ADVERTISEMENT

ಭದ್ರಾ ನಾಲೆ: ಜಂಗಲ್.. ಹೂಳು.. ರೈತರ ಗೋಳು...

ಹೊಲಗಾಲುವೆಗಳ ಸ್ಥಿತಿಯೂ ಶೋಚನೀಯ

ಅಮೃತ ಕಿರಣ ಬಿ.ಎಂ.
Published 27 ನವೆಂಬರ್ 2024, 5:17 IST
Last Updated 27 ನವೆಂಬರ್ 2024, 5:17 IST
ದಾವಣಗೆರೆ ತಾಲ್ಲೂಕಿನ ಜರಿಕಟ್ಟೆ ಬಳಿ ಭದ್ರಾ ನಾಲೆಯ ಬದಿಯಲ್ಲಿ ಬೃಹತ್ ಮರಗಳು ಬೆಳೆದಿದ್ದು, ನಾಲೆಯಲ್ಲಿ ನೀರಿನ ಹರಿವಿಗೆ ಅಡ್ಡಿಯಾಗಿರುವುದು
–ಪ್ರಜಾವಾಣಿ ಚಿತ್ರಗಳು: ಸತೀಶ ಬಡಿಗೇರ್
ದಾವಣಗೆರೆ ತಾಲ್ಲೂಕಿನ ಜರಿಕಟ್ಟೆ ಬಳಿ ಭದ್ರಾ ನಾಲೆಯ ಬದಿಯಲ್ಲಿ ಬೃಹತ್ ಮರಗಳು ಬೆಳೆದಿದ್ದು, ನಾಲೆಯಲ್ಲಿ ನೀರಿನ ಹರಿವಿಗೆ ಅಡ್ಡಿಯಾಗಿರುವುದು –ಪ್ರಜಾವಾಣಿ ಚಿತ್ರಗಳು: ಸತೀಶ ಬಡಿಗೇರ್   

ದಾವಣಗೆರೆ: ರೈತರು ಜಮೀನಲ್ಲಿ ಬೆಳೆಯುವ ಬೆಳೆಗಾಗಿ ಕಾಲುವೆಯಲ್ಲಿ ಹರಿಯುವ ನೀರನ್ನೇ ಆಶ್ರಯಿಸಿ ದಟ್ಟವಾಗಿ ಬೆಳೆದಿರುವ ಜಂಗಲ್ (ಗಿಡ–ಗಂಟಿ). ನಾಲೆಗೆ ಹಾಕಿರುವ ಸಿಮೆಂಟ್‌ ಕಾಣದಂತೆ ಆವರಿಸಿರುವ ಹುಲ್ಲಿನ ಪೊದೆಗಳು. ನೀರಿನ ಪಸೆಯೂ ಇಲ್ಲದಂತೆ ಬೇರೂರಿರುವ ಕಳೆಗಿಡಗಳಿಂದಲೂ, ಮಣ್ಣು–ಕಲ್ಲು, ಕಸ–ಕಡ್ಡಿ, ತ್ಯಾಜ್ಯದಿಂದಲೂ ತುಂಬಿಕೊಂಡು ಕೊಳತು ನಾರುತ್ತಿರುವ ಹೊಲಗಾಲುವೆಗಳು... 

ಇದು ಜಿಲ್ಲೆಯ ಭದ್ರಾ ವ್ಯಾಪ್ತಿಯ ಬಹುತೇಕ ಉಪನಾಲೆಗಳು ಹಾಗೂ ಹೊಲೆಗಾಲುವೆಗಳ ಸ್ಥಿತಿ.

ನಾಲೆಗಳಲ್ಲಿ ಹೀಗೆ ಗಿಡಗಳು ಬೆಳೆಯುವುದು ಹಾಗೂ ಹೂಳು ತುಂಬಿಕೊಳ್ಳುವುದು ಹೊಸದಲ್ಲವಾದರೂ ಅವುಗಳ ನಿರ್ವಹಣೆ ವಿಚಾರದಲ್ಲಿ ತೋರುತ್ತಿರುವ ನಿರ್ಲಕ್ಷ್ಯವನ್ನು ಇವು ತೆರೆದಿಡುತ್ತವೆ.

ADVERTISEMENT

ಕಾಲುವೆಯ ಎರಡೂ ಬದಿಗಳಲ್ಲಿ ಹುಟ್ಟಿಕೊಳ್ಳುವ ಗಿಡಗಳನ್ನು ಆರಂಭದಲ್ಲಿಯೇ ಕತ್ತರಿಸುವಲ್ಲಿ ತೋರುವ ಅಸಡ್ಡೆಯ ಪರಿಣಾಮವಾಗಿ, ಅವು ದೊಡ್ಡದಾಗಿ ಬೆಳೆದು, ಬೇರುಗಳು ತಡೆಗೋಡೆಯ ಆಳಕ್ಕೆ ಇಳಿದು, ಕಟ್ಟಡದ ರಚನೆಯನ್ನೇ ಅಸ್ಥಿರಗೊಳಿಸಿರುವ ನೂರಾರು ನಿದರ್ಶನಗಳು ಅಷ್ಟೂ ನಾಲೆಗಳಲ್ಲಿ ಕಾಣಸಿಗುತ್ತವೆ. ಕಾಲುವೆಗಳಲ್ಲಿ ಬಿರುಕು ಮೂಡಿ, ಕಲ್ಲು, ಸಿಮೆಂಟ್ ಹಾಗೂ ಮಣ್ಣು ನಿಧಾನವಾಗಿ ನೀರು ಪಾಲಾಗಿ ಹೂಳಿನ ರೂಪದಲ್ಲಿ ಸಂಗ್ರಹವಾಗುತ್ತಾ ಹೋಗುತ್ತದೆ. ಕೊನೆಯ ಭಾಗಗಳಿಗೆ ನೀರಿನ ಹರಿಯುವಿಕೆಗೆ ಹೂಳು ಅಡ್ಡಿಯಾಗುತ್ತದೆ. ಒಂದಕ್ಕೊಂದು ಸರಪಳಿಯಂತೆ ನಡೆಯುವ ಈ ಪ್ರಕ್ರಿಯೆಯಲ್ಲಿ ಸಂತ್ರಸ್ತರಾಗುವುದು ನಾಲೆಯ ಕೊನೆಯ ಭಾಗದ ರೈತರು.

ದಾವಣಗೆರೆ ಸಮೀಪದ ಜರಿಕಟ್ಟೆ, ಮಿಟ್ಲಕಟ್ಟೆ, ಕುಂದವಾಡ ವ್ಯಾಪ್ತಿಯಲ್ಲಿ ಭದ್ರಾ ನಾಲೆಗಳ ಸ್ಥಿತಿ ಶೋಚನೀಯವಾಗಿದೆ. ಉಪನಾಲೆಗಳಲ್ಲಿ ನೀರು ಹರಿಯದಷ್ಟು ಕಳೆ ತುಂಬಿಕೊಂಡಿದೆ. ಬಸವಾಪಟ್ಟಣ, ಸಂತೇಬೆನ್ನೂರು ಒಳಗೊಂಡಂತೆ ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ ನಾಲೆಯುದ್ದಕ್ಕೂ ಒಮ್ಮೆ ಕಣ್ಣು ಹಾಯಿಸಿದರೆ ಕಾಡಿನ ರೂಪದಲ್ಲಿ ಗಿಡಗಳು ಬೆಳೆದು ನಿಂತಿರುವುದನ್ನು ಕಾಣಬಹುದಾಗಿದೆ. ಕಡರನಾಯ್ಕನಹಳ್ಳಿಯ 16ನೇ ಉಪಕಾಲುವೆಯಲ್ಲಿ ಗಿಡ–ಗಂಟಿಗಳ ಜೊತೆಗೆ ಹೂಳು ತುಂಬಿದ್ದು, ಅದರ ಮೇಲೆ ಹುಲ್ಲು ಬೆಳೆದಿದೆ.

ರೈತರ ಹೊಲಗಳಿಗೆ ನೀರು ಹರಿಯಲು ನಿರ್ಮಿಸಿರುವ ಬಹುತೇಕ ಹೊಲಗಾಲುವೆಗಳಲ್ಲಿ ಸಿಮೆಂಟ್ ಕಾಮಗಾರಿ ಕಾಣಸಿಗುವುದಿಲ್ಲ. ಮಣ್ಣಿನಿಂದ ನಿರ್ಮಿಸಿರುವ ಹೊಲಗಾಲುವೆಗಳಲ್ಲಿ ಸಹಜವಾಗಿ ಕಳೆ ತುಂಬಿ ತುಳುಕುತ್ತಿದೆ. ಎಲ್ಲೋ ಒಂದು ಕಡೆ ಮಣ್ಣಿನ ರಚನೆ ಕುಸಿದರೆ, ಮುಂದಿನ ಭಾಗಕ್ಕೆ ನೀರು ಹರಿಯುವುದು ಸ್ಥಗಿತವಾಗುವುದಲ್ಲದೇ, ಮಣ್ಣು ಕುಸಿದ ಸ್ಥಳದ ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗುತ್ತಿದೆ. ಮಳೆಗಾಲದಲ್ಲಿ ಈ ಸಮಸ್ಯೆ ಅಧಿಕ ಎನ್ನುತ್ತಾರೆ ಜರಿಕಟ್ಟೆಯ ರೈತ ಪರಶುರಾಮ್. 

ನಾಲೆಗಳು, ಉಪನಾಲೆಗಳು ನೀರಾವರಿ ನಿಗಮದ ವ್ಯಾಪ್ತಿಯಲ್ಲಿದ್ದರೆ, ಹೊಲಗಾಲುವೆಗಳು ‘ಕಾಡಾ’ ಅಡಿಯಲ್ಲಿ ಬರುತ್ತವೆ. ಆಯಾ ಭಾಗದಲ್ಲಿ ರಚಿಸಲಾಗಿರುವ ನೀರು ಬಳಕೆದಾರರ ಸಂಘಗಳು ಕಾಡಾ ಅಡಿಯಲ್ಲಿ ನಾಲೆಗಳ ನಿರ್ವಹಣೆ ಮಾಡಬೇಕಿದೆ. ಆದರೆ, ಅವುಗಳಿಗೆ ಅನುದಾನದ ಕೊರತೆ ಇರುವುದರಿಂದ ಹೊಲಗಾಲುವೆಗಳ ಹೂಳು ಹಾಗೂ ಜಂಗಲ್ ತೆರವುಗೊಳಿಸುವ ಪ್ರಕ್ರಿಯೆ ಬಹುತೇಕ ಕಡೆ ನಡೆಯುವುದಿಲ್ಲ ಎನ್ನುತ್ತಾರೆ ಭತ್ತದ ಬೆಳೆಗಾರರು. ನಾಲೆಯ ಕೊನೆಯ ಭಾಗದ ಕೆಲವು ರೈತರು ಹೊಲಗಾಲುವೆಗಳನ್ನು ತಾವೇ ಅಲ್ಪಸ್ವಲ್ಪ ಸರಿಪಡಿಸಿಕೊಳ್ಳುತ್ತಾರೆ.

ಭದ್ರಾ ನಾಲೆಯ ಬಸಿನೀರು ಸದ್ಬಳಕೆ ಮಾಡಿಕೊಳ್ಳಲು ನಿರ್ಮಿಸಿದ ದೇವರ ಬೆಳೆಕೆರೆ ಪಿಕಪ್‌ ಜಲಾಶಯದಲ್ಲಿ ಬೆಳೆದಿರುವ ಕಳೆಗಿಡಗಳು ನೀರಿನ ಸಂಗ್ರಹಕ್ಕೆ ಅಡ್ಡಿಯುಂಟು ಮಾಡುತ್ತಿವೆ. ಇಲ್ಲಿನ ನೀರು ಹರಿಯಲು ನಿರ್ಮಿಸಿರುವ ಕಾಲುವೆಗಳು ನಿರ್ವಹಣೆ ಸಮಸ್ಯೆ ಎದುರಿಸುತ್ತಿವೆ. ಸದಾ ಹೂಳಿನಿಂದ ಆವೃತವಾಗಿರುವ ಕಾಲುವೆಯು ಮಳೆಗಾಲದಲ್ಲಿ ಸಮೀಪದ ಜನವಸತಿಗಳಿಗೆ ನುಗ್ಗಿ ಅಲ್ಲಿನ ಜನರನ್ನು ಅಪಾಯಕ್ಕೆ ನೂಕುವುದು ಪ್ರತಿವರ್ಷದ ವಿದ್ಯಮಾನವೇ ಆಗಿದೆ.

ಮಲೇಬೆನ್ನೂರು ವ್ಯಾಪ್ತಿಯ ಹರಳಹಳ್ಳಿ, ಮಾಯಕೊಂಡ ಸೇರಿದಂತೆ ಇತರ ಕಡೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕಾಲುವೆಗಳ ಹೂಳು ತೆಗೆಯುವ ಕೆಲಸ ಆಗಿದೆ. ಸಂಕ್ಲೀಪುರ, ಕೆಂಗನಹಳ್ಳಿ, ಮಲ್ಲನಾಯಕನಹಳ್ಳಿ ಮೊದಲಾದೆಡೆ ಕಾಲುವೆಗಳಲ್ಲಿ ಬೆಳೆದ ಗಿಡಗಳನ್ನು ನೀರುಗಂಟಿಗಳು ತೆರವು ಮಾಡಿ, ನೀರು ಹರಿಯಲು ವ್ಯವಸ್ಥೆ ಮಾಡಿದ್ದಾರೆ. ಆದರೆ, ಸಮಗ್ರ ನಿರ್ವಹಣೆ ಹೊಣೆ ಹೊತ್ತ ಕಾಡಾ, ಅನುದಾನ ಕೊರತೆಯ ನೆಪ ಹೇಳುತ್ತಿದೆ ಎನ್ನುತ್ತಾರೆ ಮಲೇಬೆನ್ನೂರಿನ ರೈತ ಚಂದ್ರು.

ಬೈರನಪಾದ ಯೋಜನೆ ಪರಿಹಾರವೇ?:

‘ಅಂದಾಜು 3,000 ಎಕರೆಗೆ ನೀರು ಉಣಿಸಬಲ್ಲ ಬೈರನಪಾದ ಏತ ನೀರಾವರಿ ಯೋಜನೆಯು ಭದ್ರಾ ನಾಲೆಗಳ ಕೊನೆ ಭಾಗದ ರೈತರ ಸಮಸ್ಯೆಗೆ ಪರಿಹಾರವಾಗಬಲ್ಲದು’ ಎಂದು ಭಾವಿಸಲಾಗಿದೆ. ಬೈರನಪಾದ ಯೋಜನೆಯ ಸಾಧಕ–ಬಾಧಕಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇದು ಸಾಕಾರವಾದರೆ, ಕೊನೆಯ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗೆ ಕೊಂಚ ಪರಿಹಾರ ಸಿಗುವ ಆಶಾವಾದ ರೈತರಲ್ಲಿದೆ. 

ಕಡರನಾಯ್ಕನಹಳ್ಳಿ ಸಮೀಪ ನಾಲೆಯೇ ಕಾಣದಂತೆ ಬೆಳೆದು ನಿಂತಿರುವ ಗಿಡ–ಗಂಟಿಗಳು
ದಾವಣಗೆರೆ ಸಮೀಪದ ಜರಿಕಟ್ಟೆಯಲ್ಲಿ ಹೊಲಗಾಲುವೆ ಒಂದರಲ್ಲಿ ಬೆಳೆದಿರುವ ಗಿಡಗಳು ನೀರಿನ ಹರಿವಿಗೆ ಅಡ್ಡಿಯಾಗಿರುವುದು
ದಾವಣಗೆರೆ ತಾಲ್ಲೂಕಿನ ಜರಿಕಟ್ಟೆ ಬಳಿ ಭದ್ರಾ ನಾಲೆಯ ಬದಿಯಲ್ಲಿ ಗಿಡಗಳು ಬೆಳೆದಿರುವುದು
ಮಲೇಬೆನ್ನೂರು ಶಾಖಾ ನಾಲೆಯಲ್ಲಿ ಜಂಗಲ್ ಬೆಳೆದು ನೀರಿನ ಹರಿವಿಗೆ ಅಡ್ಡಿಯಾಗಿದೆ

ಕಾಯಂ ಸಿಬ್ಬಂದಿ ಇಲ್ಲ

ಗುತ್ತಿಗೆ ನೌಕರರೇ ಎಲ್ಲ:  ಭದ್ರಾ ನಾಲೆ ಹಾಗೂ ನೀರು ನಿರ್ವಹಣೆ ಮಾಡಬೇಕಾದ ಜಲಸಂಪನ್ಮೂಲ ಇಲಾಖೆಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲ. ದಾವಣಗೆರೆ ಭದ್ರಾ ವಿಭಾಗದ ನಾಲ್ಕು ಉಪವಿಭಾಗಗಳಲ್ಲಿ ಪ್ರಭಾರಿಗಳ ಸಂಖ್ಯೆಯೇ ಅಧಿಕ. ಇಲಾಖೆಯಲ್ಲಿ ಎಇ ಜೆಇ ಕೆಲಸ ನಿರೀಕ್ಷಕರು ಹಾಗೂ ಸೌಡಿ (ನೀರುಗಂಟಿ) ಹುದ್ದೆಗಳು ಖಾಲಿ ಇವೆ. ಬಹುತೇಕ ನೀರುಗಂಟಿಗಳು ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದಾರೆ. ಅವರಿಗೆ ಸೂಕ್ತ ಹಾಗೂ ಗೊತ್ತುಪಡಿಸಿದ ದಿನಕ್ಕೆ ವೇತನ ನೀಡುವ ವ್ಯವಸ್ಥೆಯೂ ಇಲ್ಲ. ಬಾಕಿ ವೇತನ ಪಾವತಿಗೆ ಆಗ್ರಹಿಸಿ ಅವರು ಕಳೆದ ಬಾರಿ ಪ್ರತಿಭಟನೆ ನಡೆಸಿದ್ದರು.  ನೀರು ನಿರ್ವಹಣೆ ಹಾಗೂ ಜಂಗಲ್ ತೆರವುಗೊಳಿಸುವಂತಹ ಪ್ರಮುಖ ಕೆಲಸಗಳನ್ನು ನಿರ್ವಹಿಸುವ ನೀರುಗಂಟಿಗಳನ್ನು ಗುತ್ತಿಗೆದಾರರ ಮೂಲಕ ನಿಯೋಜನೆ ಮಾಡಿಕೊಳ್ಳಲಾಗುತ್ತದೆ. ಗುತ್ತಿಗೆದಾರರಿಗೆ ಸಕಾಲಕ್ಕೆ ಹಣ ಪಾವತಿಯಾಗದಿದ್ದರೆ ನೌಕರರು ಪ್ರತಿಭಟನೆಗೆ ಮುಂದಾಗುತ್ತಾರೆ. ಅಂತೆಯೇ ಗೇಟ್ ತೆರೆದು ಕಾಲುವೆಯಲ್ಲಿ ನೀರು ಹರಿಸುವ ಕೆಲಸಕ್ಕೆ ತೊಂದರೆಯಾಗುತ್ತದೆ ಎಂದು ರೈತರು ಆರೋಪಿಸುತ್ತಾರೆ. 

‘ಕೊರತೆಯ ನಡುವೆಯೇ ಕೆಲಸ’

‘ನಾಲೆಗಳಲ್ಲಿ ಹೂಳು ತುಂಬುವುದು ಹಾಗೂ ಜಂಗಲ್ ಬೆಳೆಯುವುದು ಸಾಮಾನ್ಯ. ನೀರು ಹರಿದಂತೆಲ್ಲಾ ಹೂಳು ಅದರೊಟ್ಟಿಗೆ ಕಾಲುವೆಯಲ್ಲಿ ಸಾಗಿಬರುತ್ತದೆ. ಪ್ರತಿ ವರ್ಷ ಇಲಾಖೆಯ ನೀರುಗಂಟಿಗಳು ಹೂಳು ತೆರವು ಮಾಡುವ ಕೆಲಸ ಮಾಡುತ್ತಾರೆ’  ಎಂದು ನೀರಾವರಿ ನಿಗಮದ ಮಲೇಬೆನ್ನೂರು ಉಪವಿಭಾಗದ ಇಇ ಆರ್.ಬಿ. ಮಂಜುನಾಥ್ ಹೇಳುತ್ತಾರೆ. ‘ಪ್ರತಿ ಉಪ ವಿಭಾಗದಲ್ಲಿ ತಲಾ 50 ಜನ ನೀರುಗಂಟಿಗಳನ್ನು ತೆರವು ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಅವರಿಗೆ ವೇತನ ನೀಡಲು ಅನುದಾನದ ಕೊರತೆಯಿದ್ದರೂ ಹೂಳು ತೆರವು ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಈ ಬಾರಿಯ ಮುಂಗಾರು ಹಂಗಾಮು ಬಹುತೇಕ ಮುಗಿದಿದ್ದು ನೀರು ಸರಾಗವಾಗಿ ಹರಿಯಲು ಎಲ್ಲ ವ್ಯವಸ್ಥೆ ಮಾಡಲಾಗಿತ್ತು’ ಎಂಬುದು ಅವರ ಸಮರ್ಥನೆ. 

ಸತ್ವರಹಿತವಾಗಿದೆ ಫಲವತ್ತಾದ ಭೂಮಿ

ನಾಲೆ ನಿರ್ಮಿಸುವುದಕ್ಕಿಂತ ಮೊದಲು ಖುಷ್ಕಿ ಬೆಳೆಯಾಗಿ ಮೆಕ್ಕಜೋಳ ಶೇಂಗಾ ನವಣೆ ಬೆಳೆದು ತಕ್ಕಮಟ್ಟಿನ ಜೀವನ ಸಾಗಿಸುತ್ತಿದ್ದ ರೈತರ ಜಮೀನಿಗೆ ಜಲಾಶಯದ ನೀರು ಹರಿದರೂ ನೆಮ್ಮದಿ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಭತ್ತದ ಗದ್ದೆಯಲ್ಲಿ ಅಧಿಕ ಪ್ರಮಾಣದ ನೀರು ನಿಲ್ಲುವುದರಿಂದ ಭೂಮಿ ಜವುಳಾಗಿ ಸತ್ವ ಕಡಿಮೆಯಾಗುತ್ತಾ ಬರುತ್ತದೆ. ಜೊತೆಗೆ ಯಥೇಚ್ಛವಾಗಿ ರಸಗೊಬ್ಬರ ಕೀಟನಾಶಕ ಬಳಸಲೇಬೇಕಾದ ಅನಿವಾರ್ಯತೆಯಿಂದಾಗಿ ಭೂಮಿ ಇನ್ನಷ್ಟು ಹಾಳಾಗುತ್ತಿದೆ. ‘ನಮ್ಮ ಭೂಮಿ ಸತ್ವ ಕಳೆದುಕೊಂಡು ಬಾಹ್ಯ ಪೋಷಕಾಂಶದ ಮೇಲೇ ಅವಲಂಬಿತವಾಗಿದ್ದರೂ ಭೂಮಿಯನ್ನು ಮತ್ತೆ ಸತ್ವಯುತಗೊಳಿಸುವ ಯತ್ನವೇ ನಡೆಯುತ್ತಿಲ್ಲ’ ಎನ್ನುತ್ತಾರೆ ರೈತ ಚಂದ್ರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.