
ಮಲೇಬೆನ್ನೂರು: ಪಟ್ಟಣದ ಭದ್ರಾ ನಾಲೆ 3ನೇ ವಿಭಾಗೀಯ ಕಚೇರಿ ಎದುರು ಬಿಜೆಪಿ ಕಾರ್ಯಕರ್ತರು ಮುಖಂಡ ಹನಗವಾಡಿ ವೀರೇಶ್ ನೇತೃತ್ವದಲ್ಲಿ ನಾಲೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬುಧವಾರ ಸೂಪರಿಂಟೆಂಡಿಂಗ್ ಎಂಜಿನಿಯರ್ ರವಿಚಂದ್ರನ್ ಧಾವಿಸಿ ನಾಲೆ ಹೂಳೆತ್ತುವ ಕೆಲಸವನ್ನು ಡಿ. 23ರಂದು ಆರಂಭಿಸುವ ಭರವಸೆ ನೀಡಿದರು.
ಸಮಸ್ಯೆ ಪರಿಹರಿಸಲು ನಿಗಮದ ಪ್ರಧಾನ ನಿರ್ದೇಶಕರು ₹ 60 ಲಕ್ಷ ವೆಚ್ಚದಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳಲು ಮೌಖಿಕವಾಗಿ ಅನುಮತಿ ನೀಡಿದ್ದಾರೆ. ಶೀಘ್ರ ಕೆಲಸ ಪ್ರಾರಂಭ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.
‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹರಿಹರ ತಾಲ್ಲೂಕಿನ ಕಾಮಗಾರಿ ಅಂದಾಜು ಪಟ್ಟಿ ನೀಡಿದ್ದರೂ ಏಕೆ ಅನುದಾನ ನೀಡಿಲ್ಲ’ ಎಂದು ಪ್ರಶ್ನಿಸಿದಾಗ ಅಧಿಕಾರಿಗಳು ಮೌನಕ್ಕೆ ಜಾರಿದ್ದರು. ನಾಲೆ ನೀರು ಬರುವ ಮುನ್ನ ಕಾಮಗಾರಿ ಮುಗಿಸಲು ಆಗ್ರಹಿಸಿದರು.
ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಹಿಂಡಸಗಟ್ಟೆ ಲಿಂಗರಾಜ್, ‘ಭದ್ರಾ ನಾಲೆ ಹೂಳು ತುಂಬಿವೆ. ಜಂಗಲ್ ಬೆಳೆದು, ಡ್ರಾಪ್, ಪೈಪ್ ಔಟ್‌ಲೆಟ್, ರಸ್ತೆ ಹಾಳಾಗಿವೆ. ಭದ್ರಾ ಜಲಾಶಯ ಭರ್ತಿಯಾದರೂ ನೀರು ಕೊನೆ ಭಾಗ ತಲುಪುವುದು ಕಷ್ಟ’ ಎಂದು ರೈತರು ದನಿಗೂಡಿಸಿದರು.
ಭದ್ರಾ ಮುಖ್ಯ ನಾಲೆಯ 36ನೇ ಕಿ.ಮೀ ಹಾಗೂ 10ನೇ ಉಪನಾಲೆಯ 2 ಕಿ.ಮೀ.ವರೆಗೆ ಕಸಕಡ್ಡಿ, ತ್ಯಾಜ್ಯ, ತಿಪ್ಪೆ, ಸತ್ತ ಪ್ರಾಣಿ, ಕೋಳಿ ಪುಕ್ಕ ಹಾಕಿರುವುದನ್ನು ಪುರಸಭೆ ಮುಖ್ಯಾಧಿಕಾರಿ ಎಚ್. ನಿರಂಜನಿ ಗಮನಕ್ಕೆ ತಂದು ತೆರವುಗೊಳಿಸಲು ಆಗ್ರಹಿಸಿದರು.
‘ಸಾರ್ವಜನಿಕರು ಕಸದ ಗಾಡಿಗೆ ತ್ಯಾಜ್ಯ ಹಾಕದೆ ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಹೀಗಾಗಿ ನಾಲೆಯಲ್ಲಿ ಕಸ ಸಂಗ್ರಹಗೊಂಡಿದೆ. ತ್ಯಾಜ್ಯ ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ರವಿಚಂದ್ರನ್ ಭರವಸೆ ನೀಡಿದರು.
ಕಾರ್ಯಪಾಲಕ ಎಂಜಿನಿಯರ್ ಪ್ರವೀಣ ಹಾಗೂ ಎಇಇ ಕೃಷ್ಣಮೂರ್ತಿ, ಸಂತೋಷ್ , ಆರೋಗ್ಯ ನಿರೀಕ್ಷಕ ಶಿವರಾಜ್, ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿ ಐರಣಿ ಅಣ್ಣಪ್ಪ, ಆದಾಪುರ ವೀರೇಶ್, ನಿರಂಜನ್, ಪುರಸಭಾ ಸದಸ್ಯ ಸಿದ್ದೇಶ್, ವಿಶ್ವನಾಥ್, ತಿಪ್ಪೇರುದ್ರಪ್ಪ, ಮೋಹನ್, ಶಿವನಗೌಡ, ರವೀಂದ್ರ ಮುದೇಗೌಡ್ರ ತಿಪ್ಪೇಶ, ಕುಂದೂರು ಮಂಜಣ್ಣ ಮಹಾಂತೇಶ್, ರಂಗನಾಥ್, ಬಸವರಾಜ್, ಅಂಜನಪ್ಪ ಹಾಗೂ ಕೊನೆಭಾಗದ ರೈತರು ಇದ್ದರು.