ದಾವಣಗೆರೆ: ಜಿಲ್ಲೆಯಲ್ಲಿ ಬಸ್ ವ್ಯವಸ್ಥೆ ಹೊಂದಿಲ್ಲದ ಗ್ರಾಮ ಹಾಗೂ ಸಾರಿಗೆ ಸೌಲಭ್ಯದ ಅಗತ್ಯವಿರುವ ಮಾರ್ಗಗಳಿಗೆ ಸಂಚಾರ ವ್ಯವಸ್ಥೆ ಒದಗಿಸಬೇಕು. ಶಾಲೆ–ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಚನ್ನಗಿರಿ ತಾಲ್ಲೂಕಿನ ಅಮ್ಮನಗುಡ್ಡ, ಕೆರೆಬಿಳಚಿ, ಹೊಸೂರು ಸೇರಿ ಹಲವೆಡೆ ಸಾರಿಗೆ ಸೌಲಭ್ಯವಿಲ್ಲ. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ಸಂಚಾರ ಇಲ್ಲದಿರುವ ಗ್ರಾಮಗಳನ್ನು ಗುರುತಿಸಬೇಕು. ಸಾಧ್ಯವಿರುವ ಎಲ್ಲಾ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದರು.
‘ಬಸ್ ಕೊರತೆ ಇರುವ ಮಾರ್ಗಗಳನ್ನು ಗುರುತಿಸಬೇಕು. ಇರುವ ಸಂಪನ್ಮೂಲವನ್ನೇ ಬಳಸಿಕೊಂಡು ಬಸ್ ಸಂಚಾರ ಸಾಧ್ಯತೆ ಪರಿಶೀಲಿಸಬೇಕು. ಅಗತ್ಯತೆಗೆ ಅನುಗುಣವಾಗಿ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಈ ಮೂಲಕ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕ್ರಮವಹಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲ ರಾವ್ ಸೂಚಿಸಿದರು.
‘ವಿಭಾಗೀಯ ಮಟ್ಟದಲ್ಲಿ ಬಸ್‌ಗಳ ಕೊರತೆ ಇದೆ. 51 ಬಸ್ ಅಗತ್ಯ ಇರುವ ಬಗ್ಗೆ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಶಕ್ತಿ ಯೋಜನೆ ಆರಂಭವಾದ ಬಳಿಕ ಹಲವು ಮಾರ್ಗಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯವಿರುವ ಮಾರ್ಗಗಳನ್ನು ಗುರುತಿಸಿ ಸಂಚಾರ ವ್ಯವಸ್ಥೆಗೆ ಕ್ರಮವಹಿಸಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಗ್ಯಾರಂಟಿ ಸಮಿತಿ ಉಪಾಧ್ಯಕ್ಷರಾದ ಕೆ.ಎನ್.ಮಂಜುನಾಥ್, ಅನೀಸ್ ಪಾಶಾ, ನಂಜನಾಯ್ಕ, ರಾಜೇಶ್ವರಿ ಹಾಜರಿದ್ದರು.
ತೂಕದ ಯಂತ್ರದ ಕುರಿತು ದೂರುಗಳು ಕೇಳಿ ಬರುತ್ತಿವೆ. ನ್ಯಾಯಬೆಲೆ ಅಂಗಡಿಯ ಪಡಿತರದಲ್ಲಿ ತೂಕ ಕಡಿಮೆ ಇರುವುದು ಕಂಡುಬಂದಲ್ಲಿ ಇಲಾಖೆಗೆ ದೂರು ನೀಡಿಗಿತ್ತೆ ಮಾಧವ ವಿಠಲ ರಾವ್ ಸಿಇಒ ಜಿಲ್ಲಾ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.