ADVERTISEMENT

ದಾವಣಗೆರೆ: ಅಂತರ, ಸ್ವಚ್ಛತೆಯ ಜತೆಗೆ ಪಿಯು ಪರೀಕ್ಷೆ ಆರಂಭ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 6:17 IST
Last Updated 18 ಜೂನ್ 2020, 6:17 IST
ದಾವಣಗೆರೆ ಎವಿಕೆ ಕಾಲೇಜಿನಲ್ಲಿ ಪಿಯು ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯ ಉಷ್ಣಾಂಶ ತಿಳಿಯಲು ಆರೋಗ್ಯ ಸಿಬ್ಬಂದಿ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿದರು
ದಾವಣಗೆರೆ ಎವಿಕೆ ಕಾಲೇಜಿನಲ್ಲಿ ಪಿಯು ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯ ಉಷ್ಣಾಂಶ ತಿಳಿಯಲು ಆರೋಗ್ಯ ಸಿಬ್ಬಂದಿ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿದರು   

ದಾವಣಗೆರೆ: ದ್ವಿತೀಯ ಪಿಯು ಇಂಗ್ಲಿಷ್ ವಿಷಯದ ಪರೀಕ್ಷೆ ಗುರುವಾರ ಜಿಲ್ಲೆಯ 31 ಪರೀಕ್ಷಾ ಕೇಂದ್ರಗಳಲ್ಲಿ ಆರಂಭಗೊಂಡಿತು.

ಬೆಳಿಗ್ಗೆ 10.15 ಪರೀಕ್ಷೆ ಆರಂಭದ ಸಮಯವಾಗಿದ್ದರೂ ವಿದ್ಯಾರ್ಥಿಗಳನ್ನು ಬೆಳಿಗ್ಗೆ 8.30ಕ್ಕೇ ಹಾಜರಾಗುವಂತೆ ತಿಳಿಸಿದ್ದರಿಂದ ಬೇಗನೇ ಎದ್ದು ಪರೀಕ್ಷಾರ್ಥಿಗಳು ಧಾವಿಸಿದ್ದರು. ಬರುತ್ತಿದ್ದಂತೆ ಕೈತೊಳೆಯಲು ನೀರು, ಸೋಪು, ಸ್ಯಾನಿಟೈಸರ್ ನೀಡಲಾಯಿತು.

ಪರೀಕ್ಷಾ ಕೊಠಡಿಗೆ ತೆರಳುವ ಮುಂಚೆ ಎಲ್ಲರನ್ನೂ ಥರ್ಮಲ್‌ ಸ್ಕ್ಯಾನಿಂಗ್‌ಗೆ ಒಳ‍ಪಡಿಸಲಾಯಿತು. ಅದಕ್ಕಾಗಿ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು.

ADVERTISEMENT

ಜಿಲ್ಲೆಯಲ್ಲಿ 16,018 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ದಾವಣಗೆರೆ ನಗರದಲ್ಲಿ ಮೋತಿ ವೀರಪ್ಪ ಕಾಲೇಜು, ಎವಿಕೆ ಕಾಲೇಜು, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಸೇರಿ 16 ಕೇಂದ್ರಗಳಲ್ಲಿ ಸಿದ್ಧತೆ ನಡೆದಿದೆ. ಮೋತಿ ವೀರಪ್ಪ ಪದವಿಪೂರ್ವ ಕಾಲೇಜಿನಲ್ಲಿ 25 +1 ಕೊಠಡಿಗಳಲ್ಲಿ (ಒಂದು ಕೊಠಡಿ ಹೆಚ್ಚುವರಿ) ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 4 ಅಡಿ ಅಂತರಕ್ಕೆ ಬೆಂಚುಗಳನ್ನು ಅಳವಡಿಸಲಾಗಿದೆ. ಕಾಲೇಜಿನಲ್ಲಿ 600 ವಿದ್ಯಾರ್ಥಿಗಳಲ್ಲದೇ ಹೊರ ಜಿಲ್ಲೆಯಲ್ಲಿ ವ್ಯಾಸಂಗ ಮಾಡಿದ 20 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ.

ಹೈಸ್ಕೂಲ್ ಮೈದಾನದಲ್ಲಿರುವ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 43 ಕೊಠಡಿಗಳಲ್ಲಿ (ಡಯಟ್ ಹಾಗೂ ಎಜಿಬಿ ಕಾಲೇಜುಗಳಿಂದ ಹೆಚ್ಚುವರಿ ಕೊಠಡಿಗಳನ್ನು ಪಡೆಯಲಿದೆ) 980 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಕಂಟೈನ್‌ಮೆಂಟ್ ವಲಯದಿಂದ ಮೂವರು ವಿದ್ಯಾರ್ಥಿಗಳು ಇದ್ದು, ಅವರಿಗೆ ಪ್ರತ್ಯೇಕ ಕೊಠಡಿ ಮೀಸಲಿಡಲಾಗಿದೆ.

ಪಿಯು ಶಿಕ್ಷಣ ಮಂಡಳಿಯ ಸಿಬ್ಬಂದಿ ಪರೀಕ್ಷೆ ಸುಗಮವಾಗಿ ನಡೆಸುವ ಜವಾಬ್ದಾರಿ ಹೊತ್ತಿದ್ದರೆ, ಆರೋಗ್ಯ ಕಾರ್ಯಕರ್ತರು ವಿದ್ಯಾರ್ಥಿಗಳ ಆರೋಗ್ಯದ ಕಾಳಜಿ ವಹಿಸಿದರು. ಪೊಲೀಸರು ಬಿಗಿ ಬಂದೋಬಸ್ತು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.