ADVERTISEMENT

ಹಕ್ಕಿಜ್ವರ: ಬನ್ನಿಕೋಡು ಗ್ರಾಮದಲ್ಲಿ ಕಟ್ಟುನಿಟ್ಟಿನ ಕ್ರಮ

24X7 ಸಹಾಯವಾಣಿ ಸ್ಥಾಪನೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2020, 15:32 IST
Last Updated 17 ಮಾರ್ಚ್ 2020, 15:32 IST
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ   

ದಾವಣಗೆರೆ: ಹಕ್ಕಿಜ್ವರ ಕಾಣಿಸಿಕೊಂಡಿರುವ ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಕೋಳಿ ನಾಶಕ್ಕೆ ಪಶುಸಂಗೋಪನೆ ಅಧಿಕಾರಿಗಳು ಕ್ರಮ ವಹಿಸುವರು. ಭತ್ತದ ಗದ್ದೆಗಳಿಗೆ ಹೊರಗಿನಿಂದ ಬರುವ ಕೊಕ್ಕರೆ, ಬಾತುಕೋಳಿ ಇನ್ನೂ ವಿವಿಧ ಜಾತಿಯ ಪಕ್ಷಿಗಳ ಬಗ್ಗೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಹಕ್ಕಿಜ್ವರ ನಿಯಂತ್ರಣದ ಕುರಿತು ಚರ್ಚಿಸಲು ಮಂಗಳವಾರ ಏರ್ಪಡಿಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಪಶುಸಂಗೋಪನೆ ಕಚೇರಿಯಲ್ಲಿ 24X7 ಸಹಾಯವಾಣಿಯನ್ನು (08192 296832) ತೆರೆಯಲಾಗಿದ್ದು, ಹಕ್ಕಿಜ್ವರ ನಿಯಂತ್ರಣ ಕುರಿತಾದ ಸಂದೇಹ, ಸಲಹೆಗಳ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

ADVERTISEMENT

ಆರೋಗ್ಯ ಇಲಾಖೆಯು ಕಲ್ಲಿಂಗ್ ಕಾರ್ಯ ನಿರ್ವಹಿಸಲು ತುರ್ತು ಸ್ಪಂದನ ತಂಡ (ಆರ್‌ಆರ್‌ ಟೀಮ್‌) ರಚಿಸಬೇಕು. ತಂಡದಲ್ಲಿರುವವರಿಗೆ ಆರೋಗ್ಯ ತಪಾಸಣೆ ಮತ್ತು ಐಸೊಲೇಷನ್ ಸೌಲಭ್ಯವನ್ನು ಒದಗಿಸಬೇಕು. ಈ ತಂಡವು ಕಾರ್ಯ ನಿರ್ವಹಿಸಿದ ನಂತರ 14 ದಿನಗಳ ವರೆಗೆ ನಿಗಾವಣೆಯಲ್ಲಿ ಇಡಬೇಕು. ತಂಡಕ್ಕೆ ಅಗತ್ಯವಿರುವ ಸುರಕ್ಷಾ ಸಾಮಗ್ರಿಗಳನ್ನು ಹೊಂದಿರುವ ಪಿ.ಪಿ ಕಿಟ್‌ಗಳ ನೆರವು ನೀಡಲಾಗುವುದು ಎಂದು ತಿಳಿಸಿದರು.

ಹರಿಹರ ತಾಲ್ಲೂಕಿನ ಕೆಲವು ಡಾಬಾಗಳಲ್ಲಿ ಬೇಯಿಸಿದ ಮಾಂಸವನ್ನು ಸಹ ನಾಶಪಡಿಸಬೇಕು. ಹೆಬ್ಬಾಳು ಬಳಿ ಇರುವ ಕೋಳಿ ಫಾರಂಗಳಲ್ಲಿ ಸ್ವಚ್ಛತೆ ಇಲ್ಲ. ನೊಣಗಳ ಹಾವಳಿ ಹೆಚ್ಚಿದೆ. ಸಂಬಂಧಿಸಿದ ಪೌಲ್ಟ್ರಿ ಫಾರಂನವರು ಶುಚಿತ್ವ ಕಾಪಾಡಬೇಕು. ಇಲ್ಲದಿದ್ದರೆ ಸಿಆರ್‌ಪಿಸಿ ಸೆಕ್ಷನ್ 133ರ ಅನ್ವಯ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರವಾನಗಿಯನ್ನು ಕೂಡ ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.

ದೇವರಬೆಳೆಕೆರೆ ಪಿಕ್‌ಅಪ್ ಡ್ಯಾಂ ಬಳಿ ಹಕ್ಕಿಗಳು ವಲಸೆ ಬರುತ್ತಿದ್ದು ಅವುಗಳ ಬಗ್ಗೆಯೂ ನಿಗಾ ವಹಿಸಬೇಕು. ಪೌಲ್ಟ್ರಿ ಫಾರಂನಲ್ಲಿ ಒಂದು ಕೋಳಿ ಕೂಡ ಇಟ್ಟುಕೊಳ್ಳುವ ಹಾಗಿಲ್ಲ. ಸತ್ತಿರುವ ಕೋಳಿಯನ್ನು ಎಲ್ಲೆಂದರಲ್ಲಿ ಎಸೆಯುವ ಹಾಗಿಲ್ಲ.ಹೊಸ ಕೋಳಿಯನ್ನು ಸಾಕುವಂತಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, ‘ಆರ್‌ಆರ್ ಟೀಮ್‌ಗಳಿಗೆ ಸೌಲಭ್ಯವನ್ನು ಒದಗಿಸಲಾಗುವುದು. ಆರ್‌ಆರ್ ಸಿಬ್ಬಂದಿಗಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಒ ಮತ್ತು ಎನ್‌ಜಿಒಗಳ ಸಭೆ ನಡೆಸಿ ಹಕ್ಕಿಜ್ವರದ ಕುರಿತು ಜಾಗೃತಿ ಮೂಡಿಸಲಾಗುವುದು. ಕೋಳಿ ಸಾಕಾಣಿಕೆದಾರರಿಗೆ ನೀಡುವ ಪರಿಹಾರದ ಕುರಿತು ಸಮರ್ಪಕ ದಾಖಲಾತಿ ನಿರ್ವಹಿಸಲು ಸೂಚಿಸಲಾಗುವುದು. ಹಕ್ಕಿಜ್ವರ ಕುರಿತು ಎಚ್ಚರಿಸುವ ಫಲಕಗಳನ್ನು ಸಾರ್ವಜನಿಕವಾಗಿ ಅಳವಡಿಸಲಾಗುವುದು. ಫಾಗಿಂಗ್ ಯಂತ್ರಗಳ ಮೂಲಕ ರಾಸಾಯನಿಕಗಳ ಸಿಂಪಡಣೆ ಮಾಡಿಸಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿವೈಎಸ್‌ಪಿ ಮಂಜುನಾಥ್ ಗಂಗಲ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಎಚ್‌ಓ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ.ಭಾಸ್ಕರ್ ನಾಯಕ್, ಪಿಡಬ್ಲ್ಯುಡಿ ಕಾರ್ಯಪಾಲಕ ಎಂಜಿನಿಯರ್‌ ಮಲ್ಲಿಕಾರ್ಜುನ್, ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ, ದಾವಣಗೆರೆ ತಹಶೀಲ್ದಾರ್ ಸಂತೋಷ್‌ಕುಮಾರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.