ ನಿರ್ಮಾಣ ಮಾಡುವಾಗ ಅರಸು ಪ್ರತಿಮೆಯನ್ನು ತೆಗೆದು ಧೂಡಾ ಕಚೇರಿಯಲ್ಲಿ ಇಡಲಾಗಿತ್ತು. ಸೇತುವೆ ಕಾಮಗಾರಿ ಮುಗಿದ ಬಳಿಕ ಅದನ್ನು ವೃತ್ತದಲ್ಲಿ ಇಡಲು ನಿರ್ಧರಿಸಲಾಗಿತ್ತು. ಅದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಎಲ್ಲರನ್ನು ಕರೆಸಿ, ಮನವರಿಕೆ ಮಾಡಿದ ಮೇಲೆ ಅರಸು ಪ್ರತಿಮೆ ಇಡಲು ಎಲ್ಲರೂ ಒಪ್ಪಿದ್ದರು. ಅರಸು ಪ್ರತಿಮೆ ಇಡಲು ಧೂಡಾದವರು ಹಿಂದೆ ಈ ವೃತ್ತದಲ್ಲಿ ಮೊದಲೇ ಅಡಿಪಾಯ ನಿರ್ಮಿಸಿದ್ದರಿಂದ ಅಲ್ಲಿಯೇ ಪ್ರತಿಮೆ ಪ್ರತಿಷ್ಠಾಪಿಸಬೇಕಾಯಿತು. ರಾಯಣ್ಣ ಮತ್ತು ಅರಸು ಬಗ್ಗೆ ಈ ಮೂಲಕವಾದರೂ ಮುಂದಿನ ಪೀಳಿಗೆ ತಿಳಿದುಕೊಳ್ಳುವಂತಾಗಬೇಕು ಎಂದು ಅವರು ಸ್ಪಷ್ಟಪಡಿಸಿದರು.

‘ಈ ಬಗ್ಗೆ ಮೊದಲೇ ಧೂಡಾ ಆಯುಕ್ತರಿಗೆ, ಅಧ್ಯಕ್ಷರಿಗೆ ತಿಳಿಸಿದ್ದೆವು. ನೀವೇ ವಿರೋಧಿಸಿದರೆ ಹೇಗೆ ಎಂದು ಆಗ ನಮಗೆ ಹೇಳಿದ್ದರು. ಈಗ ರಾಯಣ್ಣ ಮತ್ತು ಅರಸು ಪ್ರತಿಮೆಗಳು ಎದುರು ಬದುರಾಗಿ ಇವೆ. ಅವುಗಳನ್ನು ಪರಸ್ಪರ ಬದಲಾಯಿಸಿದರೆ ರಾಯಣ್ಣನ ಹೆಸರಿನ ಕೆಳಗೆ ರಾಯಣ್ಣನ ‍ಪ್ರತಿಮೆಯೇ ಬರುತ್ತದೆ ಎಂಬುದು ನಿಜ. ಆದರೆ ಅದು ಸುಲಭದಲ್ಲಿ ಆಗುವಂಥದ್ದಲ್ಲ. ಹಾಗಾಗಿ ಈಗ ಇರುವುದನ್ನೇ ಒಪ್ಪಿಕೊಳ್ಳಬೇಕು. ಅರಸು ಪ್ರತಿಮೆಯ ಬಳಿ ಅರಸು ಹೆಸರು ಕಾಣುವಂತೆ ಬರೆಸಬೇಕು. ಇದೊಂದೇ ಈಗಿರುವ ಪರಿಹಾರ’ ಎನ್ನುತ್ತಾರೆ ಹೋರಾಟಗಾರ ಪಿ. ರಾಜ್‌ಕುಮಾರ್‌.

***

ಯಾವ ಗೊಂದಲವೂ ಉಂಟಾಗುವುದಿಲ್ಲ. ಜನರಿಗೆ ಸಂಗೊಳ್ಳಿ ರಾಯಣ್ಣ ಅಂದರೆ ಯಾರು? ದೇವರಾಜ ಅರಸು ಅಂದರೆ ಯಾರು? ಎಂಬುದು ಗೊತ್ತಿದೆ

- ಬೈರತಿ ಬಸವರಾಜ, ಜಿಲ್ಲಾ ಉಸ್ತುವಾರಿ ಸಚಿವ

***

ಸಂಗೊಳ್ಳಿ ರಾಯಣ್ಣ, ದೇವರಾಜ ಅರಸು ಇಬ್ಬರೂ ಈ ದೇಶಕ್ಕಾಗಿ ದುಡಿದವರು. ನೋಡುವ ದೃಷ್ಟಿ ಸರಿ ಇದ್ದರೆ ಯಾವ ಗೊಂದಲವೂ ಉಂಟಾಗುವುದಿಲ್ಲ.

- ರಾಜನಹಳ್ಳಿ ಶಿವಕುಮಾರ್‌, ಧೂಡಾ ಅಧ್ಯಕ್ಷ

***

ದೇವರಾಜ ಅರಸು ಎಂಬ ನಾಮಫಲಕವನ್ನು ಅವರ ಪ್ರತಿಮೆ ಬಳಿ ಸ್ವಲ್ಪ ದೊಡ್ಡದಾಗಿ ಹಾಕಬೇಕು. ಆಗ ಗೊಂದಲ ಉಂಟಾಗುವುದು ತಪ್ಪಲಿದೆ.

- ಪಿ.ರಾಜ್‌ಕುಮಾರ್‌, ಹೋರಾಟಗಾರ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.