ADVERTISEMENT

ಉಪ ನೋಂದಣಾಧಿಕಾರಿ ಕಚೇರಿಗೆ ಮಧ್ಯವರ್ತಿ ಬಂದರೆ ಕ್ರಮ

ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 4:34 IST
Last Updated 28 ಸೆಪ್ಟೆಂಬರ್ 2022, 4:34 IST
ದಾವಣಗೆರೆಯ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ತಹಶೀಲ್ದಾರ್ ಬಸನಗೌಡ ಕೋಟೂರ, ಭೂಸ್ವಾಧೀನಾಧಿಕಾರಿ ಭಾವನಾ ಬಸವರಾಜ, ರೈತ ಮುಖಂಡರಾದ ಬಲ್ಲೂರು ರವಿಕುಮಾರ್, ಸತೀಶ್ ಕೊಳೇನಹಳ್ಳಿ ಇದ್ದಾರೆ –ಪ್ರಜಾವಾಣಿ ಚಿತ್ರ
ದಾವಣಗೆರೆಯ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ತಹಶೀಲ್ದಾರ್ ಬಸನಗೌಡ ಕೋಟೂರ, ಭೂಸ್ವಾಧೀನಾಧಿಕಾರಿ ಭಾವನಾ ಬಸವರಾಜ, ರೈತ ಮುಖಂಡರಾದ ಬಲ್ಲೂರು ರವಿಕುಮಾರ್, ಸತೀಶ್ ಕೊಳೇನಹಳ್ಳಿ ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ನಗರದ ಉಪ ನೋಂದಣಾಧಿಕಾರಿ ಕಚೇರಿಯೊಳಗೆ (ಸಬ್‌ ರಿಜಿಸ್ಟ್ರಾರ್ ಕಚೇರಿಗೆ) ನೋಂದಣಿಗೆ ಸಂಬಂಧಪಟ್ಟವರು ಮಾತ್ರ ಒಳಪ್ರವೇಶಿಸಬೇಕು. ಮಧ್ಯವರ್ತಿಗಳು ಪ್ರವೇಶಿಸಿದರೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಎಚ್ಚರಿಕೆ ನೀಡಿದರು.

ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

‘ಅಣಬೇರು ಗ್ರಾಮದ ನಿವಾಸಿ ಗಂಗಮ್ಮ ಅವರು ಜಮೀನಿನ ಪೋಡಿಗಾಗಿ ಅರ್ಜಿ ಕೊಟ್ಟಿದ್ದು, ಸರ್ವೆಯ ಬಳಿಕ ‘ಪಹಣಿ ಹಾಗೂ ಹೊಲದ ಅಳತೆಯಲ್ಲಿ ವ್ಯತ್ಯಾಸವಿದೆ‌’ ಎಂದು ಹೇಳಿ ಹಲವು ಬಾರಿ ಅಧಿಕಾರಿಗಳು ಕಚೇರಿಗೆ ಅಲೆಸಿದ್ದಾರೆ. ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಲಂಚ ಪಡೆಯಲು ಪರ್ಯಾಯ ಕೊಠಡಿ ಮಾಡಿಕೊಂಡಿದ್ದಾರೆ. ನೋಂದಣಿಗೆ ಇಂತಿಷ್ಟು ಹಣ ಎಂದು ಮಧ್ಯವರ್ತಿಗಳ ಮೂಲಕವೇ ನಿಗದಿ ಮಾಡಲಾಗುತ್ತಿದೆ’ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ. ಸತೀಶ್ ಕೊಳೇನಹಳ್ಳಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ADVERTISEMENT

ಸಬ್ ರಿಜಿಸ್ಟ್ರಾರ್ ಹೇಮಂತ್ ಅವರನ್ನು ಸ್ಥಳಕ್ಕೆ ಕರೆಸಿದ ಜಿಲ್ಲಾಧಿಕಾರಿಗಳು ‘ಪ್ರತಿ ದಿನ ಎಷ್ಟು ನೋಂದಣಿ ಮಾಡುತ್ತೀರಿ’ ಎಂದು ಕೇಳಿದಾಗ ‘100ರಿಂದ 120’ ಎಂದು ಉತ್ತರಿಸಿದರು.

‘ಮಧ್ಯವರ್ತಿಗಳಿಗೆ ಕಚೇರಿ ಪ್ರವೇಶ ನಿಷೇಧಿಸಬೇಕು. ಒಂದು ವೇಳೆ ಅವರು ಬಂದರೆ ಗಂಭೀರ ಪ್ರಕರಣವಾಗುತ್ತದೆ’ ಎಂದು ಡಿಸಿ ಎಚ್ಚರಿಸಿದರು.

‘ಎರಡು ವರ್ಷಗಳ ಹಿಂದೆ ನಿಯಮಾನುಸಾರ ಪಾಲು ವಿಭಾಗ ಮಾಡಿಕೊಂಡರೂ ಇಲ್ಲಿಯ ತನಕ ಖಾತಾ ಪ್ರಕ್ರಿಯೆ ಸರಿಯಾಗಿ ಮಾಡಿಲ್ಲ. ತಾಲ್ಲೂಕು ಕಚೇರಿ ಆರ್‌ಆರ್‌ಟಿ ವಿಭಾಗದಲ್ಲಿ ಹೆಸರು, ಇನಿಷಿಯಲ್‌ ಅನ್ನು ಪಹಣಿಯಲ್ಲಿ ತಪ್ಪು ಮಾಡಿದ್ದಾರೆ. ಸಮಸ್ಯೆ ಪರಿಹರಿಸುವಂತೆ ಕಚೇರಿಗೆ ಬರುವ ರೈತರ ಜೊತೆ ದಾವಣಗೆರೆ ತಹಶೀಲ್ದಾರ್ ಅವರು ಸೌಜನ್ಯದಿಂದ ವರ್ತಿಸುವುದಿಲ್ಲ’ ಎಂದು ಕಬ್ಬೂರು ಗ್ರಾಮದ ಮಲ್ಲಿಕಾರ್ಜುನ್
ದೂರಿದರು.

ತಾಲ್ಲೂಕಿನ ಬಲ್ಲೂರು ಗ್ರಾಮದವರಿಗೆ ಶಿರಗಾನಹಳ್ಳಿಯಲ್ಲಿ ಸ್ಮಶಾನಕ್ಕೆ ಜಾಗ ಕಲ್ಪಿಸಿರುವುದಕ್ಕೆ ಈ ಎರಡು ಗ್ರಾಮಗಳ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಸ್ಮಶಾನಕ್ಕೆ ಮಂಜೂರಾಗಿರುವ ಜಾಗವನ್ನು ನನ್ನ ಹೆಸರಿಗೆ ಮಂಜೂರು ಮಾಡಿದರೆ ನನ್ನ ಸ್ವಂತ ಜಾಗ 1.20 ಎಕರೆಯನ್ನು ಸ್ಮಶಾನಕ್ಕೆ ಬಿಟ್ಟುಕೊಡುತ್ತೇನೆ’ ಎಂದು ಗ್ರಾಮದ ಶಿವರೆಡ್ಡಿ ಅವರು ಮನವಿ ಸಲ್ಲಿಸಿದರು. ರೈತ ಮುಖಂಡ ಬಲ್ಲೂರು ರವಿಕುಮಾರ್ ಇದ್ದರು.

‘3 ತಿಂಗಳಿನಿಂದ ನಮ್ಮ ಪಿಂಚಣಿಯನ್ನು ತಡೆಹಿದಿದ್ದು, ಅದನ್ನು ಕೊಡಿಸಬೇಕು’ ಎಂದು ದೊಡ್ಡಬಾತಿಯ ಕರಿಬಸಪ್ಪ, ರೇವಣಸಿದ್ದಪ್ಪ, ಜಯಮ್ಮ ಹಾಗೂ ಕೆಂಚಮ್ಮ ಅವರು ಮನವಿ ಸಲ್ಲಿಸಿದರು.

ಹಕ್ಕುಪತ್ರ ವಿತರಿಸಲು ಮನವಿ: ‘ದಾವಣಗೆರೆಯಲ್ಲಿ 70–80 ವರ್ಷಗಳಿಂದ ಬಡ ರೈತರು ಜಮೀನು ಸಾಗುವಳಿ ಮಾಡಿಕೊಂಡು ಬಂದಿದ್ದು, ಅವರಿಗೆ ಹಕ್ಕುಪತ್ರ ವಿತರಿಸಬೇಕು’ ಎಂದು ಅಖಿಲ ಭಾರತ ರೈತ–ಕೃಷಿಕಾರ್ಮಿಕರ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಧು ತೊಗಲೇರಿ ಮನವಿ
ಸಲ್ಲಿಸಿದರು.

‘ನಗರದ ಬೀರಲಿಂಗೇಶ್ವರ ದೇವಾಲಯ ಶಿಥಿಲವಾಗಿದ್ದು, ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಜೀರ್ಣೋದ್ಧಾರಕ್ಕೆ ಮನವಿ ಸಲ್ಲಿಸಿ 8 ತಿಂಗಳಾದರೂ ಕೆಲಸವಾಗಿಲ್ಲ’ ಎಂದು ಕುರುಬ ಸಮಾಜದ ಮುಖಂಡ ಜೆ.ಕೆ. ಕೊಟ್ರಬಸಪ್ಪ ಮನವಿ ಮಾಡಿದರು.

‘ಪರಿಶೀಲಿಸಿ ಕಾರ್ಯೋನುಖ ರಾಗುವಂತೆ ತಹಶೀಲ್ದಾರ್‌ಗೆ ಡಿ.ಸಿ ಸೂಚಿಸಿದರು.

ಜಮೀನು ಮಂಜೂರಿಗೆ ಮನವಿ

‘ಚರ್ಮ ಕುಶಲ ಕರ್ಮಿಗಳಿಗೆ ಲಿಡ್ಕರ್ ಅಭಿವೃದ್ಧಿ ನಿಗಮದಿಂದ ನಿವೇಶನಗಳು ಮಂಜೂರಾಗಿದ್ದು, ಸರ್ವೇ ನಂಬರ್ 99ರಲ್ಲಿರುವ 2 ಎಕರೆ ಗೋಮಾಳ ಜಮೀನನ್ನು ಮಂಜೂರು ಮಾಡಿಕೊಡಬೇಕು’ ಎಂದು ದಾವಣಗೆರೆ ತಾಲ್ಲೂಕಿನ ಅಣಬೇರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ಕುಂದ ಗ್ರಾಮಸ್ಥರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.