ADVERTISEMENT

ಆದಿಜಾಂಬವ ಮಠದ ಪರಂಪರೆಗೆ ಧಕ್ಕೆ ತಂದರೆ ಕಾನೂನು ಕ್ರಮ: ದೇಶಿಕೇಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 15:33 IST
Last Updated 8 ಫೆಬ್ರುವರಿ 2026, 15:33 IST
   

ದಾವಣಗೆರೆ: ಆದಿಜಾಂಬವ ಮಹಾಸಂಸ್ಥಾನ ಮಠಕ್ಕೆ ದೊಡ್ಡ ಪರಂಪರೆ ಇದೆ. ಮಠದ ಹೆಸರು ದುರ್ಬಳಕೆ ಮಾಡಿಕೊಂಡು ಪರಂಪರೆಗೆ ಧಕ್ಕೆ ತಂದರೆ ಕಾನೂನು ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಹಿರಿಯೂರು ತಾಲ್ಲೂಕಿನ ಕೋಡಿಹಳ್ಳಿಯ ಆದಿಜಾಂಬವ ಮಠದ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಎಚ್ಚರಿಕೆ ನೀಡಿದರು.

‘ದಾವಣಗೆರೆಯ ಕಾಂಗ್ರೆಸ್‌ ಮುಖಂಡ ಬಿ.ಎಚ್‌. ವೀರಭದ್ರಪ್ಪ ಅವರು ಆದಿಜಾಂಬವ ಮಠದ ಹೆಸರಿನಲ್ಲಿ ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಇದರಿಂದ ಮಠದ ಭಕ್ತರಿಗೆ ನೋವುಂಟಾಗಿದೆ. ಮಠದ ಪಾವಿತ್ರ್ಯಕ್ಕೆ ಧಕ್ಕೆಯುಂಟು ಮಾಡುವ ಪ್ರಯತ್ನವನ್ನು ತಕ್ಷಣ ನಿಲ್ಲಿಸಬೇಕು’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಆದಿಜಾಂಬವ ಮಠ ಪುರಾತನವಾದದು. ರಾಜ್ಯದಲ್ಲಿ ದೊಡ್ಡ ಭಕ್ತಗಣವನ್ನು ಹೊಂದಿದೆ. ಪೀಠಾಧ್ಯಕ್ಷರಾಗಿ ರಾಜ್ಯದ ಎಲ್ಲೆಡೆ ಭಕ್ತರೊಂದಿಗೆ ಒಡನಾಟ ಇಟ್ಟುಕೊಂಡು ಮಠವನ್ನು ಬೆಳೆಸುತ್ತಿದ್ದೇವೆ. ಪೀಠಾಧ್ಯಕ್ಷರ ಗಮನಕ್ಕೆ ತರದೇ ಶಾಖಾ ಮಠದ ಸ್ಥಾಪನೆಗೆ ಮುಂದಾಗಿರುವುದು ಸರಿಯಲ್ಲ. ಈ ಸಂಬಂಧ ವಿತರಿಸುತ್ತಿರುವ ಕರಪತ್ರದಲ್ಲಿ ಮಠದ ಬಗ್ಗೆ ಸುಳ್ಳು ಮಾಹಿತಿಗಳಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ವೀರಭದ್ರಪ್ಪ ಅವರಿಗೂ ಆದಿಜಾಂಬವ ಮಠಕ್ಕೂ ಯಾವುದೇ ಸಂಬಂಧವಿಲ್ಲ. ಅವರು ಗುರುಪೀಠಕ್ಕೆ ಬಂದು ಭಕ್ತಿ ಸಮರ್ಪಣೆ ಮಾಡಿಲ್ಲ. ಅವರು ಪ್ರತ್ಯೇಕ ಮಠವೊಂದನ್ನು ಸ್ಥಾಪಿಸಿಕೊಳ್ಳಲು ಅಭ್ಯಂತರವಿಲ್ಲ. ಆದರೆ, ಆದಿಜಾಂಬವ ಪರಂಪರೆಯ ಹೆಸರಿನಲ್ಲಿ ಮತ್ತೊಂದು ಗುರುಪೀಠ ಅಥವಾ ಶಾಖಾ ಮಠ ಸ್ಥಾಪಿಸಲು ಅವಕಾಶ ನೀಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಸಮುದಾಯದ ಪೂರ್ವಭಾವಿ ಸಭೆಗೆ ನಮ್ಮನ್ನು ಆಹ್ವಾನಿಸಿದಾಗ ಶಾಖಾ ಮಠದ ಸ್ಥಾಪನೆಯ ಕುರಿತು ಮಾಹಿತಿ ನೀಡಿರಲಿಲ್ಲ. ಭಕ್ತರಿಗೆ ವಿತರಿಸುತ್ತಿದ್ದ ಕರಪತ್ರದಲ್ಲಿನ ಮಾಹಿತಿಯನ್ನು ಗಮನಿಸಿ ವೀರಭದ್ರಪ್ಪ ಅವರನ್ನು ಸಂಪರ್ಕಿಸಿದೆವು. ಆದಿಜಾಂಬವ ಗುರುಪೀಠದ ಕುರಿತು ಅಪಪ್ರಚಾರ ಮಾಡದಂತೆ ಸೂಚನೆ ನೀಡಲಾಗಿದೆ. ಅವರ ನಡೆಯಿಂದ ಸಮುದಾಯ ಹಾಗೂ ಭಕ್ತರಿಗೆ ಮುಜುಗರ ಉಂಟಾಗಿದೆ’ ಎಂದು ತಿಳಿಸಿದರು.

ಉತ್ತರಾಧಿಕಾರಿ ಅಥವಾ ಶಾಖಾ ಮಠಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳುವ ಮುನ್ನ ಭಕ್ತರ ಸಭೆ ಕರೆಯಲಾಗುತ್ತದೆ. ಗಹನವಾಗಿ ಚರ್ಚಿಸಿ ಗುರುಪೀಠ ನಿರ್ಧರಿಸುತ್ತದೆ
ಷಡಕ್ಷರಮುನಿ ಸ್ವಾಮೀಜಿ, ಆದಿಜಾಂಬವ ಮಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.