ADVERTISEMENT

ಕೋವಿಡ್‌ನಿಂದ ಸತ್ತವರ ಅಂತ್ಯ ಸಂಸ್ಕಾರಕ್ಕೆ ವಿದ್ಯುತ್ ಚಿತಾಗಾರ ನಿರ್ಮಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 8:25 IST
Last Updated 6 ಜುಲೈ 2020, 8:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಪ್ರತಿ ಜಿಲ್ಲೆಯಲ್ಲೂ ವಿದ್ಯುತ್‌ ಚಿತಾಗಾರ ನಿರ್ಮಿಸಿ ಕೊರೊನಾ ವೈರಸ್‌ನಿಂದ ಮೃತಪಟ್ಟ ವ್ಯಕ್ತಿಗಳ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮೃತ ವ್ಯಕ್ತಿಗಳ ಗೌರವ ಕಾಪಾಡಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಆಗ್ರಹಿಸಿದರು.

‘ರಾಜ್ಯದಲ್ಲಿ ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕಿಗೆ ಒಳಗಾದವರಿಗೆ ಆಸ್ಪತ್ರೆಗಳಲ್ಲಿ ಬೆಡ್‌ಗಳು ಸಿಗುತ್ತಿಲ್ಲ. ಮೃತ ವ್ಯಕ್ತಿಗಳ ಶವಸಂಸ್ಕಾರವೂ ಗೌರವಯುತವಾಗಿ ಆಗುತ್ತಿಲ್ಲ. ಕೊರೊನಾ ಸೋಂಕಿತ ವ್ಯಕ್ತಿಗಳು ಸೂಕ್ತ ಚಿಕಿತ್ಸೆ ಸಿಗದೇ ಬೀದಿಪಾಲಿನ ಹೆಣವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರವೆಸಗಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಕೋವಿಡ್‌–19 ನಿವಾರಣೆಗಾಗಿ ರಾಜ್ಯ ಸರ್ಕಾರ ಖರೀದಿಸಿರುವ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಸರ್ಕಾರ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿರುವ ಹಾಗೂ ಖರ್ಚು ಮಾಡಿರುವ ಹಣದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶ್ವೇತಪತ್ರ ಬಿಡುಗಡೆ ಮಾಡಬೇಕು. ಕೊರೊನಾ ವೈದ್ಯಕೀಯ ಉಪಕರಣಗಳ ಭ್ರಷ್ಟಾಚಾರ ಪ್ರಕರಣದ ತನಿಖೆಯನ್ನು ಹೈಕೋರ್ಟ್ ನ್ಯಾಯಾಧೀಶರಿಗೆ ವಹಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸುಗ್ರೀವಾಜ್ಞೆ ಹೊರಡಿಸಲು ಆಗ್ರಹ:

‘ವಿಧಾನ ಮಂಡಲದ ಜಂಟಿ ಸದನ ಸಮಿತಿಯನ್ನು ರಚಿಸಿ ಕಾಲಮಿತಿಯಲ್ಲಿ ವರದಿ ನೀಡಲು ತಿಳಿಸಬೇಕು. ಕೋವಿಡ್‌–19 ಪರೀಕ್ಷೆಯಿಂದ ಹಿಡಿದು ಚಿಕಿತ್ಸೆಯವರೆಗೂ ರಾಜ್ಯದ ಎಲ್ಲಾ ವರ್ಗದವರಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಉಚಿತವಾಗಿ ದೊರೆಯುವಂತೆ ಸುಗ್ರೀವಾಜ್ಞೆ ಹೊರಡಿಸಬೇಕು. ಎಪಿಎಂಸಿ ಕಾಯ್ದೆಗೆ ಸುಗ್ರೀವಾಜ್ಞೆ ಹೊರಟಿರುವ ಸರ್ಕಾರ ಈ ಕಾಯ್ದೆಗೂ ತಿದ್ದುಪಡಿ ತಂದು ಬಡವರಿಗೆ ಉಚಿತವಾಗಿ ಚಿಕಿತ್ಸೆ ದೊರೆಯುವಂತೆ ಮಾಡಬೇಕು’ ಎಂದರು.

₹2,189 ಕೋಟಿ ಅವ್ಯವಹಾರ:

‘ವೈದ್ಯಕೀಯ ಉಪಕರಣಗಳ ಖರೀದಿಗೆ ₹3,287 ಕೋಟಿ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದೆ. ಆದರೆ ಮಾರುಕಟ್ಟೆಯಲ್ಲಿ ₹1,098 ಕೋಟಿ ಆಗುತ್ತದೆ. ಇದರಲ್ಲಿ ₹2,189 ಕೋಟಿ ಭ್ರಷ್ಟಾಚಾರ ನಡೆದಿದ್ದು, ಶೀಘ್ರವೇ ಈ ಪ್ರಕರಣವನ್ನು ತನಿಖೆಗೆ ಆದೇಶಿಸಬೇಕು’ ಎಂದುಮುಖ್ಯಮಂತ್ರಿಯನ್ನು ಆಗ್ರಹಿಸಿದರು.

ಉಸ್ತುವಾರಿಗಾಗಿ ಹೊಡೆದಾಟ:

‘ಬೆಂಗಳೂರು ಉಸ್ತುವಾರಿಗಾಗಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಸಚಿವರಾದ ಆರ್.ಅಶೋಕ, ಶ್ರೀರಾಮುಲು ಹಾಗೂ ಕೆ.ಸುಧಾಕರ ಅವರ ನಡುವೆ ಪೈಪೋಟಿ ನಡೆಯುತ್ತಿದೆ. ಭ್ರಷ್ಟಾಚಾರ ಮಾಡಿ ಹಣ ಹೊಡೆಯುವುದೇ ಇವರ ಉದ್ದೇಶ‘ ಎಂದು ಆರೋಪಿಸಿದರು.

ಕಾಂಗ್ರೆಸ್ ಕೆಡವಲು ಪಿ.ಎಂ. ಕೇರ್ಸ್‌ ಹಣ ಬಳಕೆ

‘ಕೋವಿಡ್–19 ಹಿನ್ನೆಲೆಯಲ್ಲಿ ಪಿ.ಎಂ. ಕೇರ್ಸ್ ಮೂಲಕ ₹60 ಸಾವಿರ ಕೋಟಿ ಸಂಗ್ರಹವಾಗಿದ್ದು, ಪ್ರಧಾನಮಂತ್ರಿಯವರು ಈವರೆಗೂ ಲೆಕ್ಕ ನೀಡಿಲ್ಲ. ಈ ಹಣವನ್ನು ಕಾಂಗ್ರೆಸ್ ಅಧಿಕಾರ ಇರುವ ರಾಜ್ಯಗಳಲ್ಲಿ ಸರ್ಕಾರ ಕೆಡವಲು ಹಾಗೂ ಬಿಜೆಪಿ ಫಂಡ್‌ಗೆ ಈ ಹಣ ಬಳಸಿಕೊಳ್ಳುವ ಹುನ್ನಾರ ಇದರಲ್ಲಿ ಅಡಗಿದೆ’ ಎಂದು ಆರೋಪಿಸಿದರು.

‘ಒಂದು ಸಾವಿರ ವೆಂಟಿಲೇಟರ್ ಖರೀದಿ ಮಾಡಿರುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದ್ದು, 30 ಜಲ್ಲೆಗಳಿಗೆ ಸಮನಾಗಿ ಹಂಚಿದರೆ ದಾವಣಗೆರೆ ಜಿಲ್ಲೆಗೆ 30 ವೆಂಟಿಲೇಟರ್‌ಗಳು ಬರಬೇಕಿತ್ತು. ಆದರೆ ಈವರೆಗೆ ಒಂದೂ ವೆಂಟಿಲೇಟರ್ ಬಂದಿಲ್ಲ’ ಎಂದು ಆರೋಪಿಸಿದರು.

ಪಾಲಿಕೆ ಸದಸ್ಯರಾದ ದೇವರಮನಿ ಶಿವಕುಮಾರ್, ಅಬ್ದುಲ್ ಲತೀಫ್, ಮಂಜುನಾಥ್ ಗಡಿಗುಡಾಳ್, ಮುಖಂಡರಾದ ಹರೀಶ್ ಬಸಾಪುರ, ಲಿಯಾಖತ್ ಅಲಿ, ಹಿತೇಂದ್ರ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.