ADVERTISEMENT

ದಾವಣಗೆರೆ: ‘ಮಾದಕ ದ್ರವ್ಯ’ ಜಾಲದ ಬೆನ್ನತ್ತಿದ ಎಎನ್‌ಟಿಎಫ್‌

ಜಿಲ್ಲೆಯಲ್ಲಿ 7 ವರ್ಷಗಳಲ್ಲಿ ಒಟ್ಟು ₹83.13 ಲಕ್ಷ ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳು ಜಪ್ತಿ

ರಾಮಮೂರ್ತಿ ಪಿ.
Published 8 ಜನವರಿ 2026, 2:44 IST
Last Updated 8 ಜನವರಿ 2026, 2:44 IST
ದಾವಣಗೆರೆಯ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆಯ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ಡ್ರಗ್ಸ್‌ ವಶಪಡಿಸಿಕೊಂಡಿರುವುದು
ದಾವಣಗೆರೆಯ ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆಯ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ ಡ್ರಗ್ಸ್‌ ವಶಪಡಿಸಿಕೊಂಡಿರುವುದು   

ದಾವಣಗೆರೆ: ಮಾದಕ ದ್ರವ್ಯದ ಸಂಗ್ರಹ, ಮಾರಾಟ, ವ್ಯಾಪಾರ, ಸಾಗಣೆ, ರಫ್ತು, ಆಮದು ಮತ್ತು ಬಳಕೆ ಸಂಬಂಧದ ‘ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ’ (ಎನ್‌ಡಿಪಿಎಸ್) ಅಡಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2019ರಿಂದ 2025ರ ವರೆಗೆ ಒಟ್ಟು 584 ಪ್ರಕರಣಗಳು ದಾಖಲಾಗಿವೆ. 

7 ವರ್ಷಗಳಲ್ಲಿ ಒಟ್ಟು 792 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ಒಟ್ಟು ₹ 83.13 ಲಕ್ಷ  ಮೌಲ್ಯದ ಗಾಂಜಾ, ಎಂಡಿಎಂಎ ಪೌಡರ್, ಆಫೀಮ್, ಕಾಫ್‌ ಸಿರಪ್‌, ಗಾಂಜಾ ಮಿಶ್ರಿತ ಚಾಕಲೇಟ್‌ ಸೇರಿದಂತೆ ವಿವಿಧ ಬಗೆಯ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. 

2019ರಲ್ಲಿ ಎನ್‌ಡಿಪಿಎಸ್‌ ಕಾಯ್ದೆ ಅಡಿ ದಾಖಲಾಗಿದ್ದು 15 ಪ್ರಕರಣಗಳು ಮಾತ್ರ. ನಂತರ ಪ್ರತಿ ವರ್ಷವೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಈ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗುತ್ತಿರುವ ಆರೋಪಿಗಳ ಸಂಖ್ಯೆ ಹಾಗೂ ಜಪ್ತಿಯಾಗುತ್ತಿರುವ ಮಾದಕ ವಸ್ತುಗಳ ಪ್ರಮಾಣವು ದೊಡ್ಡ ಮಟ್ಟದಲ್ಲಿ ಹೆಚ್ಚಾಗುತ್ತಿದೆ.

ADVERTISEMENT

ಎಎನ್‌ಟಿಎಫ್‌ ದಾಳಿ: 

ಜಿಲ್ಲೆಯಲ್ಲಿ 2025ರ ಜುಲೈ 5ರಂದು ರಚನೆಯಾದ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆಯು (ಎಎನ್‌ಟಿಎಫ್‌) ಮಾದಕ ವ್ಯಸನಿಗಳು ಹಾಗೂ ಪೆಡ್ಲರ್‌ಗಳಲ್ಲಿ ಭೀತಿ ಹುಟ್ಟಿಸಿದೆ. ಪಿಎಸ್‌ಐ ಸಾಗರ್ ಅತ್ತಾರವಾಲ್ ನೇತೃತ್ವದ ಪಡೆಯು ಜಿಲ್ಲೆಯ ಮೂಲೆಮೂಲೆಯಲ್ಲೂ ಮಾದಕ ದ್ರವ್ಯಗಳ ಜಾಲದ ಬೆನ್ನು ಹತ್ತಿದೆ.

ನಗರದ ರಾಮ್‌ ಆ್ಯಂಡ್‌ ಕೋ ಸರ್ಕಲ್‌ನಲ್ಲಿ ಪಾನ್‌ ಶಾಪ್‌ನಲ್ಲಿ ಗಾಂಜಾ ಮಿಶ್ರಿತ ಚಾಕ್‌ಲೇಟ್‌ ಮಾರಾಟ, ಉದ್ಯಮಿ ವೇದಮೂರ್ತಿ ಬಂಧನ ಪ್ರಕರಣ, ಮಾದಕ ದ್ರವ್ಯ ಪೂರೈಸುತ್ತಿದ್ದ ನೈಜೀರಿಯಾದ ಇಬ್ಬರು ಪ್ರಜೆಗಳ ಬಂಧನ ಪ್ರಕರಣ ಸೇರಿದಂತೆ ಗಾಂಜಾದ ‘ಭಾರಿ ಕುಳ’ಗಳನ್ನು ಹೆಡೆಮುರಿ ಕಟ್ಟುವಲ್ಲಿ ಎಎನ್‌ಟಿಎಫ್‌ ಯಶಸ್ವಿಯಾಗಿದೆ.

ಮಾರಾಟ ಮತ್ತು ಸಾಗಣೆಗೆ ಸಂಬಂಧಿಸಿದಂತೆ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆಯು ಸ್ಥಾಪನೆಗೊಂಡ 6 ತಿಂಗಳಲ್ಲೇ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಳಿ ನಡೆಸಿ 10 ಪ್ರಕರಣಗಳನ್ನು ದಾಖಲಿಸಿಕೊಂಡು, ಒಟ್ಟು 31 ಜನ ಆರೋಪಿಗಳನ್ನು ಬಂಧಿಸಿದೆ.  

ಪೆಡ್ಲರ್‌ಗಳಿಂದ 7 ಕೆ.ಜಿ. ಗಾಂಜಾ, 110 ಗ್ರಾಂ ಎಂಡಿಎಂಎ ಪೌಡರ್, 200 ಗ್ರಾಂ ಆಫೀಮ್, 220 ಬಾಟಲು ಕಾಫ್‌ ಸಿರಪ್‌, 160 ಗಾಂಜಾ ಮಿಶ್ರಿತ ಚಾಕಲೇಟ್ ಸೇರಿದಂತೆ ಒಟ್ಟು ₹ 35 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 1 ಕಾರ್, 4 ಬೈಕ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಮಾದಕ ವಸ್ತುಗಳ ಸೇವನೆಗೆ ಸಂಬಂಧಿಸಿದಂತೆ 20 ಪ್ರಕರಣಗಳಲ್ಲಿ 35 ಜನ ಆರೋಪಿಗಳನ್ನು ಬಂಧಿಸಿದೆ. ಅಲ್ಲದೇ ವಿವಿಧ ಪೊಲೀಸ್‌ ಠಾಣೆಗಳ ಸಹಕಾರದಲ್ಲಿ ಜಂಟಿ ಕಾರ್ಯಾಚರಣೆಗಳನ್ನೂ ನಡೆಸಿದೆ. ವಿವಿಧ ಠಾಣೆಗಳ ಪೊಲೀಸ್‌ ಸಿಬ್ಬಂದಿಯಾದ ಪ್ರಕಾಶ್ ಎಚ್., ಗೋವಿಂದರಾಜು ಎಸ್‌., ಮಂಜಪ್ಪ ಎಂ., ಷಣ್ಮುಖ ಕೆ., ಶಿವರಾಜ್ ಎಂ.ಎಸ್‌. ಅವರು ಈ ಕಾರ್ಯಪಡೆಯ ಭಾಗವಾಗಿದ್ದಾರೆ. 

ಉಮಾ ಪ್ರಶಾಂತ್
ಸಾಗರ್ ಅತ್ತಾರವಾಲ್
ಮಾದಕ ವಸ್ತು ಪತ್ತೆ ಪ್ರಕರಣಗಳಲ್ಲಿ ಪೊಲೀಸ್ ಇಲಾಖೆ ‘ಶೂನ್ಯ ಸಹಿಷ್ಣುತೆ’ ನಿಯಮ ಪಾಲಿಸುತ್ತಿದೆ. ಎಷ್ಟೇ ಪ್ರಭಾವಿಗಳಿದ್ದರೂ ಕ್ರಮ ಜರುಗಿಸದೇ ಬಿಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಲಾಗಿದೆ
ಉಮಾ ಪ್ರಶಾಂತ್‌ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
‘ನಶೆ ಮುಕ್ತ ದಾವಣಗೆರೆ’ ಪರಿಕಲ್ಪನೆಯಡಿ ಕಾರ್ಯ ನಿರ್ವಹಿಸಲಾಗುತ್ತಿದೆ. ಡ್ರಗ್ಸ್ ಜಾಲದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಗೋಪ್ಯತೆ ಕಾಪಾಡಿಕೊಂಡು ಕಾರ್ಯಾಚರಣೆ ನಡೆಸುತ್ತೇವೆ
ಸಾಗರ್ ಅತ್ತಾರವಾಲ್ ಪಿಎಸ್‌ಐ

243 ಕಾಲೇಜುಗಳಲ್ಲಿ ‘ಮಾದಕ ದ್ರವ್ಯ ವಿರೋಧಿ ಸಮಿತಿ’ 

‘ಮಾದಕ ದ್ರವ್ಯಗಳ ಮಾರಾಟ ಸಾಗಣೆ ಹಾಗೂ ಬಳಕೆಯನ್ನು ತಡೆಗಟ್ಟುವುದು ಮಾತ್ರವಲ್ಲದೇ ಸಾಮಾಜಿಕವಾಗಿ ಅರಿವು ಮೂಡಿಸುವ ಕಾರ್ಯವನ್ನೂ ಮಾದಕ ದ್ರವ್ಯ ನಿಗ್ರಹ ಕಾರ್ಯಪಡೆಯಿಂದ ಮಾಡಲಾಗುತ್ತಿದೆ’ ಎಂದು ಪಿಎಸ್‌ಐ ಸಾಗರ್ ಅತ್ತಾರವಾಲ್ ತಿಳಿಸಿದರು. 

‘ಜಿಲ್ಲೆಯ ವಿವಿಧ ಪುನರ್ವಸತಿ ಕೇಂದ್ರಗಳೊಂದಿಗೆ ಸಮನ್ವಯ ಸಾಧಿಸಿ ವ್ಯಸನಿಗಳಿಗೆ ಕೌನ್ಸ್‌ಲಿಂಗ್ ಮಾಡಿಸಲಾಗುತ್ತಿದೆ. ವಿವಿಧ ಶಾಲೆ– ಕಾಲೇಜುಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ವ್ಯಸನದ ವಿರುದ್ಧ ಅರಿವು ಮೂಡಿಸಲಾಗುತ್ತಿದೆ. ನಿಯಮಿತವಾಗಿ ಹಾಸ್ಟೆಲ್‌ಗಳಿಗೆ ಭೇಟಿ ಮಾಡಿ ಪರಿಶೀಲಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.  ‘ಜಿಲ್ಲೆಯ 243 ಕಾಲೇಜುಗಳಲ್ಲಿ ‘ಮಾದಕ ದ್ರವ್ಯ ವಿರೋಧಿ ಸಮಿತಿ’ಗಳನ್ನು ರಚಿಸಲಾಗಿದೆ. ಪ್ರತಿ ತಿಂಗಳು ಸಂಬಂಧಪಟ್ಟ ಕಾಲೇಜು ಮುಖ್ಯಸ್ಥರೊಂದಿಗೆ ಸಮನ್ವಯ ಸಾಧಿಸಿ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ದಾಖಲಾದ ಪ್ರಕರಣಗಳ ಎಲ್ಲಾ ಆರೋಪಿಗಳನ್ನು ಕರೆಸಿ ವಿಚಾರಣೆ ನಡೆಸಿ ಅವರ ನಿಗಾ ವಹಿಸಿದ್ದೇವೆ’ ಎಂದು ತಿಳಿಸಿದರು.

ಹೊರ ರಾಜ್ಯ ವಿದೇಶಿ ಕೈವಾಡ!

ಜಿಲ್ಲೆಯಲ್ಲಿ ಮಾದಕ ವಸ್ತುಗಳ ಸಾಗಣೆ ಮಾರಾಟ ಮತ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದ ಜಾಲದಲ್ಲಿ ಆಫ್ರಿಕಾದ ನೈಜೀರಿಯಾ ಉತ್ತರ ಭಾರತದ ರಾಜಸ್ಥಾನ ಹರಿಯಾಣ ಗುಜರಾತ್‌ ಮೂಲದವರೂ ಬಂಧನಕ್ಕೆ ಒಳಗಾಗಿರುವುದು ಈ ಜಾಲವು ಮಧ್ಯ ಕರ್ನಾಟಕಕ್ಕೂ ವ್ಯಾಪಿಸಿರುವುದು ಭಾರಿ ಆತಂಕ ಮೂಡಿಸಿದೆ.  ವಿಶೇಷವಾಗಿ ಶಾಲೆ– ಕಾಲೇಜುಗಳ ಯುವಸಮೂಹವನ್ನು ಗುರಿಯಾಗಿಸಿಕೊಂಡಿರುವ ಈ ಸಂಪರ್ಕ ಜಾಲವನ್ನು ಬುಡಸಮೇತ ಕಿತ್ತೆಸೆಯದಿದ್ದರೆ ಯುವಸಮೂಹ ನಶೆಗೆ ಬಲಿಯಾಗುವುದರಲ್ಲಿ ಸಂಶಯವಿಲ್ಲ. ವಿದ್ಯಾ ಕಾಶಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಗರಕ್ಕ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಲೂ ಬೇರೆ ಬೇರೆ ಜಿಲ್ಲೆಗಳ ರಾಜ್ಯಗಳ ಪಾಲಕರು ಮೀನ– ಮೇಷ ಎಣಿಸಬೇಕಾಗುತ್ತದೆ ಎಂಬ ಆತಂಕವನ್ನೂ ಶೈಕ್ಷಣಿಕ ಸಂಸ್ಥೆಗಳು ವ್ಯಕ್ತಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.