
ದಾವಣಗೆರೆ: ಧಾರವಾಡದ ಕೆಎಲ್‌ಇ ತಂಡ ಹಾಗೂ ವಿಜಯಪುರದ ಡೈಸ್ ತಂಡ ಬ್ಯಾಸ್ಕೆಟ್ ಬಾಲ್ ಟೂರ್ನಿಯ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಗುರುವಾರ ಗೆಲುವು ಸಾಧಿಸಿದವು.
ನಗರದ ಜಿ.ಎಂ. ವಿಶ್ವವಿದ್ಯಾಲಯದಲ್ಲಿ ಜಿ.ಮಲ್ಲಿಕಾರ್ಜುನಪ್ಪ ಹಾಗೂ ಜಿ.ಎಂ. ಹಾಲಮ್ಮ ಸ್ಮರಣಾರ್ಥ ಆರಂಭವಾಗಿರುವ ಮೂರು ದಿನಗಳ ಬ್ಯಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಎರಡು ತಂಡಗಳು ಯಶಸ್ಸು ದಾಖಲಿಸಿದವು.
ಪುರುಷರ ವಿಭಾಗದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಧಾರವಾಡದ ಕೆಎಲ್‌ಇ ತಂಡವು (20) ಚಿತ್ರದುರ್ಗ ತಂಡವನ್ನು (19) ಒಂದು ಪಾಯಿಂಟ್‌ನಿಂದ ಮಣಿಸಿತು. ಮಹಿಳಾ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ವಿಜಯಪುರದ ಡೈಸ್ ತಂಡವು (50) ಮೈಸೂರಿನ ವಿವಿಸಿಇ (20) ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿತು.
ಜಿ. ಮಲ್ಲಿಕಾರ್ಜುನಪ್ಪ ಸ್ಮಾರಕ ಕಪ್‌ಗೆ 16 ಪುರುಷ ತಂಡಗಳು ಹಾಗೂ ಜಿ.ಎಂ. ಹಾಲಮ್ಮ ಸ್ಮಾರಕ ಕಪ್‌ಗೆ 12 ಮಹಿಳಾ ತಂಡಗಳು ಭಾಗವಹಿಸಿವೆ. ದಾವಣಗೆರೆ, ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು, ಬಳ್ಳಾರಿ, ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವೈದ್ಯಕೀಯ, ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಕಾಲೇಜುಗಳ 300ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ.
ಜಿ.ಎಂ. ವಿಶ್ವವಿದ್ಯಾಲಯದ ಕುಲಪತಿ ಎಸ್.ಆರ್. ಶಂಕಪಾಲ್ ಟೂರ್ನಿಗೆ ಚಾಲನೆ ನೀಡಿದರು. ಸಿ.ಎ. ಅಶೋಕ್ ಕುಮಾರ್, ಎಸ್.ಡಿ. ದೀಪಕ್, ಕೆ.ಎನ್. ಭರತ್, ಎಚ್.ಎಸ್. ಕಿರಣ್ ಕುಮಾರ್, ಜಿ.ಬಿ. ಅಜ್ಜಯ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.