ADVERTISEMENT

ಆಶ್ರಯ ಮನೆ ಯೋಜನೆ ಅಡಿಯಲ್ಲಿ 31,000 ಮನೆ ವಿತರಣೆಗೆ ಸಿದ್ಧತೆ: ಸಚಿವ ಜಮೀರ್ ಅಹಮದ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 13:44 IST
Last Updated 26 ಜನವರಿ 2026, 13:44 IST
   

ದಾವಣಗೆರೆ: ರಾಜ್ಯ ಸರ್ಕಾರ ಎರಡೂವರೆ ವರ್ಷಗಳಲ್ಲಿ 80,000 ಆಶ್ರಯ ಮನೆಗಳನ್ನು ಬಡವರಿಗೆ ನೀಡಿದೆ. ಇನ್ನೂ 31,000 ಮನೆಗಳ ವಿತರಣೆಗೆ ಸಿದ್ಧತೆ ನಡೆಸುತ್ತಿದೆ. ವರ್ಷಾಂತ್ಯಕ್ಕೆ 1.18 ಲಕ್ಷ ಮನೆಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದರು.

ಇಲ್ಲಿನ ಹರಿಹರ ರಸ್ತೆಯ ಎಕೆಎಸ್‌ ಕನ್ವೆನ್ಷನ್‌ ಹಾಲ್‌ನಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್‌) ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಸಂಘಟನಾ ಸಭೆ ಹಾಗೂ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸಾವಿರಾರು ಆಶ್ರಯ ಮನೆಗಳಿಗೆ ಅನುಮೋದನೆ ನೀಡಿದ್ದರು. 2019ರ ಬಳಿಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ಆಶ್ರಯ ಮನೆಗೆ ಒತ್ತು ನೀಡಲಿಲ್ಲ. ಬಡವರು ಅನುಭವಿಸುತ್ತಿದ್ದ ತೊಂದರೆಯನ್ನು ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರಿಂದ 2025ರವರೆಗೆ ವಸತಿ ಇಲಾಖೆಗೆ ಹೆಚ್ಚುವರಿಯಾಗಿ ₹ 10,500 ಕೋಟಿ ಅನುದಾನ ನೀಡಿ ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂದು ಹೇಳಿದರು.

ADVERTISEMENT

‘ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಹುಬ್ಬಳ್ಳಿಯಲ್ಲಿ 42,345 ಮನೆಗಳನ್ನು ಈಚೆಗೆ ನೀಡಲಾಗಿದೆ. 2024ರ ಫೆಬ್ರುವರಿಯಲ್ಲಿ 36,784 ಮನೆಗಳನ್ನು ಬಡವರಿಗೆ ವಿತರಿಸಲಾಗಿತ್ತು. ರಾಜೀವ್ ಗಾಂಧಿ ವಸತಿ ಯೋಜನೆಯಡಿ ಕೈಗೆಟುಕುವ ದರದ ಮನೆ ಯೋಜನೆ ಅನುಷ್ಠಾನಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ 13,000 ಮನೆಗಳನ್ನು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ₹ 1,670 ಕೋಟಿ ನೀಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ಗೆ ಇದು ಏಕೆ ಸಾಧ್ಯವಾಗಲಿಲ್ಲ’ ಎಂದು ಪ್ರಶ್ನಿಸಿದರು.

‘ಹಿಂದೂ ಮತ್ತು ಮುಸ್ಲಿಮರ ನಡುವೆ ಕಂದಕ ಸೃಷ್ಟಿಸುವ ಕೆಲಸದಲ್ಲಿ ಬಿಜೆಪಿ ನಿರತವಾಗಿದೆ. ಇವರಿಗೆ ಹಿಂದೂಗಳು ಬೇಕಾಗಿಲ್ಲ, ಮುಸ್ಲಿಮರೂ ಬೇಕಾಗಿಲ್ಲ. ಕುರ್ಚಿ, ಅಧಿಕಾರಕ್ಕಾಗಿ ಕಲಹ ಸೃಷ್ಟಿಸುವ ಷಡ್ಯಂತ್ರ ರೂಪಿಸುತ್ತಿದ್ದಾರೆ. ಹಿಂದೂಸ್ತಾನ ಕೇವಲ ಬಿಜೆಪಿಯವರದ್ದಲ್ಲ. ಸೌಹಾರ್ದಯುತವಾಗಿರುವ ದೇಶ ಎಲ್ಲರಿಗೂ ಸೇರಿದ್ದು’ ಎಂದರು.

‘ಬಿ.ಆರ್. ಅಂಬೇಡ್ಕರ್‌ ಅವರು ಸಂವಿಧಾನ ರೂಪಿಸಿದ ಫಲವಾಗಿ ಈ ದೇಶದ ಶೋಷಿತ ಸಮುದಾಯಗಳಿಗೆ ಹಕ್ಕುಗಳು ಸಿಕ್ಕಿವೆ. ಮುಸ್ಲಿಮರಿಗೆ ಸರ್ಕಾರಿ ಉದ್ಯೋಗ, ರಾಜ್ಯ ಸಚಿವ ಸಂಪುಟದಲ್ಲಿ ನನ್ನಂಥವರಿಗೆ ಅವಕಾಶ ಸಿಕ್ಕಿರುವುದು ಸಂವಿಧಾನದ ಫಲ. ಅಂಬೇಡ್ಕರ್‌ ಕನಸಿನ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ವಿಧಾನಪರಿಷತ್‌ ಸದಸ್ಯರಾದ ಅಬ್ದುಲ್‌ ಜಬ್ಬಾರ್‌, ಬಲ್ಕಿಷ್ ಬಾನು, ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ, ‘ಬೆಸ್ಕಾಂ’ ಮುಖ್ಯ ಎಂಜಿನಿಯರ್‌ ಸೈಯದ್‌ ಮಂಜೂರ್‌ ಹುಸೇನ್‌ ಹಾಜರಿದ್ದರು.

ಹಾಸ್ಟೆಲ್‌ಗೆ ಸಿಎ ನಿವೇಶನ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್‌) ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘವು ದಾವಣಗೆರೆ ಮತ್ತು ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹಾಸ್ಟೆಲ್‌ಗೆ ಕರ್ನಾಟಕ ಗೃಹ ಮಂಡಳಿಯ (ಕೆಎಚ್‌ಬಿ) ನಾಗರಿಕ ಸೌಲಭ್ಯ (ಸಿಎ) ನಿವೇಶನಗಳನ್ನು ನೀಡಲಾಗುವುದು ಎಂದು ಸಚಿವ ಜಮೀರ್‌ ಅಹಮದ್‌ ಖಾನ್‌ ಆಶ್ವಾಸನೆ ನೀಡಿದರು.

‘ಮೆಕ್ಕಾ ಯಾತ್ರೆಗೆ ಪ್ರತಿ ವರ್ಷ ಯಾತ್ರಿಕರನ್ನು ಕಳುಹಿಸಿಕೊಡಲಾಗುತ್ತಿದೆ. ಕೆಪಿಟಿಸಿಎಲ್‌ನ ನಿವೃತ್ತ ನೌಕರರಲ್ಲಿ 50 ಜನರಿಗೆ ಈ ಬಾರಿ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಸಂಘದ ಬೇಡಿಕೆಗಳನ್ನು ರಂಜಾನ್‌ಗೂ ಮುನ್ನವೇ ಈಡೇರಿಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.