ADVERTISEMENT

ಐಸಿಸಿ ಸಭೆ ಕರೆದು ವೇಳಾಪಟ್ಟಿ ಪ್ರಕಟಿಸಿ; ಶಾಸಕ ಬಿ.ಪಿ. ಹರೀಶ್

ಹರಿಹರ ಶಾಸಕ ಬಿ.ಪಿ. ಹರೀಶ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜನವರಿ 2024, 16:10 IST
Last Updated 3 ಜನವರಿ 2024, 16:10 IST
 ಬಿ.ಪಿ ಹರೀಶ್
 ಬಿ.ಪಿ ಹರೀಶ್   

ದಾವಣಗೆರೆ: ‘ಭದ್ರಾ ಜಲಾಶಯದಿಂದ ನಾಲೆಗಳಿಗೆ ನೀರು ಹರಿಸುವ ಸಂಬಂಧ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ) ಯನ್ನು ತಕ್ಷಣ ಕರೆದು, ನೀರು ಹರಿಸುವ ವೇಳಾಪಟ್ಟಿಯನ್ನು ಪ್ರಕಟಿಸಬೇಕು’ ಎಂದು ಹರಿಹರ ಕ್ಷೇತ್ರದ ಶಾಸಕ ಬಿ.ಪಿ. ಹರೀಶ್ ಆಗ್ರಹಿಸಿದರು.

‘ಕಾಂಗ್ರೆಸ್ ಸರ್ಕಾರ ಬಂದು 7 ತಿಂಗಳಾದರೂ ಐಸಿಸಿ ಸಭೆ ಕರೆದಿಲ್ಲ. ಸಚಿವ ಮಧು ಬಂಗಾರಪ್ಪ ಅವರಿಗೆ ಜವಾಬ್ದಾರಿ ವಹಿಸಿದ್ದು, ಇಷ್ಟಬಂದಂತೆ ಅವರು ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಸಲಹಾ ಸಮಿತಿಗೆ ಸದಸ್ಯರ ನೇಮಕವಾಗದಿದ್ದರೂ ಆಯಾ ಕ್ಷೇತ್ರದ ಶಾಸಕರು ಸದಸ್ಯರಾಗಿರುವುದರಿಂದ ಹರಿಹರ, ಹರಪನಹಳ್ಳಿ ಹಾಗೂ ದಾವಣಗೆರೆ ಶಾಸಕರ ಜೊತೆ ಚರ್ಚಿಸಿ ಆರೋಗ್ಯಕರ ಚರ್ಚೆ ಮೂಲಕ ತೀರ್ಮಾನ ಕೈಗೊಳ್ಳಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಭದ್ರಾ ಜಲಾಶಯದಲ್ಲಿ ಪ್ರಸ್ತುತ 151.5 ಅಡಿ ನೀರು ಅಂದರೆ 35.37 ಟಿ.ಎಂ.ಸಿ ಅಡಿ ನೀರು ಸಂಗ್ರಹ ಇದೆ. ಈ ಪೈಕಿ 13.83 ಟಿ.ಎಂ.ಸಿ ಅಡಿಯಷ್ಟು ಡೆಡ್ ಸ್ಟೋರೇಜ್ ಹೊರತುಪಡಿಸಿದರೆ 21.54 ಟಿ.ಎಂ.ಸಿ ನೀರು ಬಳಕೆಗೆ ಲಭ್ಯವಾಗುತ್ತದೆ. ಆದ್ದರಿಂದ ಈ ನೀರನ್ನು 72 ದಿನ ನಾಲೆಯಲ್ಲಿ ಹರಿಸಬಹುದು. ಆದ್ದರಿಂದ ಶೀಘ್ರವೇ ನೀರು ಹರಿಸುವ ವೇಳಾಪಟ್ಟಿ ಹೊರಡಿಸಿದಲ್ಲಿ, ರೈತರು ಯಾವ ಬೆಳೆ ಬೆಳೆಯಬೇಕು ಎಂಬುದನ್ನು ತೀರ್ಮಾನಿಸಿಕೊಳ್ಳುತ್ತಾರೆ’ ಎಂದರು.

ADVERTISEMENT

‘ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಭದ್ರಾ ಜಲಾಶಯದ ನೀರು ಅವಲಂಬಿಸಿರುವುದರಿಂದ ತಕ್ಷಣ ಐಸಿಸಿ ಸಭೆ ಕರೆದು ಕೆರೆಗಳಿಗೆ ನೀರು ತುಂಬಿಸಬೇಕು. 72 ದಿನ ನೀರು ಹರಿಸಲು ವೇಳಾಪಟ್ಟಿ ತಯಾರಿಸಬೇಕು. ಭದ್ರಾ ಜಲಾಶಯದಲ್ಲಿ ಪ್ರತಿದಿನ 300-400 ಕ್ಯುಸೆಕ್ ನೀರು ಪೋಲಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಸೋರಿಕೆ ನಿಯಂತ್ರಿಸಬೇಕು’ ಎಂದು ಆಗ್ರಹಿಸಿದರು.

‘ಈ ಹಿಂದೆ ಜಲ ಸಂಪನ್ಮೂಲ ಸಚಿವ ಡಿ‌.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಐಸಿಸಿ ಸಭೆ ಕರೆದರೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಮಧು ಬಂಗಾರಪ್ಪ ಅವರು ಸಮಯ ನಿಗದಿಪಡಿಸಿ ಐಸಿಸಿ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡರಾದ ಶಾಮನೂರು ಎಚ್.ಆರ್. ಲಿಂಗರಾಜ್, ಬಿ.ಎಂ. ಸತೀಶ್ ಕೊಳೇನಹಳ್ಳಿ, 6ನೇ ಕಲ್ಲು ವಿಜಯಕುಮಾರ್, ಚಿಕ್ಕಬೂದಿಹಾಳ ಭಗತ್ ಸಿಂಹ ಇದ್ದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಬೇರೆ ಯಾರೂ ಆಕಾಂಕ್ಷಿಗಳಿದ್ದಾರೊ ಗೊತ್ತಿಲ್ಲ. ನಾನೂ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಪಕ್ಷದ ವರಿಷ್ಠರು ಜವಾಬ್ದಾರಿ ವಹಿಸಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ.
ಬಿ.ಪಿ. ಹರೀಶ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.