ಅಜ್ಜಿಹಳ್ಳಿ(ಚನ್ನಗಿರಿ): ತಾಲ್ಲೂಕು ಅಜ್ಜಿಹಳ್ಳಿ ಗ್ರಾಮದಲ್ಲಿ ಖಾಸಗಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳ ನಿಲುಗಡೆ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಅಜ್ಜಿಹಳ್ಳಿ ಗ್ರಾಮವಿದ್ದು, ಈ ಗ್ರಾಮದಿಂದ ಪ್ರತಿ ದಿನ ನೂರಾರು ಜನರು ಶಿವಮೊಗ್ಗ, ಚಿತ್ರದುರ್ಗ ಹಾಗೂ ಇತರೆ ನಗರ ಪ್ರದೇಶಗಳಿಗೆ ಹೋಗುತ್ತಾರೆ. ಹಾಗೆಯೇ 50 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶಿವಮೊಗ್ಗ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಾರೆ. ಅಜ್ಜಿಹಳ್ಳಿ ಗ್ರಾಮ ಚನ್ನಗಿರಿ ಪಟ್ಟಣಕ್ಕೆ ಮೂರು ಕಿಮೀ ದೂರದಲ್ಲಿದೆ. ಆಗಾಗಿ ಈ ಗ್ರಾಮದಲ್ಲಿ ಯಾವುದೇ ಖಾಸಗಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳು ನಿಲುಗಡೆ ಮಾಡುವುದಿಲ್ಲ. ಇದರಿಂದ ಆಸ್ಪತ್ರೆ, ಕಾಲೇಜುಗಳಿಗೆ ಹೋಗುವವರು ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದೆ. ಬಸ್ ಗಳು ನಿಲುಗಡೆ ,ಮಾಡದೇ ಇರುವ ಕಾರಣಕ್ಕೆ ಗ್ರಾಮದ ಜನರು ಹಾಗೂ ವಿದ್ಯಾರ್ಥಿಗಳು ಹೆಚ್ಚು ಹಣ ಕೊಟ್ಟು ಆಟೊಗಳಲ್ಲಿ ಚನ್ನಗಿರಿ ಪಟ್ಟಣಕ್ಕೆ ಬಂದು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಗಾಗಿ ನಮ್ಮ ಗ್ರಾಮದಲ್ಲಿ ಖಾಸಗಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳನ್ನು ನಿಲುಗಡೆ ಮಾಡುವ ಮೂಲಕ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕು ಎಂದು ಒತ್ತಾಯಿಸಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ನಂತರ ಸ್ಥಳಕ್ಕೆ ಪಿಎಸ್ಐ ಎಸ್. ಸುರೇಶ್ ಆಗಮಿಸಿ ಗ್ರಾಮಸ್ಥರಿಂದ ಮನವಿಯನ್ನು ಸ್ವೀಕರಿಸಿ, ಈ ಗ್ರಾಮದಲ್ಲಿ ಖಾಸಗಿ ಹಾಗೂ ಕೆಎಸ್ ಆರ್ ಟಿಸಿ ಬಸ್ ಗಳ ನಿಲುಗಡೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಹೆದ್ದಾರಿ ತಡೆಯನ್ನು ಗ್ರಾಮಸ್ಥರು ಹಿಂದಕ್ಕೆ ಪಡೆದುಕೊಂಡರು.
ರಂಗನಾಥ್, ಪವಿತ್ರ, ಸುಜಾತ, ಸವಿತಾ, ಶಂಕರಪ್ಪ, ಚನ್ನಬಸಪ್ಪ, ಶಕುಂತಲ,ಸಿದ್ದಪ್ಪ, ರಾಜಪ್ಪ, ನಾಗರಾಜ್, ಚೇತನ್, ಜ್ಯೋತಿ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.