ADVERTISEMENT

ಸಮೃದ್ಧ ಸಾಹಿತ್ಯದ ಬಂಜಾರ ಭಾಷೆ: ಪಿ.ಕೆ.ಖಂಡೋಬಾ

ಬಂಜಾರ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಉದ್ಘಾಟನೆ, ಪದಗ್ರಹಣ ಸಮಾರಂಭ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 7:10 IST
Last Updated 17 ನವೆಂಬರ್ 2025, 7:10 IST
ದಾವಣಗೆರೆಯ ಕು‌ವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವನ್ನು ಗಣ್ಯರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು
ದಾವಣಗೆರೆಯ ಕು‌ವೆಂಪು ಕನ್ನಡ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭವನ್ನು ಗಣ್ಯರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು   

ದಾವಣಗೆರೆ: ‘ಬಂಜಾರ ಸಮುದಾಯವು ಸಮೃದ್ಧ ಹಾಗೂ ಶ್ರೀಮಂತಿಕೆಯಿಂದ ಕೂಡಿದ ಜೀವಂತಿಕೆಯ ಸಾಹಿತ್ಯವನ್ನು ಹೊಂದಿದೆ’ ಎಂದು ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು ರಾಜ್ಯ ಘಟಕದ ಗೌರವಾಧ್ಯಕ್ಷ ಪಿ.ಕೆ.ಖಂಡೋಬಾ ಅಭಿಪ್ರಾಯಪಟ್ಟರು. 

ಇಲ್ಲಿನ‌ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ಬಂಜಾರ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

‘ಬಂಜಾರ ಸಮುದಾಯ ಕರ್ನಾಟಕ ಮಾತ್ರವಲ್ಲದೇ ದೇಶದ ಬಹುತೇಕ ರಾಜ್ಯಗಳಲ್ಲಿ ನೆಲೆಸಿದೆ. ಲಿಪಿ ಇಲ್ಲದ ಬಂಜಾರ ಭಾಷೆಯು 2 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ದೇಶಾದ್ಯಂತ 735 ಹಾಗೂ ರಾಜ್ಯದಲ್ಲಿ 63 ಬುಡಕಟ್ಟು ಸಮುದಾಯಗಳಿವೆ. ಆದರೆ, ಯಾವ ಬುಡಕಟ್ಟು ಸಮುದಾಯವೂ ಸಾಹಿತ್ಯ ಪರಿಷತ್ ಹೊಂದಿಲ್ಲ’ ಎಂದು ಹೇಳಿದರು. 

ADVERTISEMENT

‘ಪರಿಷತ್ ರಚನೆಯಿಂದ ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಬಂಜಾರ ಭಾಷೆಯಲ್ಲಿ ಅದ್ಭುತ ಸಾಹಿತ್ಯವಿದೆ. ಮಹಾಕಾವ್ಯ, ಪುರಾಣ ಸಾಹಿತ್ಯವನ್ನೂ ಒಳಗೊಂಡಿದೆ. ಅಭಿವೃದ್ಧಿ ಕಾರ್ಯದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳೂ ಅಗತ್ಯ. ಸಾಹಿತ್ಯ, ಸಂಸ್ಕೃತಿಯ ಉನ್ನತೀಕರಣದ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿಲ್ಲ’ ಎಂದರು. 

‘ಕಾವ್ಯ ಕಟ್ಟುವ, ಹಾಡು ಹಾಡುವ, ವಿಮರ್ಶೆ ಮಾಡುವ ಸೃಜನಶೀಲತೆ ಬಂಜಾರ ಸಮುದಾಯದಲ್ಲಿದೆ. ಅದನ್ನು ಬಂಜಾರ ಸಾಹಿತ್ಯ ಪರಿಷತ್ ಮೂಲಕ ಉಳಿಸಿಕೊಳ್ಳಬೇಕಾದ ಹೊಣೆಗಾರಿಕೆ ಸಮುದಾಯದವರ ಮೇಲಿದೆ’ ಎಂದು ಹೇಳಿದರು. 

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. 

ಮಾಯಕೊಂಡ ಮಾಜಿ ಶಾಸಕ ಬಸವರಾಜ ನಾಯ್ಕ, ರಾಜ್ಯ ಘಟಕದ ಅಧ್ಯಕ್ಷ ಶ್ರೀಕಾಂತ ಜಾಧವ್, ಉಪಾಧ್ಯಕ್ಷರಾದ ನರಸಿಂಗ್ ಲಮಾಣಿ, ಹಾಲ್ಯಾನಾಯ್ಕ, ಪ್ರಧಾನ ಕಾರ್ಯದರ್ಶಿ ಎಲ್.ಪಿ.ನಾಯ್ಕ ಕಠಾರಿ, ಖಜಾಂಚಿ ಮೋತಿಲಾಲ ರಾಠೋಡ್, ಪ್ರಮುಖರಾದ ಖಂಡೂ ಬಂಜಾರ, ಉತ್ತಮ ಮೂಡ್, ವಿಜಯ ಜಾಧವ್, ಹನುಮಂತ ನಾಯ್ಕ, ಎಂ.ಉಮೇಶ ನಾಯ್ಕ, ಎಂ.ಡಿ.ನಾಗರಾಜ ಹಾಗೂ ಇನ್ನಿತರರು ಭಾಗವಹಿಸಿದ್ದರು. 

ಕವಿತಾ ನಾಯ್ಕ ಪ್ರಾರ್ಥಿಸಿ, ಶಿವಕಾಂತ ನಾಯ್ಕ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ಯುವತಿಯರು ಆಕರ್ಷಕವಾದ ಬಂಜಾರ ಸಮುದಾಯದ ಉಡುಪು ಧರಿಸಿ ಗಮನ ಸೆಳೆದರು ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ

‘ಶ್ರೀಮಂತ ಸಂಸ್ಕೃತಿ’

‘ಅನೇಕ ಅಡೆತಡೆಗಳ ನಡುವೆಯೂ ಬಂಜಾರ ಸಮುದಾಯ ಭಾರತದ ಬಹುಭಾಗವನ್ನು ಆಳಿದೆ. ಸಮುದಾಯದ ಸಂಸ್ಕೃತಿ ಆಚಾರ ವಿಚಾರಗಳನ್ನು ಉಳಿಸುವ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಈ ಸಂಘಟನೆಯನ್ನು ಹುಟ್ಟುಹಾಕಲಾಗಿದೆ’ ಪರಿಷತ್‌ನ ಎಂದು ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಟೇಶ್ ತಿಳಿಸಿದರು. 

‘ಬಂಜಾರ ಸಮುದಾಯ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದೆ. ಸಮುದಾಯಕ್ಕೆ ಮೌಖಿಕ ಸಾಹಿತ್ಯದ ಬಲ ಇದೆ. ಸಮುದಾಯದವರು ಸಾಕಷ್ಟು ಸಾಹಿತ್ಯ ಕೃಷಿ ಮಾಡಬೇಕಿದೆ’ ಎಂದರು. 

ಬಹಳಷ್ಟು ಸಂಘಟನೆಗಳು ಕ್ರಮೇಣ ಅಸ್ತಿತ್ವ ಕಳೆದುಕೊಳ್ಳುತ್ತವೆ. ಈ ಸಂಘಟನೆ ಹಾಗಾಗಬಾರದು. ಎಲ್ಲರೂ ಸೇರಿ ಸಮುದಾಯದ ಪ್ರಗತಿಗೆ ಶ್ರಮಿಸೋಣ
–ಹನುಮಂತನಾಯ್ಕ ಎನ್. ಭಾಯಾಗಡ್, ಮಹಾಮಠ ಕಮಿಟಿಯ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.