
ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿಯಲ್ಲಿ ವಿಶ್ವಗುರು ಬಸವಣ್ಣನವರ ಪುತ್ಥಳಿ ನಿರ್ಮಾಣ ಕುರಿತು ತಾಲ್ಲೂಕಿನ ಗೊಲ್ಲರಹಳ್ಳಿಯಲ್ಲಿರುವ ತರಳಬಾಳು ಸಮುದಾಯ ಭವನದಲ್ಲಿ ಶನಿವಾರ ಪೂರ್ವಭಾವಿ ಸಭೆ ನಡೆಯಿತು.
ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದಲ್ಲಿ ಎಲ್ಲಾ ಜಾತಿ ಜನಾಂಗದವರನ್ನು ಒಗ್ಗೂಡಿಸಿ ಸಮಾಜದ ಸುಧಾರಣೆಗೆ ಕಲ್ಯಾಣ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಆದ್ದರಿಂದ ನಾವು ಕೂಡಾ ಎಲ್ಲರ ಬೆಂಬಲದೊಂದಿಗೆ ಬಸವಣ್ಣನವರ ಪುತ್ಥಳಿ ಸ್ಥಾಪನೆ ಮಾಡಬೇಕಾಗಿದೆ. ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಬಸವಣ್ಣನವರ ಪುತ್ಥಳಿ ನಿರ್ಮಾಣ ಮಾಡುವ ಪೂರ್ವದಲ್ಲಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಇಲ್ಲವೇ ಪುರಸಭೆಗಳಲ್ಲಿ ಸಭೆ ನಡೆಸಿ ಠರಾವು ಪಾಸು ಮಾಡಿ, ಸೂಕ್ತ ಹಾಗೂ ಸುರಕ್ಷಿತ ಜಾಗದಲ್ಲಿ ಸ್ಥಾಪನೆ ಮಾಡಬೇಕಾಗಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು.
‘ಬಸವ ಪುತ್ಥಳಿ ನಿರ್ಮಾಣ ಮಾಡುತ್ತಿರುವುದು ಯಾವುದೇ ಸಮಾಜದ ವಿರುದ್ಧವಲ್ಲ. ಬಸವಣ್ಣ ವಿಶ್ವಗುರು, ಜಾತ್ಯಾತೀತ ವ್ಯಕ್ತಿ, ಅವರ ಪುತ್ಥಳಿ ನಿರ್ಮಾಣಕ್ಕೆ ನಾನು ಸೇರಿದಂತೆ ಹಾಲಿ ಶಾಸಕರು, ಮಾಜಿ ಶಾಸಕರು ಮತ್ತು ಸಾವಿರಾರು ಜನ ಆಸಕ್ತಿ ತೋರಿದ್ದಾರೆ. ಒಂದು ಸಮಿತಿ ರಚನೆ ಮಾಡಿ ಆದಷ್ಟು ಬೇಗ ಕಾರ್ಯಪ್ರವೃತ್ತರಾಗೋಣ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಬಸವಣ್ಣನವರ ಪುತ್ಥಳಿ ನಿರ್ಮಾಣ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದು, ಈಗ ಕಾಲ ಕೂಡಿ ಬಂದಿದೆ. ಪುತ್ಥಳಿಗೆ ಹಣ ಕೊಡುವವರು ಸಾಕಷ್ಟು ಜನರಿದ್ದಾರೆ. ಆದರೆ ಅದಕ್ಕೂ ಪೂರ್ವದಲ್ಲಿ ಜಾಗದ ಆಯ್ಕೆ ಬಹಳ ಮುಖ್ಯ. ವೀರಶೈವ ಲಿಂಗಾಯತ ಸಮಾಜಬಾಂಧವರ ಜೊತೆಗೆ ಇತರೆ ಎಲ್ಲಾ ಜಾತಿಗಳ ಬೆಂಬಲ ಪಡೆದು ಪುತ್ಥಳಿ ಸ್ಥಾಪನೆ ಮಾಡಿದರೆ ಅದು ಶಾಶ್ವತವಾಗಿರುತ್ತದೆ ಎಂದು ಮಾಜಿ ಶಾಸಕ ಡಿ.ಬಿ. ಗಂಗಪ್ಪ ತಿಳಿಸಿದರು.
ಹೊನ್ನಾಳಿ ಮತ್ತು ನ್ಯಾಮತಿ ಎರಡೂ ತಾಲ್ಲೂಕುಗಳಲ್ಲಿ ಎರಡು ಪುತ್ಥಳಿ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸುವ ವಿಶ್ವಾಸವಿದೆ ಎಂದು ಸಾಧುವೀರಶೈವ ಸಮಾಜದ ಅಧ್ಯಕ್ಷ ಹುಣಸಘಟ್ಟ ಗದ್ದಿಗೇಶ್ ಹೇಳಿದರು.
ರೈತ ಮುಖಂಡ ಕರಿಬಸಪ್ಪ ಗೌಡ, ಜಿ.ಪಂ. ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್, ಕೆ.ಎಚ್. ಗುರುಮೂರ್ತಿ, ಕೆಂಗಲಹಳ್ಳಿ ಷಣ್ಮುಖಪ್ಪ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ರಮೇಶ್, ಶಿವ ಬ್ಯಾಂಕ್ ಅಧ್ಯಕ್ಷ ಚಂದ್ರಪ್ಪ, ನ್ಯಾಮತಿ ಸಾಧುವೀರಶೈವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಪ್ಪ, ನ್ಯಾಮತಿ ಬಸವ ಬಳಗದ ಅಧ್ಯಕ್ಷ ನಾಗರಾಜ್, ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ವೀರಣ್ಣ, ಬೇಡ ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ ಪಂಚಾಕ್ಷರಿ, ಅರಕೆರೆ ಹನುಮಂತಪ್ಪ, ನಾಗರಾಜ್, ನೊಳಂಬ ಸಮುದಾಯದ ಶಾಂತರಾಜ್ ಪಾಟೀಲ್, ಚನ್ನವೀರಪ್ಪ, ರುದ್ರಗೌಡ, ಅರಕೆರೆ ಮಧುಗೌಡ ಮಾತನಾಡಿದರು.
ಪುತ್ಥಳಿ ನಿರ್ಮಾಣಕ್ಕೆ ಸ್ಥಳ ಸೂಚನೆ
ಹೊನ್ನಾಳಿಯಲ್ಲಿ ವಡ್ಡಿನಕೆರೆ ಹಳ್ಳಿದ ಪಕ್ಕದಲ್ಲಿರುವ ಉದ್ಯಾನವನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ತಾಲ್ಲೂಕು ಕಚೇರಿ ಮುಂಭಾಗ ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದ ಸರ್ಕಲ್ ಗಳ ಹೆಸರುಗಳಲ್ಲಿ ಯಾವುದಾದರೂ ಒಂದು ಹೆಸರನ್ನು ಸೂಚನೆ ಮಾಡುವ ಕುರಿತು ಪ್ರಸ್ತಾಪ ಮಾಡಿದರು. ಅದೇ ರೀತಿ ನ್ಯಾಮತಿಯಲ್ಲಿ ಮಹಾಂತೇಶ್ವರ ಕಲ್ಯಾಣ ಮಂಟಪದ ಸಮೀಪ ಸುರಹೊನ್ನೆ ಸರ್ಕಲ್ ಗಳ ಹೆಸರುಗಳನ್ನು ಬಹುತೇಕರು ಸೂಚನೆ ಮಾಡಿದ್ದು ಕೇಳಿಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.