ADVERTISEMENT

ನದಿಗೆ ನೀರು ಹರಿಸಲು ಆಗ್ರಹ 

ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಿದ ಶಾಸಕ ಹರೀಶ್

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 7:24 IST
Last Updated 24 ಮಾರ್ಚ್ 2024, 7:24 IST
ಹರಿಹರದ ಹಳ್ಳದಕೇರಿಗೆ ಶನಿವಾರ ಭೇಟಿ ನೀಡಿದ್ದ ಶಾಸಕ ಬಿ.ಪಿ. ಹರೀಶ್ ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಿದರು
ಹರಿಹರದ ಹಳ್ಳದಕೇರಿಗೆ ಶನಿವಾರ ಭೇಟಿ ನೀಡಿದ್ದ ಶಾಸಕ ಬಿ.ಪಿ. ಹರೀಶ್ ಕುಡಿಯುವ ನೀರಿನ ವ್ಯವಸ್ಥೆ ಪರಿಶೀಲಿಸಿದರು   

ಹರಿಹರ: ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಏಪ್ರಿಲ್‌ 3ರಿಂದ ನೀರು ಹರಿಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ವಿವಿಧ ವಾರ್ಡುಗಳಲ್ಲಿ ಸಂಚರಿಸಿ ಕುಡಿಯುವ ನೀರಿನ ಸಮಸ್ಯೆ ಆಲಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘10 ದಿನಗಳ ಹಿಂದೆ ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡಿದೆ. ಅಂದಿನಿಂದಲೇ ನಗರಕ್ಕೆ ಕುಡಿಯುವ ನೀರಿನ ಸರಬರಾಜು ನಿಂತಿದೆ. ಏ.3ರ ಬದಲು ಮಾ.27ರಿಂದಲೇ ನದಿಗೆ ನೀರು ಹರಿಸಲು ಸಂಬಂಧಿತ ಅಧಿಕಾರಿಗಳನ್ನು ಆಗ್ರಹಿಸಿದ್ದೇನೆ. ದೇವರಬೆಳೆಕೆರೆ ಪಿಕ್‌ಅಪ್‌ನಿಂದ ಹಳ್ಳಕ್ಕೆ ನೀರು ಹರಿಸಲು ಮನವಿ ಮಾಡಿದ್ದೇನೆ. ಹಿರಿಯ ಅಧಿಕಾರಿಗಳು ಮೌಖಿಕವಾಗಿ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಅಧಿಕಾರಿಗಳು ಲಿಖಿತ ಆದೇಶ ಕೇಳುತ್ತಿದ್ದಾರೆ. ದೇವರಬೆಳೆಕೆರೆ ಪಿಪ್‌ಅಪ್‌ನಿಂದ ಶೀಘ್ರ ನೀರು ಹರಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ನಗರದ ಎಲ್ಲಾ ವಾರ್ಡುಗಳಲ್ಲಿಯೂ ಕೊಳವೆಬಾವಿ, ಕಿರುನೀರು ಸರಬರಾಜು ಕೇಂದ್ರಗಳಿವೆ. ಆದರೆ ಅದರಲ್ಲಿ ಗಣನೀಯ ಸಂಖ್ಯೆಯ ಕೊಳವೆಬಾವಿಗಳು ದುರಸ್ತಿಗೆ ಬಂದಿವೆ. ನಗರಸಭೆ ಅಧಿಕಾರಿಗಳು ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಂಡು ಸಮರೋಪಾದಿಯಲ್ಲಿ ದುರಸ್ತಿ ಹಾಗೂ ಪೈಪ್‌ಲೈನ್ ಅಳವಡಿಕೆ ಕಾರ್ಯ ಕೈಗೊಂಡು ಉಂಟಾಗಿರುವ ಜಲ ಕ್ಷಾಮವನ್ನು ನಿವಾರಿಸಬೇಕು ಎಂದು ಸೂಚಿಸಿದ್ದೇನೆ’ ಎಂದು ತಿಳಿಸಿದರು.

ಶಾಸಕರು ಗುತ್ತೂರು, ಹಳೆ ಹರ್ಲಾಪುರ, ದೇವಸ್ಥಾನ ರಸ್ತೆ , ಗಂಗಾನಗರ, ಹಳ್ಳದಕೇರಿ, ವಿದ್ಯಾನಗರ, ಜೈ ಭೀಮನಗರ ಸೇರಿದಂತೆ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಅಹವಾಲು ಆಲಿಸಿದರು.

ಧೂಡಾ ಮಾಜಿ ಸದಸ್ಯ ರಾಜು ರೋಖಡೆ, ನಗರಸಭೆ ಪೌರಾಯುಕ್ತ ಬಸವರಾಜ್ ಐಗೂರು, ಎಇಇ ತಿಪ್ಪೇಶಪ್ಪ ಜಿ.ಟಿ., ಎಇಗಳಾದ ಮಂಜುನಾಥ್, ಮಂಜುಳಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.