
ದಾವಣಗೆರೆ: ತಾಲ್ಲೂಕಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದ ಚುಕ್ಕೆ ಜಿಂಕೆಗಳಿಗೆ ಕಾಣಿಸಿಕೊಂಡಿರುವ ಅನುಮಾನಾಸ್ಪದ ‘ಹೆಮರಾಜಿಕ್ ಸೆಪ್ಟಿಸೆಮಿಯಾ’ ಸಾಂಕ್ರಾಮಿಕ ರೋಗ ತಡೆಯುವುದು ಸವಾಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿರುವ ಜಿಂಕೆಗಳಲ್ಲಿ ರೋಗಲಕ್ಷಣ ಹೊಂದಿರುವ ಪ್ರಾಣಿಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ಕಷ್ಟವಾಗಿದೆ.
ನಾಲ್ಕು ಜಿಂಕೆಗಳು ಮೃತಪಟ್ಟ ಬಳಿಕ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಉಳಿದ ಜಿಂಕೆಗಳನ್ನು ಉಳಿಸಿಕೊಳ್ಳಲು ಸಮರೋಪಾದಿ ಪ್ರಯತ್ನ ಮುಂದುವರಿಸಿದೆ. ವನ್ಯಜೀವಿಗಳ ತಜ್ಞ ವೈದ್ಯ ಡಾ.ಪ್ರಯಾಗ ನೇತೃತ್ವದಲ್ಲಿ ಆರು ಜನರ ವೈದ್ಯಕೀಯ ತಂಡ ಮೃಗಾಲಯದಲ್ಲಿ ಬೀಡುಬಿಟ್ಟಿದೆ.
ಕಿರು ಮೃಗಾಲಯದ 200ಕ್ಕೂ ಹೆಚ್ಚು ಪ್ರಾಣಿಗಳಲ್ಲಿ 170 ಚುಕ್ಕೆ ಜಿಂಕೆ ಹಾಗೂ ಕೃಷ್ಣಮೃಗಗಳಿವೆ. ಇದರಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಮೃತಪಟ್ಟಿದ್ದು, ಇನ್ನೂ ಕೆಲವು ರೋಗಲಕ್ಷಣಗಳಿಂದ ಬಳಲುತ್ತಿವೆ. ಇಂತಹ ಜಿಂಕೆಗಳನ್ನು ಉಳಿದವುಗಳಿಂದ ಪ್ರತ್ಯೇಕಿಸುವುದು ಸಾಧ್ಯವಾಗುತ್ತಿಲ್ಲ.
ಆಹಾರದ ಜೊತೆಗೆ ಔಷಧ
‘ನಡೆದಾಡಲು ಕಷ್ಟಪಡುವ ಹಾಗೂ ನಿಶ್ಯಕ್ತಿಯಿಂದ ಬಳಲುವುದೇ ‘ಹೆಮರಾಜಿಕ್ ಸೆಪ್ಟಿಸೆಮಿಯಾ’ ರೋಗಲಕ್ಷಣ. ಇಂತಹ ಲಕ್ಷಣಗಳು ಕೆಲ ಜಿಂಕೆಗಳಲ್ಲಿ ಕಾಣಿಸಿಕೊಂಡಿವೆ. ಈ ಜಿಂಕೆಗಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲು ಕಷ್ಟಸಾಧ್ಯ. ಹೀಗಾಗಿ, ಎಲ್ಲ ಜಿಂಕೆಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎನ್. ಹರ್ಷವರ್ಧನ್ ವಿವರಿಸಿದರು.
‘ಸೂಕ್ಷ್ಮ ಜೀವಿಯಾಗಿರುವ ಜಿಂಕೆಗಳನ್ನು ಹಿಡಿದು ಪ್ರತ್ಯೇಕಿಸಲು ಸಾಧ್ಯವಿಲ್ಲ. ಇಂತಹ ಪ್ರಯತ್ನಕ್ಕೆ ಕೈಹಾಕಿದರೆ ಜಿಂಕೆಗಳಿಗೆ ಹೃದಯಾಘಾತ ಉಂಟಾಗುವ ಸಾಧ್ಯತೆ ಹೆಚ್ಚು. ಹೀಗಾಗಿ, ಆಹಾರದಲ್ಲಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ನಿತ್ಯ ಬೆಳಿಗ್ಗೆ ಜಿಂಕೆಗಳಿಗೆ ನೀಡುವ ಆಹಾರದಲ್ಲಿ ಔಷಧವನ್ನು ಮಿಶ್ರಣ ಮಾಡಿ ನೀಡಲಾಗುತ್ತಿದೆ. ಇದಕ್ಕೆ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರುಮೃಗಾಲಯದ ಸಿಬ್ಬಂದಿ ತಂಡ ಧಾವಿಸಿದೆ’ ಎಂದು ಹರ್ಷವರ್ಧನ್ ತಿಳಿಸಿದರು.
ಪ್ರಯೋಗಾಲಯ ವರದಿಗೆ 3 ದಿನ
ಜ.16ರಿಂದ ಜ.18ರವರೆಗೆ ನಾಲ್ಕು ಚುಕ್ಕೆ ಜಿಂಕೆಗಳು ಮೃತಪಟ್ಟಿವೆ. ಮೃತ ಜಿಂಕೆಗಳ ದೇಹದ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಸೋಮವಾರ ರವಾನೆ ಮಾಡಲಾಗಿದೆ. ಮೂರು ದಿನಗಳಲ್ಲಿ ವರದಿ ಬರುವ ಸಾಧ್ಯತೆ ಇದೆ.
‘ಸಾಮಾನ್ಯವಾಗಿ ಈ ಕಾಯಿಲೆಗೆ ಏಳು ದಿನಗಳ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ಪಶುವೈದ್ಯಕೀಯ ತಂಡ ಹೇಳಿದೆ. ಇತರ ಪ್ರಾಣಿಗಳಿಗೆ ಈ ಕಾಯಿಲೆ ಹರಡಬಾರದು ಎಂಬ ಉದ್ದೇಶದಿಂದ ಮೃಗಾಲಯವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. 7 ದಿನಗಳ ಬಳಿಕ ಮೃಗಾಲಯವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹರ್ಷವರ್ಧನ್ ಮಾಹಿತಿ ನೀಡಿದರು.
8 ಪ್ರಭೇದ, 200ಕ್ಕೂ ಹೆಚ್ಚು ವನ್ಯಜೀವಿ
‘ಇಂದಿರಾ ಪ್ರಿಯದರ್ಶಿನಿ’ ಕಿರುಮೃಗಾಲಯದಲ್ಲಿ 8 ಪ್ರಭೇದಕ್ಕೆ ಸೇರಿದ 200ಕ್ಕೂ ಅಧಿಕ ವನ್ಯಜೀವಿಗಳಿವೆ. ಇದರಲ್ಲಿ ಜಿಂಕೆಗಳ ಸಂಖ್ಯೆಯೇ ಹೆಚ್ಚಾಗಿದೆ.
1993ರಲ್ಲಿ ಅಭಿವೃದ್ಧಿಪಡಿಸಿದ ಈ ಮೃಗಾಲಯ 26 ಎಕರೆ ಪ್ರದೇಶದಲ್ಲಿದೆ. ಆನಗೋಡು ಮೀಸಲು ಅರಣ್ಯಕ್ಕೆ ಹೊಂದಿಕೊಂಡ ಪ್ರದೇಶದಲ್ಲಿದ್ದು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ 170 ಜಿಂಕೆ, 2 ಕರಡಿ, ನವಿಲು, ಲವ್ ಬರ್ಡ್ಸ್, ಕಾಡುಕೋಳಿ, ಗಿಳಿ ಸೇರಿದಂತೆ ಹಲವು ವನ್ಯಜೀವಿಗಳಿವೆ.
ರೋಗ ಬಂದಿದ್ದು ಎಲ್ಲಿಂದ?
‘ಹೆಮರಾಜಿಕ್ ಸೆಪ್ಟಿಸೆಮಿಯಾ’ ಎಂಬ ಸಾಂಕ್ರಾಮಿಕ ರೋಗ ಕಿರು ಮೃಗಾಲಯದ ಜಿಂಕೆಗಳಿಗೆ ತಗುಲಿದ್ದು ಹೇಗೆ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಪಶುವೈದ್ಯಕೀಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಈ ರೋಗ ಹರಡಿದ ಮೂಲ ಪತ್ತೆಗೂ ಮುಂದಾಗಿದೆ.
‘ಈ ರೋಗಾಣು ಗಾಳಿಯಲ್ಲಿ ಹರಡುತ್ತದೆ. ಅಲ್ಲದೇ, ಹಲವು ಪ್ರಾಣಿಗಳಲ್ಲಿ ಈ ರೋಗಾಣು ಇರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಈ ಸಾಂಕ್ರಾಮಿಕ ರೋಗ ಬಂದಿದ್ದು ಎಲ್ಲಿಂದ ಎಂಬುದನ್ನೂ ಪತ್ತೆ ಮಾಡಬೇಕಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎನ್. ಹರ್ಷವರ್ಧನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.