ದಾವಣಗೆರೆ: ‘ರಾಜ್ಯದಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರವು 15 ದಿನಗಳ ಒಳಗಾಗಿ ಜಾತಿ ಜನಗಣತಿ ವರದಿಯನ್ನು ಅಂಗೀಕರಿಸಿ ಬಿಡುಗಡೆ ಮಾಡಬೇಕು. ಇಲ್ಲವಾದರೆ ಹೈಕೋರ್ಟ್‌ನಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ಕಳಿಸಲಾಗಿದೆ’ ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್ ಸಂಘಟನೆಯ ರಾಜ್ಯ ಸಂಚಾಲಕ ಅನೀಸ್ ಪಾಷ ತಿಳಿಸಿದರು.
‘ಜಾತಿ ಜನಗಣತಿ ವರದಿ ತಯಾರಿಸಲು ₹ 169 ಕೋಟಿ ವೆಚ್ಚ ಮಾಡಲಾಗಿದೆ. ಕೆಲವು ಸಮುದಾಯದವರು ಈ ವರದಿಯು ಅವೈಜ್ಞಾನಿಕವಾಗಿದ್ದು, ಅಂಗೀಕರಿಸಬಾರದು ಎಂದು ಒತ್ತಡ ಹೇರುತ್ತಿದ್ದಾರೆ. ಈ ರೀತಿಯ ಒತ್ತಡ ನ್ಯಾಯಸಮ್ಮತವಲ್ಲ. ಒಳಮೀಸಲಾತಿ ಜಾರಿಗೊಳಿಸಲೂ ಜಾತಿ ಜನಗಣತಿ ವರದಿಯ ಮಾಹಿತಿ ಪೂರಕವಾಗಲಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಎಚ್.ಕಾಂತರಾಜ್ ಆಯೋಗದ ವರದಿಯು ರಾಜ್ಯದ ಎಲ್ಲ ಸಮುದಾಯಗಳ ಜಾತಿಗಣತಿ ವರದಿ ಮಾತ್ರ ಆಗಿರದೇ, ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬಗೆಗಿನ ವರದಿಯಾಗಿದೆ. ಅದರಲ್ಲಿನ ಅಂಶಗಳನ್ನು ತಿಳಿದುಕೊಳ್ಳುವ ಹಕ್ಕನ್ನು ಸಂವಿಧಾನವು ಪ್ರತಿಯೊಬ್ಬರಿಗೂ ನೀಡಿದೆ’ ಎಂದರು.
‘ಒಳಮೀಸಲಾತಿ ಜಾರಿಗೊಳಿಸಲು ಜಾತಿ ಜನಗಣತಿ ಬಗ್ಗೆ ಮಾಹಿತಿ ಪಡೆಯುವ ಅವಶ್ಯಕತೆ ಇದೆ. ಅದಕ್ಕೂ ಕಾಂತರಾಜ್ ಆಯೋಗದ ವರದಿ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.
‘ಕೇಂದ್ರ ಸರ್ಕಾರ 10 ವರ್ಷಕ್ಕೊಮ್ಮೆ ಜಾತಿ ಜನಗಣತಿ ನಡೆಸಬೇಕು. ಆದರೆ, ಕೇಂದ್ರ ಈ ಬಗ್ಗೆ ಯಾವುದೇ ಕ್ರಮ ವಹಿಸಿಲ್ಲ. ರಾಜ್ಯ ಸರ್ಕಾರ ಸಾಮಾಜಿಕ ಚಿಂತನೆಯನ್ನು ಇಟ್ಟುಕೊಂಡು ತಯಾರಿಸಿದ ವರದಿಯನ್ನು ಮೂಲೆಗುಂಪು ಮಾಡಬಾರದು. ಜಾತಿ ಜನಗಣತಿ ವರದಿಯನ್ನು ಅಂಗೀಕರಿಸಿ ಬಿಡುಗಡೆ ಮಾಡದಿದ್ದರೆ, ಶೋಷಿತ ಸಮುದಾಯಗಳಿಗೆ ಅನ್ಯಾಯವಾಗಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಈ ಬಗ್ಗೆ ರಾಜ್ಯದಾದ್ಯಂತ ಜನಾಂದೋಲನ ನಡೆಸಲಾಗುವುದು’ ಎಂದು ಹೇಳಿದರು.
ಬೆಂಗಳೂರು: ‘ಒಳ ಮೀಸಲಾತಿ ವಿಚಾರದಲ್ಲಿ ಹೋರಾಟಗಾರರು ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಸ್ವೇಚ್ಛಾಚಾರದ ಸ್ವಾತಂತ್ರ್ಯ ಎಂದುಕೊಂಡು ಮನಸ್ಸಿಗೆ ಬಂದಂತೆ ಟೀಕೆ ಮಾಡಬಾರದು. ಒಬ್ಬರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಟೀಕೆ ಮಾಡಬಾರದು. ಸಮಾಜದ ಜನತೆಗೆ ಧಕ್ಕೆ ತರುವಂಥ ಕೆಲಸವನ್ನು ಯಾರೂ ಮಾಡಬಾರದು’ ಎಂದು ತಮ್ಮ ಸಮು ದಾಯದವರಿಗೆ ಮಾಜಿ ಸಚಿವ ಎಚ್. ಆಂಜನೇಯ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೂರು ತಿಂಗಳ ನಂತರ ಒಳ ಮೀಸಲಾತಿ ಜಾರಿಗೆ ಕೆಲವರು ವಾಟ್ಸ್ ಆ್ಯಪ್‌ನಲ್ಲಿ ಸರ್ಕಾರದ ವಿರುದ್ಧ ನಿಂದನೆಯ ಮಾತುಗಳನ್ನು ಆಡುತ್ತಿದ್ದಾರೆ. ಯಾವುದೇ ಆತಂಕ ಬೇಡ ಮೂರು ತಿಂಗಳ ನಂತರ ಒಳ ಮೀಸಲಾತಿ ಜಾರಿಗೆ ಬಂದೇ ಬರುತ್ತದೆ. 30 ವರ್ಷ ಕಾಲ ಕಾದಿರುವ ನಾವು ಇನ್ನು ಕೇವಲ ಮೂರು ತಿಂಗಳ ಕಾಲ ಕಾಯಬೇಕು. ಸ್ವಲ್ಪ ತಾಳ್ಮೆಯನ್ನು ವಹಿಸಿದರೆ ಸಿಹಿ ಖಂಡಿತ’ ಎಂದರು.
‘ಒಳ ಮೀಸಲಾತಿ ಪರವಾಗಿ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಉಪ ಚುನಾವಣೆ ನಂತರ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಿ ಅಭಿನಂದನೆ ಸಲ್ಲಿಸುತ್ತೇವೆ’ ಎಂದರು.
‘ಮಾದಿಗ ಸಮುದಾಯಕ್ಕೆ ತನ್ನ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಸಿಗುತ್ತಿಲ್ಲ. ಒಳ ಮೀಸಲಾತಿ ಸಿಗುತ್ತಿಲ್ಲ. ಮುಖ್ಯ ಮೀಸಲಾತಿ ಇದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ. ಉನ್ನತ ಶಿಕ್ಷಣ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸರಿಯಾದ ಸ್ಥಾನ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ 30 ವರ್ಷಗಳಿಂದ ನಾನು ಸೇರಿದಂತೆ ಅನೇಕ ಮುಖಂಡರು ಹೋರಾಟ ಮಾಡುತ್ತಾ ಇದ್ದೇವೆ. ಒಳ ಮೀಸಲಾತಿ ಜಾರಿಗೆ ಸಿದ್ದರಾಮಯ್ಯ ಅವರ ಸರ್ಕಾರ ಮುಂದಾಗಿದೆ’ ಎಂದರು.
‘ಹಳೆ ಮೈಸೂರು ಭಾಗದಲ್ಲಿ ಒಂದೇ ಜಾತಿಯವರು ಎರಡು ಹೆಸರಿನಲ್ಲಿ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಮಾದಿಗ ಸಮುದಾಯದಲ್ಲಿ ಆದಿ ಕರ್ನಾಟಕ ಎಂದು ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಹೊಲೆಯರಲ್ಲಿ ಚಲವಾದಿ ಸಮುದಾಯದವರು ಕೂಡಾ ಆದಿ ಕರ್ನಾಟಕ ಎಂದು ಪ್ರಮಾಣಪತ್ರ ಪಡೆ ಯುತ್ತಿದ್ದಾರೆ. ಹೀಗಾಗಿ, ಜನಸಂಖ್ಯೆಯನ್ನು ನಿಖರವಾಗಿ ಬೇರ್ಪಡಿಸಲು ಆಗಿಲ್ಲ. ಈ ಕಾರಣಕ್ಕಾಗಿ ದತ್ತಾಂಶ ವಿಂಗಡಣೆಗೆ ಆಯೋಗ ರಚಿಸಲಾಗಿದೆ’ ಎಂದೂ ವಿವರಿಸಿದರು.
ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್. ಮಂಜುನಾಥ್, ಕೆಪಿಸಿಸಿ ಸಂಯೋಜಕರಾದ ಮಂಜೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.