ADVERTISEMENT

ಮುಂದಿನ 25 ವರ್ಷ ಬಿಜೆಪಿಗೇ ಅಧಿಕಾರ: ಬಿ.ಎಸ್‌. ಯಡಿಯೂರಪ್ಪ ವಿಶ್ವಾಸ

ವಿಧಾನ ಪರಿಷತ್ ಚುನಾವಣೆ ಪ್ರಚಾರ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 4:04 IST
Last Updated 30 ನವೆಂಬರ್ 2021, 4:04 IST
ದಾವಣಗೆರೆಯಲ್ಲಿ ನಡೆದ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತ್ಯಾವಣಿಗೆ ಮತ್ತು ಬಸವಾಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತದ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿದರು
ದಾವಣಗೆರೆಯಲ್ಲಿ ನಡೆದ ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತ್ಯಾವಣಿಗೆ ಮತ್ತು ಬಸವಾಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತದ ಗ್ರಾಮ ಪಂಚಾಯಿತಿ ಸದಸ್ಯರ ಸಭೆಯಲ್ಲಿ ಬಿ.ಎಸ್‌. ಯಡಿಯೂರಪ್ಪ ಮಾತನಾಡಿದರು   

ದಾವಣಗೆರೆ: ಕಾಂಗ್ರೆಸ್‌ನವರು ಹಣ, ಹೆಂಡ, ತೋಳ್ಬಲ, ಜಾತಿ ವಿಷಬೀಜ ಬಿತ್ತಿ ಚುನಾವಣೆ ಗೆಲ್ಲುತ್ತಿದ್ದ ಕಾಲ ಒಂದು ಇತ್ತು. ಆದರೆ ಈಗ ಕಾಂಗ್ರೆಸನ್ನು ಜನರು ತಿರಸ್ಕರಿಸಿದ್ದಾರೆ. ಲೋಕಸಭೆಯಲ್ಲಿ ಬೆರಳೆಣಿಕೆಯ ಸದಸ್ಯರಿದ್ದಾರೆ. ಇನ್ನೂ 25 ವರ್ಷ ಬಿಜೆಪಿ ಆಡಳಿತ ಮುಂದುವರಿಯುತ್ತದೆ ಎಂದು ಬಿಜೆಪಿ ನಾಯಕ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತ್ಯಾವಣಿಗೆ ಮತ್ತು ಬಸವಾಪಟ್ಟಣ ಜಿಲ್ಲಾ ಪಂಚಾಯಿತಿ ಕ್ಷೇತಗಳ ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ನಗರದಲ್ಲಿ ನಡೆದ ವಿಧಾನ ಪರಿಷತ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮ ಪಂಚಾಯಿತಿ ಸ್ಥಾನಕ್ಕೆ ರಾಜೀನಾಮೆ ನೀಡಲು ಹಿಂದೆ ಮುಂದೆ ನೀಡುವ ಈ ಕಾಲದಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದವನು. ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದವನು. ಹಾಗಂತ ನಾನು ಮನೆಯಲ್ಲಿ ಕೂತಿಲ್ಲ. ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ 140 ಸೀಟುಗಳನ್ನು ಗೆಲ್ಲುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಗುರಿ ಇಟ್ಟುಕೊಂಡಿದ್ದೇನೆ’ ಎಂದರು.

ADVERTISEMENT

‘ಈ ಬಾರಿಯ ವಿಧಾನಪರಿಷತ್‌ ಚುನಾವಣೆಯಲ್ಲಿ ಅರುಣ್ ಡಿ.ಎಸ್. ಸೇರಿ 15ರಲ್ಲಿ ಗೆಲ್ಲುವ ವಿಶ್ವಾಸ ಇದೆ. ಪದವೀಧರರ, ಶಿಕ್ಷಕರ ಕ್ಷೇತ್ರದಿಂದ ಬಂದವರು ಅವರ ಕ್ಷೇತ್ರದ ಬಗ್ಗೆ ಧ್ವನಿ ಎತ್ತುತ್ತಾರೆ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದವರು ಸ್ಥಳೀಯ ಸಂಸ್ಥೆಗಳ ಸಮಸ್ಯೆ ಬಗ್ಗೆ ಮಾತನಾಡುತ್ತಾರೆ. ಅದಕ್ಕಾಗಿ ವಿದ್ಯಾವಂತ ತರುಣ ಅರುಣ್‌ ಅವರನ್ನು ಗೆಲ್ಲಿಸಬೇಕು’ ಎಂದು ಕೋರಿದರು.

‘ಗ್ರಾಮ ಪಂಚಾಯಿತಿ ಶಕ್ತಿ ಕೇಂದ್ರವಾಗಬೇಕು. ಅದಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅರುಣ್‌ ಮೊದಲ ಸುತ್ತಿನಲ್ಲೇ ಗೆಲ್ಲಬೇಕು. ಡಿ.10ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮಾತ್ರ ಚುನಾವಣೆ ಇರುತ್ತದೆ. ನೀವು ಬೆಳಿಗ್ಗೆ 8–9 ಗಂಟೆಯ ಒಳಗೆ ಮತ ಹಾಕಿ. ಬಳಿಕ ಬೇರೆಯವರನ್ನು ಮನವೊಲಿಸಿ ಮತ ಹಾಕಿಸಿ’ ಎಂದು ಮನವಿ ಮಾಡಿದರು.

‘ಅರುಣ್‌ ಡಿ.ಎಸ್‌. ಎಂಬ ನನ್ನ ಹೆಸರಲ್ಲಿ ಡಿ ಅಂದರೆ ದಾವಣಗೆರೆ ಎಂದಾಗಿದೆ. ನಮ್ಮ ಹಿರಿಯರು ದಾವಣಗೆರೆಯವರಾಗಿದ್ದು, ಶಿವಮೊಗ್ಗಕ್ಕೆ ಹೋಗಿ ನೆಲೆಸಿದ ಕುಟುಂಬ’ ಎಂದು ಅಭ್ಯರ್ಥಿ ಅರುಣ್‌ ಡಿ.ಎಸ್‌. ತಿಳಿಸಿದರು.

ಶಿಕ್ಷಣ, ಆರೋಗ್ಯ ಮತ್ತು ಕ್ರೀಡೆಗೆ ಒತ್ತು ನೀಡುವ ಮೂಲಕ ಗ್ರಾಮಗಳನ್ನು ಸ್ವಾವಲಂಬಿಯನ್ನಾಗಿ ಮಾಡುವ ಕನಸಿದೆ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರಾದ ಪ್ರೊ.ಲಿಂಗಣ್ಣ, ಎಸ್‌.ಎ. ರವೀಂದ್ರನಾಥ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಜಗದೀಶ್, ಮಾಜಿ ಶಾಸಕ ಬಸವರಾಜ ನಾಯ್ಕ್‌, ಮುಖಂಡರಾದ ಜೀವನ್‌ಮೂರ್ತಿ, ದೇವರಮನಿ ಶಿವಕುಮಾರ್‌, ದೇವೇಂದ್ರಪ್ಪ, ಡಾ. ಶಿವಯೋಗಿಸ್ವಾಮಿ, ಮಂಜಾನಾಯ್ಕ, ಶ್ರೀನಿವಾಸ ದಾಸಕರಿಯಪ್ಪ, ಅನಿಲ್‌ ಕುಮಾರ್‌, ಕೃಷ್ಣಮೂರ್ತಿ ಅವರೂಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.