ADVERTISEMENT

ಬ್ಯಾಲೆಟ್‌ ಪ್ರತಿ ಅದಲು ಬದಲು: ಮತದಾನ ಬಹಿಷ್ಕಾರ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 14:10 IST
Last Updated 27 ಡಿಸೆಂಬರ್ 2020, 14:10 IST
ಹರಪನಹಳ್ಳಿ ತಾಲ್ಲೂಕು ಮತ್ತಿಹಳ್ಳಿ ಗ್ರಾಮದ 3 ಮತ್ತು 4ನೇ ವಾರ್ಡ್ ಮತಗಟ್ಟೆಗೆ ಭೇಟಿ ನೀಡಿದ ಬಳ್ಳಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಎಸ್ಪಿ ಸೈದುಲ್ಲಾ ಅಡಾವತ್ ಚರ್ಚೆ ನಡೆಸಿದರು.
ಹರಪನಹಳ್ಳಿ ತಾಲ್ಲೂಕು ಮತ್ತಿಹಳ್ಳಿ ಗ್ರಾಮದ 3 ಮತ್ತು 4ನೇ ವಾರ್ಡ್ ಮತಗಟ್ಟೆಗೆ ಭೇಟಿ ನೀಡಿದ ಬಳ್ಳಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಎಸ್ಪಿ ಸೈದುಲ್ಲಾ ಅಡಾವತ್ ಚರ್ಚೆ ನಡೆಸಿದರು.   

ಹರಪನಹಳ್ಳಿ: ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ 3 ಮತ್ತು 4ನೇ ವಾರ್ಡ್‌ನಲ್ಲಿ ಬ್ಯಾಲೆಟ್ ಪ್ರತಿಗಳು ಅದಲು ಬದಲಾಗಿವೆ ಎಂದು ಆರೋಪಿಸಿ ಗ್ರಾಮಸ್ಥರು ಭಾನುವಾರ ಮತದಾನ ಬಹಿಷ್ಕರಿಸಿದರು.

ಬೆಳಿಗ್ಗೆ ಮತಗಟ್ಟೆ ಆವರಣದಲ್ಲಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಸ್ಪರ್ಧೆ ಮಾಡಿರುವ ಮತ ಕ್ಷೇತ್ರಗಳ ಪ್ರಕಾರ ಬ್ಯಾಲೆಟ್‌ ಮುದ್ರಿಸಿ ಮತದಾನಕ್ಕೆ ಅವಕಾಶ ಕೊಡಬೇಕು. ಇಲ್ಲದಿದ್ದರೆ ಚುನಾವಣೆ ಮುಂದೂಡಿ ಎಂದು ಒತ್ತಾಯಿಸಿದರು.

ವಾರ್ಡ್-3ರಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದು, 4 ಸ್ಥಾನ ಆಯ್ಕೆ ಮಾಡಬೇಕಾಗಿದೆ. ವಾರ್ಡ್ ಸಂಖ್ಯೆ 4ರಲ್ಲಿ 3 ಸದಸ್ಯ ಸ್ಥಾನ ಆಯ್ಕೆ ಮಾಡಬೇಕಿದ್ದು, 7 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡು ಕಡೆಯ ಅಭ್ಯರ್ಥಿಗಳು ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ್ದರೂ, ಅವುಗಳಲ್ಲಿ ವಾರ್ಡ್ ಸಂಖ್ಯೆ ಮತ್ತು ಅಭ್ಯರ್ಥಿಗಳ ಪಟ್ಟಿ ಅದಲು ಬದಲಾಯಿಸಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

ಸ್ಥಳಕ್ಕೆ ದೌಡಾಯಿಸಿದ ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನ ಕುಮಾರ, ತಹಶೀಲ್ದಾರ್ ನಂದೀಶ್ ಬೇಟಿ, ಗ್ರಾಮಸ್ಥರೊಂದಿಗೆ ಚರ್ಚಿಸಿ, ‘ವಾರ್ಡ್ -3ರಲ್ಲಿ 3 ಸದಸ್ಯ ಸ್ಥಾನಗಳಿವೆ. 7 ಅಭ್ಯರ್ಥಿಗಳಿದ್ದಾರೆ. ವಾರ್ಡ್-4ರಲ್ಲಿ 4 ಸದಸ್ಯ ಸ್ಥಾನಗಳಿದ್ದು, 10 ಜನ ಅಭ್ಯರ್ಥಿಗಳಿದ್ದಾರೆ. ಅದರಂತೆ ಮತದಾನ ಪ್ರತಿ (ಬ್ಯಾಲೆಟ್‌)ನಲ್ಲಿ ಸರಿಯಾಗಿಯೆ ಮುದ್ರಿಸಲಾಗಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ತಪ್ಪಾಗಿ ಸಲ್ಲಿಸಿದ್ದಾರೆ. ಇದು ಅಧಿಕಾರಿಗಳಿಂದ ಆಗಿರುವ ತಪ್ಪಲ್ಲ’ ಎಂದು ಮನವರಿಕೆ ಮಾಡಿದರು.

ಪಟ್ಟು ಸಡಿಲಿಸದ ಮತದಾರರು ಸಂಜೆ 5ರ ವರೆಗೂ ಮತಗಟ್ಟೆಯತ್ತ ಸುಳಿಯದೇ, ಚುನಾವಣೆ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಧರಣಿ ಮುಂದುವರಿಸಿದರು. ಅಷ್ಟು ಹೊತ್ತಿಗೆ ಬಂದ ಪೊಲೀಸರು ಪ್ರತಿಭಟನಕಾರರನ್ನು ಚದುರಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಬಳ್ಳಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಅಧಿಕಾರಿಗಳು, ರಿಟರ್ನಿಂಗ್ ಅಧಿಕಾರಿ ಮತ್ತು ಸಹಾಯಕ ರಿಟರ್ನಿಂಗ್ ಅಧಿಕಾರಿಗಳ ಸಭೆ ನಡೆಸಿದರು.

ಎರಡು ವಾರ್ಡ್‍ನ 17 ಅಭ್ಯರ್ಥಿಗಳ ನಾಮಪತ್ರಗಳು, ಬ್ಯಾಲೆಟ್ ಪ್ರತಿಗಳನ್ನು ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಡಿಸಿ, ‘ನಾಮಪತ್ರಗಳು ಕ್ರಮಬದ್ಧವಾಗಿವೆ. ಯಾವ ಪ್ರತಿಗಳನ್ನು ಅಧಿಕಾರಿಗಳು ತಿದ್ದುಪಡಿ ಮಾಡಿಲ್ಲ. ಅಭ್ಯರ್ಥಿಗಳು ವಾರ್ಡ್ ಸಂಖ್ಯೆ 3ಮತ್ತು 4ರಲ್ಲಿ ನಿಗದಿ ಆಗಿರುವ ಸದಸ್ಯ ಸ್ಥಾನಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳದೇ, ನಾಮಪತ್ರಗಳನ್ನು ಭರ್ತಿ ಮಾಡುವಾಗ ತಪ್ಪು ಮಾಡಿದ್ದಾರೆ. ಹಾಗಾಗಿ ಮತದಾನ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಮತದಾನಕ್ಕೆ ಬರುವವರಿಗೆ ರಕ್ಷಣೆ ಕೊಡಲಾಗುವುದು’ ಎಂದರು. ಆದರೂ ಮತದಾರರು ಬರಲಿಲ್ಲ. ಅಂಚೆ ಮತದಾನದ ಮಾಹಿತಿ ಸಿಗಲಿಲ್ಲ.

ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್, ತಹಶೀಲ್ದಾರ್ ನಂದೀಶ್, ಡಿವೈಎಸ್ಪಿ ವಿ.ಎಸ್. ಹಾಲಮೂರ್ತಿ ರಾವ್, ಸಿಪಿಐ ಕುಮಾರ್ ಹಾಗೂ ಅಧಿಕಾರಿಗಳು,ಗ್ರಾಮದ ಮುಖಂಡರಾದ ಮೈದೂರು ರಾಮಪ್ಪ, ಕೆಂಚನಗೌಡ್ರು, ಸಣ್ಣನಿಂಗಪ್ಪ, ಸಣ್ಣಲಿಂಗನಗೌಡ, ಹಾಲೇಶ್, ಕರಿಬಸಪ್ಪ, ಮಂಜುನಾಥ್, ಮಲ್ಲೇಶ್, ಕೊಟ್ರೇಶ್, ಆರ್.ನಾಗರಾಜ್, ಪ್ರಕಾಶ್ ಶ್ರವಣಕುಮಾರ್, ಚನ್ನ‍ಪ್ಪ, ಬಸವರಾಜ್, ಎಸ್. ಕೊಟ್ರೇಶ್, ಕಲ್ಲೇಶ್‍ಗೌಡ, ಶಿವಲಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.