ADVERTISEMENT

ಅಶೋಕ ರೈಲ್ವೆ ಗೇಟ್ ಸಮಸ್ಯೆ ಪರಿಹಾರ: ಜಿ.ಎಂ ಸಿದ್ದೇಶ್ವರ

ವರ್ಷದೊಳಗೆ ಸೇತುವೆ, ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣ: ಜಿ.ಎಂ ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 3:02 IST
Last Updated 24 ಫೆಬ್ರುವರಿ 2021, 3:02 IST
ದಾವಣಗೆರೆ ಅಶೋಕ ರಸ್ತೆಯಲ್ಲಿ ಕೆಳಸೇತುವೆ ಮತ್ತು ರಸ್ತೆ ವಿಸ್ತರಣೆಯ ನಕ್ಷೆಯನ್ನು ಪರಿಶೀಲಿಸುತ್ತಿರುವ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಅಧಿಕಾರಿಗಳು
ದಾವಣಗೆರೆ ಅಶೋಕ ರಸ್ತೆಯಲ್ಲಿ ಕೆಳಸೇತುವೆ ಮತ್ತು ರಸ್ತೆ ವಿಸ್ತರಣೆಯ ನಕ್ಷೆಯನ್ನು ಪರಿಶೀಲಿಸುತ್ತಿರುವ ಸಂಸದ ಜಿ.ಎಂ. ಸಿದ್ದೇಶ್ವರ ಮತ್ತು ಅಧಿಕಾರಿಗಳು   

ದಾವಣಗೆರೆ: ಹಲವು ವರ್ಷಗಳಿಂದ ಕಾಡುತ್ತಿರುವ ನಗರದ ಅಶೋಕ ಟಾಕೀಸ್ ಬಳಿಯ ರೈಲ್ವೆ ಗೇಟ್ ಸಮಸ್ಯೆಯನ್ನು ಪರಿಹರಿಸುವ ಪ್ರಕ್ರಿಯೆ ಅಂತಿಮ ಹಂತಕ್ಕೆ ಬಂದಿದೆ. ರೈಲ್ವೆ ಕೆಳಸೇತುವೆ ಹಾಗೂ 60 ಅಡಿ ಅಗಲದ ರಸ್ತೆಯನ್ನು ಶೀಘ್ರದಲ್ಲಿ ಪ್ರಾರಂಭಿ ಸಲಾಗುವುದು. ಒಂದು ವರ್ಷದ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.

ಅಶೋಕ ರಸ್ತೆಯ ವಿಸ್ತರಣೆಯಿಂದ ತೊಂದರೆಗೆ ಒಳಗಾಗುವ ಖಾಸಗಿ ವ್ಯಕ್ತಿಗಳು, ಅಧಿಕಾರಿಗಳ ಜತೆಗೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಚರ್ಚೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಅಶೋಕ ರಸ್ತೆ ಪಕ್ಕದಲ್ಲಿ ಎರಡು ಕಿಂಡಿ ಇಡುತ್ತಾರೆ. ಅದರಿಂದ 300 ಮೀಟರ್‌ ದೂರದಲ್ಲಿ ಎರಡು ವಿಂಟ್‌ ಇಡಲಾಗುತ್ತದೆ. ಅಲ್ಲಿಂದ ಲಿಂಗೇಶ್ವರ ದೇವಸ್ಥಾನದವರೆಗೆ ರಸ್ತೆ ಇದೆ. ಅದರನ್ನು ವಿಸ್ತರಣೆ ಮಾಡಲಾಗುವುದು. ಆ ಕಡೆ ಭಾಗದಲ್ಲಿ ಬಿ.ಟಿ. ಕುಟುಂಬದವರದ್ದು, ಕಿರುವಾಡಿಯವರದ್ದು, ಶಿವಮೂರ್ತಿಯವರದ್ದು, ರಾಜ ಕುಮಾರ್‌ ಅವರಿಗೆ ಸೇರಿದ ಜಮೀನನ್ನು ಬಿಟ್ಟುಕೊಡಲು ಒಪ್ಪಿಕೊಂಡಿದ್ದಾರೆ. ಬಿ.ಟಿಯವರದ್ದು (ಬ್ರಹ್ಮಪ್ಪ ತವಪ್ಪನವರ್‌ ಕುಟುಂಬ) ಕಟ್ಟಡಗಳು ಹೋಗುವುದರಿಂದ ಅವರಿಗೆ ಪರಿಹಾರ ನೀಡಬೇಕಾಗುತ್ತದೆ. ಅದಕ್ಕೆ ಜಿಲ್ಲಾಧಿಕಾರಿ ಅವರು ಪರಿಶೀಲನೆ ನಡೆಸಿ ಪರಿಹಾರ ದರ ನಿಗದಿ ಮಾಡಲಿದ್ದಾರೆ ಎಂದು ವಿವರಿಸಿದರು.

ADVERTISEMENT

ಪರಿಹಾರ ಮತ್ತು ಕಾಮಗಾರಿಗೆ ₹ 35 ಕೋಟಿಯಿಂದ ₹ 40 ಕೋಟಿ ಬೇಕಾಗುತ್ತದೆ. ಪಾಲಿಕೆ ಇಲ್ಲವೇ ಸರ್ಕಾರದ ಅನುದಾನದಲ್ಲಿ ಅದನ್ನು ಮಾಡಲಾಗುವುದು. ಒಟ್ಟು 900 ಮೀಟರ್‌ ದೂರ 60 ಅಡಿ ರಸ್ತೆ ನಿರ್ಮಾಣಗೊಳ್ಳಲಿದೆ. ಅಲ್ಲಿಂದ ಈರುಳ್ಳಿ ಮಾರುಕಟ್ಟೆ ಸಿಗುತ್ತದೆ. ಅಲ್ಲಿ ಡಬಲ್‌ ರಸ್ತೆ ಇದೆ ಎಂದರು.

ಒಟ್ಟು 1.14 ಲಕ್ಷ ಚದರ ಅಡಿ ಭೂಸ್ವಾಧೀನ ಆಗುತ್ತದೆ. ಅದರಲ್ಲಿ 10,947 ಚದರ ಅಡಿಯಷ್ಟು ಬಿಲ್ಡಿಂಗ್‌ ಏರಿಯ ಬರುತ್ತದೆ. ಸತೀಶ್‌ ಅವರಿಗೆ ಸೇರಿದ 815 ಚದರ ಅಡಿ, ರಾಜೀವ್‌ ಅವರ 1,383 ಚದರ ಅಡಿ, ನೇಮಿನಿಯಪ್ಪ ಅವರ 1541 ಚದರ ಅಡಿ, ವಿರೂಪಾಕ್ಷಪ್ಪ ಅವರ 1,712 ಚದರ ಅಡಿ, ಕಿರುವಾಡಿ ವೀರಬಸಪ್ಪ ಮತ್ತು ಮಕ್ಕಳ 3,807 ಚದರ ಅಡಿ ಹೋಗಲಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ರಸ್ತೆ ವಿಸ್ತರಣೆಗೆ ಅಗತ್ಯ ಭೂಮಿಯನ್ನು ಒದಗಿಸಲು ಭೂ ಮಾಲೀಕರು ಒಪ್ಪಿಗೆ ಸೂಚಿಸಿದ್ದು, ಭೂ ಮಾಲೀಕರಿಗೆ ಅನ್ಯಾಯವಾಗದಂತೆ ಅವರಿಗೆ ಪರಿಹಾರ ಒದಗಿಸಲಾಗುವುದು ಎಂದರು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ ಸಹಿತ ವಿವಿಧ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.