ADVERTISEMENT

ಮಕ್ಕಳು, ಮಹಿಳೆಯರಿಗೆ ಅಕ್ಕನ ಶ್ರೀರಕ್ಷೆ: ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 3:02 IST
Last Updated 9 ಜನವರಿ 2026, 3:02 IST
   

ದಾವಣಗೆರೆ: ದೌರ್ಜನ್ಯ, ನಿರ್ಲಕ್ಷ್ಯ, ಶೋಷಣೆ ಎದುರಿಸುತ್ತಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸಕಾಲಿಕವಾಗಿ ಸಹಾಯಹಸ್ತ ಚಾಚಿ ರಕ್ಷಿಸುವ ಉದ್ದೇಶದಿಂದ ರೂಪಿಸಿದ ‘ಅಕ್ಕ’ ಪಡೆಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಚಾಲನೆ ನೀಡಿದರು.

ಇಲ್ಲಿನ ದೇವರಾಜ ಅರಸು ಬಡಾವಣೆಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ‘ಅಕ್ಕ’ ಪಡೆಯ ವಾಹನಕ್ಕೆ ಹಸಿರು ನಿಶಾನೆ ತೋರಿದರು. ಪಡೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಬೆನ್ನುತಟ್ಟಿ ಮಹಿಳೆಯರಿಗೆ ಶ್ರೀರಕ್ಷೆಯಾಗುವಂತೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಸಹಯೋಗದಲ್ಲಿ ರೂಪಿಸಿದ ‘ಅಕ್ಕ’ಪಡೆಯಲ್ಲಿ 8 ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ನಾಲ್ವರು ಪೊಲೀಸರು ಹಾಗೂ ನಾಲ್ವರು ಗೃಹ ರಕ್ಷಕ ದಳದ ಸಿಬ್ಬಂದಿ ದಿನದಲ್ಲಿ 2 ಪಾಳಿಯಲ್ಲಿ ಕೆಲಸ ಮಾಡಲಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ನೀಡುವುದು ಪಡೆಯ ಪ್ರಾಥಮಿಕ ಕರ್ತವ್ಯ. ಪಡೆಯ ಮೇಲುಸ್ತುವಾರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಧ್ಯಕ್ಷತೆಯ ಸಮಿತಿ ರಚನೆಯಾಗಿದೆ.

ADVERTISEMENT

ಸಹಾನುಭೂತಿಯಿಂದ ಕಾರ್ಯನಿರ್ವಹಿಸುವ ಈ ಪಡೆ ಮಹಿಳೆಯರು ಮತ್ತು ಮಕ್ಕಳ ಘನತೆಯನ್ನು ಕಾಪಾಡುತ್ತದೆ. ಸಮುದಾಯದಲ್ಲಿ ಸ್ನೇಹಪರ ಮತ್ತು ವಿಶ್ವಾಸಾರ್ಹತೆಯನ್ನು ನಿರ್ಮಿಸುವುದು ಈ ಪಡೆಯ ಜವಾಬ್ದಾರಿ. ಕಿರುಕುಳ, ಕೌಟುಂಬಿಕ ಹಿಂಸೆ ಸೇರಿದಂತೆ ಇತರ ರೀತಿಯ ಅಪಾಯಕ್ಕೆ ಸಿಲುಕಿದ ಮಹಿಳೆಯರು ಮತ್ತು ಮಕ್ಕಳು ಈ ಪಡೆಯನ್ನು ಸಂಪರ್ಕಿಸಬಹುದು.

ಜಿಲ್ಲೆಯಾದ್ಯಂತ ಗಸ್ತು ತಿರುಗುವ ಪಡೆ, ಸಾರ್ವಜನಿಕರ ಕರೆಗೂ ಸ್ಪಂದಿಸಲಿದೆ. ಮಕ್ಕಳ ಸಹಾಯವಾಣಿ 1098, ತುರ್ತು ಸಹಾಯವಾಣಿ 112 ಸೇರಿ ಇತರ ಸಹಾಯವಾಣಿಗೆ ಬರುವ ಕರೆಗಳಿಗೆ ‘ಅಕ್ಕ’ ಪಡೆಯ ಸಿಬ್ಬಂದಿ ಸ್ಪಂದಿಸಲಿದ್ದಾರೆ. ಪೋಕ್ಸೊ, ಸೈಬರ್‌ ಅಪರಾಧ, ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜ ನಾಯ್ಕ, ಮಕ್ಕಳ ರಕ್ಷಣಾಧಿಕಾರಿ ಟಿ.ಎನ್‌. ಕವಿತಾ, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ಡಿವೈಎಸ್‌ಪಿ ಪ್ರಕಾಶ್‌ ಹಾಜರಿದ್ದರು.