ADVERTISEMENT

ದಾವಣಗೆರೆ: ಬ್ರಾಸ್‌ಬ್ಯಾಂಡ್‌, ಮಂಗಳವಾದ್ಯ ಕಲಾವಿದರ ಅಳಲು

ಜಾನಪದ ಕಲೆಯಲ್ಲ ಎಂದು ಹೆಸರು ನೋಂದಣಿ ಮಾಡಲು ಇಲಾಖೆ ಹಿಂದೇಟು

ಬಾಲಕೃಷ್ಣ ಪಿ.ಎಚ್‌
Published 12 ಮೇ 2020, 19:45 IST
Last Updated 12 ಮೇ 2020, 19:45 IST
ಸ್ಯಾಕ್ಸೋಫೋನ್‌ ನುಡಿಸಲು ಸಜ್ಜಾಗಿರುವ ರೇಣುಕಾ ಬ್ರಾಸ್‌ಬ್ಯಾಂಡ್‌ ಆರ್ಕೆಸ್ಟರಾ ಹಾಗೂ ಜಾನಪದ ಸಂಗೀತ ಸಾಂಸ್ಕೃತಿಕ ಕಲಾ ಸಂಸ್ಥೆಯ ಸದಸ್ಯರು
ಸ್ಯಾಕ್ಸೋಫೋನ್‌ ನುಡಿಸಲು ಸಜ್ಜಾಗಿರುವ ರೇಣುಕಾ ಬ್ರಾಸ್‌ಬ್ಯಾಂಡ್‌ ಆರ್ಕೆಸ್ಟರಾ ಹಾಗೂ ಜಾನಪದ ಸಂಗೀತ ಸಾಂಸ್ಕೃತಿಕ ಕಲಾ ಸಂಸ್ಥೆಯ ಸದಸ್ಯರು   

ದಾವಣಗೆರೆ: ಸಂಕಷ್ಟದಲ್ಲಿ ಇರುವ ವಿವಿಧ ವಲಯದಲ್ಲಿರುವವರ ನೆರವು ನೀಡಲು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದೆ. ಅದರಲ್ಲಿ ಕಲಾವಿದರನ್ನೂ ಒಳಪಡಿಸಲಾಗಿದೆ. ಆದರೆ ನೋಂದಣಿ ಮಾಡಿಕೊಳ್ಳದ ಬ್ರಾಸ್‌ಬ್ಯಾಂಡ್‌ ಮತ್ತು ಮಂಗಳವಾದ್ಯ ಕಲಾವಿದರು ಎಲ್ಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಸ್ಯಾಕ್ಸೋಫೋನ್‌, ಕ್ಲಾರಿನೆಟ್‌, ಟ್ರಂಪೆಟ್‌, ಡೋಲು, ಶಹನಾಯಿ, ಸೈಡ್‌ ಡ್ರಂ, ಕೀಬೋರ್ಡ್‌, ಹಾರ್ಮೋನಿಯಂ, ತಾಳವಾದ್ಯಗಳನ್ನು ನುಡಿಸುವವರು, ಗಾಯಕರು ಇವರಲ್ಲಿ ಸೇರಿದ್ದಾರೆ.

ಮಾರ್ಚ್‌, ಏಪ್ರಿಲ್‌, ಮೇ ತಿಂಗಳಲ್ಲೇ ಅಧಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಕಲಾವಿದರ ದುಡಿಮೆಯೂ ಈ ಅವಧಿಯಲ್ಲಿ ಹೆಚ್ಚಿರುತ್ತಿತ್ತು. ಲಾಕ್‌ಡೌನ್‌ ಮಾಡಿದ್ದರಿಂದ ಯಾವುದೇ ಸಭೆ, ಸಮಾರಂಭಗಳು, ಶುಭ ಕಾರ್ಯಗಳು ನಡೆಯುತ್ತಿಲ್ಲ.

ADVERTISEMENT

ಜಿಲ್ಲೆಯಲ್ಲಿ ಸುಮಾರು 1,500 ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಲ್ಲಿ ಮೂರ್ನಾಲ್ಕು ತಂಡಗಳು ಅಂದರೆ ಸುಮಾರು 50 ಮಂದಿಯಷ್ಟೇ ನೋಂದಣಿ ಮಾಡಿಕೊಂಡವರು. ಉಳಿದವರು ಸರ್ಕಾರದ ಲೆಕ್ಕದಲ್ಲಿ ಇಲ್ಲ. ಹಾಗಾಗಿ ಕಲಾವಿದರಿಗೆ ಸಿಗುವ ಮಾಸಾಶನ ಕೂಡ ಇವರಿಗೆ ಸಿಗುತ್ತಿಲ್ಲ.

‘ನಾವು ಬಳಸುವ ವಾದ್ಯ ಪರಿಕರ ಇಂಗ್ಲಿಷರದ್ದಾಗಿರಬಹುದು. ಆದರೆ ನಾವು ನುಡಿಸುವುದು ಈ ನೆಲದ ಹಾಡುಗಳನ್ನೇ. ಜನಪದ ಹಾಡು, ಭಾವಗೀತೆ, ಭಕ್ತಿಗೀತೆ, ದೇಶಭಕ್ತಿಗೀತೆ, ಕೀರ್ತನೆ, ವಚನ, ಸಿನಿಮಾ ಹಾಡುಗಳನ್ನು ನುಡಿಸುತ್ತೇವೆ. ಆದರೆ ನಮ್ಮ ಹೆಸರುಗಳನ್ನು ನೋಂದಣಿ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿಂದೇಟು ಹಾಕುತ್ತಿದೆ. ನಾವು ಕೇಳಿದರೆ ನೀವು ಜನಪದ ಕಲಾವಿದರಲ್ಲ ಎಂದು ಕಾರಣ ನೀಡಿ ವಾಪಸ್‌ ಕಳುಹಿಸುತ್ತಿದೆ’ ಎಂದು ಬಸವನಾಳ್‌ ಗೊಲ್ಲರಹಟ್ಟಿಯ ರೇಣುಕಾ ಬ್ರಾಸ್‌ಬ್ಯಾಂಡ್‌ ಆರ್ಕೆಸ್ಟ್ರಾ ಹಾಗೂ ಜಾನಪದ ಸಂಗೀತ ಸಾಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷ ಎಂ. ಹಾಲೇಶ್‌ ಬಸವನಾಳ್‌ ‘ಪ್ರಜಾವಾಣಿ’ಗೆ ಬೇಸರ ಹೇಳಿಕೊಂಡರು.

‘ಮಧ್ಯ ಕರ್ನಾಟಕದಲ್ಲಿ ಛಲವಾದಿಗಳು ಅಧಿಕ ಸಂಖ್ಯೆಯಲ್ಲಿ ಈ ವೃತ್ತಿಯಲ್ಲಿದ್ದರೆ, ಕೊರಮ ಸಮಾಜ, ಸವಿತಾ ಸಮಾಜ ಒಳಗೊಂಡಂತೆ ಇತರ ಕೆಲವು ಸಮಾಜದವರೂ ಇದ್ದಾರೆ. ಎಲ್ಲರೂ ಲಾಕ್‌ಡೌನ್‌ನಿಂದಾಗಿ ಅತಂತ್ರರಾಗಿದ್ದಾರೆ. ಎಲ್ಲರ ನೆರವಿಗೆ ಸರ್ಕಾರ ಬರಬೇಕು’ ಎಂಬುದು ಅವರ ಒತ್ತಾಯ.

‘ಶತಮಾನಗಳಿಂದ ವಂಶ ಪಾರಂಪರ್ಯವಾಗಿ ಈ ವೃತ್ತಿ ಮುಂದುವರಿದಿದೆ. ಕನ್ನಡ ಮತ್ತು ಸಂಸ್ಕತಿ ಇಲಾಖೆ ಈ ಕಲಾವಿದರನ್ನು ಗುರುತಿಸಿ ನೋಂದಾಯಿಸಿಕೊಳ್ಳಬೇಕು. ಆಗ ಸರ್ಕಾರದ ಸವಲತ್ತುಗಳು ನಮಗೆ ತಲುಪಲು ಸುಲಭವಾಗುತ್ತದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.