
ಹೊನ್ನಾಳಿ: ‘2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 140ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಪಟ್ಟಣದಲ್ಲಿ ರೇಣುಕಾಚಾರ್ಯ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ಎಂ.ಪಿ.ರೇಣುಕಾಚಾರ್ಯ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ರೇಣುಕಾಚಾರ್ಯ ಅವರಿಗೆ ತಿನ್ನಿಸುವ ಮೂಲಕ ಶುಭ ಕೋರಿ ಮಾತನಾಡಿದರು.
‘ಕೇವಲ ಮಾತಿನಿಂದ ಏನೂ ಸಾಧನೆ ಮಾಡಲಾಗುವುದಿಲ್ಲ. ಯಾರ‍್ಯಾರು ನಮ್ಮಿಂದ ದೂರವಾಗಿದ್ದಾರೆಯೋ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಚುನಾವಣೆಯನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು. ಎಂ.ಪಿ.ರೇಣುಕಾಚಾರ್ಯ, ಮಾಡಾಳ್ ವಿರೂಪಾಕ್ಷಪ್ಪ, ರಾಮಚಂದ್ರಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಬಗ್ಗೆ ಶ್ರಮಿಸಬೇಕು’ ಎಂದರು.
‘1970ರಲ್ಲಿ ಯಡಿಯೂರಪ್ಪ ಅವರು ಶಿಕಾರಿಪುರದಲ್ಲಿ ಪುರಸಭೆ ಸದಸ್ಯರಾಗುವ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದ್ದು, ಇಂದಿಗೆ 50 ವರ್ಷ ಪೂರೈಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಹೊನ್ನಾಳಿ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಮಾಜಿ ಸಚಿವ ಎಂ.ಪಿ, ರೇಣುಕಾಚಾರ್ಯ ಅವರು ಬಿ.ಎಸ್. ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು.
ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಎಸ್.ವಿ. ರಾಮಚಂದ್ರಪ್ಪ, ಬಸವರಾಜ ನಾಯ್ಕ, ಸಂಪಂಗಿ, ಹರಿಹರ ಚಂದ್ರಶೇಖರ ಪೂಜಾರ್, ದಾವಣಗೆರೆ ಲೋಕಿಕೆರೆ ನಾಗರಾಜ್, ಡಾ. ರವಿಕುಮಾರ್ ಮಾತನಾಡಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅರಕೆರೆ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಜೆ.ಕೆ. ಸುರೇಶ್, ಕೆ.ಪಿ. ಕುಬೇಂದ್ರಪ್ಪ, ಸಿ.ಆರ್. ಶಿವಾನಂದಪ್ಪ, ಡಿ.ಜಿ.ರಾಜಪ್ಪ, ಶಿವು ಹುಡೇದ್, ಮಾರುತಿನಾಯ್ಕ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.