ADVERTISEMENT

ಚನ್ನಗಿರಿ | ಮೆಕ್ಕೆಜೋಳ: ಈ ಬಾರಿ ಬಂಪರ್ ಇಳುವರಿ ನಿರೀಕ್ಷೆ

ಚನ್ನಗಿರಿ: ರೈತರ ಕೈ ಹಿಡಿದ ಮುಂಗಾರು

ಎಚ್.ವಿ. ನಟರಾಜ್‌
Published 3 ಸೆಪ್ಟೆಂಬರ್ 2025, 4:46 IST
Last Updated 3 ಸೆಪ್ಟೆಂಬರ್ 2025, 4:46 IST
ಚನ್ನಗಿರಿ ಪಟ್ಟಣದ ಹೊರ ವಲಯದಲ್ಲಿ ಸಮೃದ್ಧವಾಗಿ ಬೆಳೆದು ನಿಂತ ಮೆಕ್ಕೆಜೋಳ ಬೆಳೆ
ಚನ್ನಗಿರಿ ಪಟ್ಟಣದ ಹೊರ ವಲಯದಲ್ಲಿ ಸಮೃದ್ಧವಾಗಿ ಬೆಳೆದು ನಿಂತ ಮೆಕ್ಕೆಜೋಳ ಬೆಳೆ   

ಚನ್ನಗಿರಿ: ತಾಲ್ಲೂಕಿನಾದ್ಯಂತ ಈ ಬಾರಿ ಮುಂಗಾರು ಉತ್ತಮವಾಗಿದ್ದು, ಮಕ್ಕೆಜೋಳ ಬೆಳೆ ಬಂಪರ್ ಇಳುವರಿ ಬರುವ ನಿರೀಕ್ಷೆ ಇದೆ. ಆದರೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಗಿಳಿಗಳ ಕಾಟದಿಂದಾಗಿ ರೈತರು ಹೈರಾಣಾಗಿದ್ದಾರೆ.

ತಾಲ್ಲೂಕಿನಲ್ಲಿ 21,000 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ತಾಲ್ಲೂಕಿನಲ್ಲಿ ಅಡಿಕೆಯ ನಂತರ ಎರಡನೇ ಪ್ರಮುಖ ವಾಣಿಜ್ಯ ಬೆಳೆಯಾಗಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ.

‘8 ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಮಳೆ ಉತ್ತಮವಾಗಿ ಸುರಿದ ಕಾರಣ ಬೆಳೆ ಕಣ್ಮನ ಸೆಳೆಯುವಂತಿವೆ. ಪ್ರತಿ ಎಕರೆಗೆ 20ರಿಂದ 25 ಕ್ವಿಂಟಲ್ ಇಳುವರಿ ಬರುವ ನಿರೀಕ್ಷೆ ಇದೆ. ಕಳೆದ ವರ್ಷ ಇದೇ ಹಂಗಾಮಿನಲ್ಲಿ ಎಕರೆಗೆ 12ರಿಂದ 15 ಕ್ವಿಂಟಲ್ ಇಳುವರಿ ಸಿಕ್ಕಿತ್ತು’ ಎಂದು ತಾಲ್ಲೂಕಿನ ಗರಗ ಗ್ರಾಮದ ವೆಂಕಟೇಶ್ ಹೇಳಿದರು.

ADVERTISEMENT

ಆಗಸ್ಟ್ 30ವರೆಗೆ ತಾಲ್ಲೂಕಿನಲ್ಲಿ 570 ಮಿ.ಮೀ. (535 ಮಿ.ಮೀ. ವಾಡಿಕೆ) ಮಳೆಯಾಗಿದೆ. ಅಧಿಕ ಮಳೆಯಿಂದಾಗಿ ಮೆಕ್ಕೆಜೋಳದ ಬೆಳೆ ಸಮೃದ್ಧವಾಗಿದ್ದು, ಕಪ್ಪುಮಣ್ಣಿನ ಭೂಮಿಯಲ್ಲಿ ಗರಿಷ್ಠ 30 ಕ್ವಿಂಟಲ್‌ವರೆಗೂ ಇಳುವರಿ ಬರುವ ನಿರೀಕ್ಷೆಯಿದೆ. ಯಾವುದೇ ರೋಗ ಕಾಣಿಸಿಕೊಳ್ಳದ ಕಾರಣ ಅಧಿಕ ಇಳುವರಿ ಸಿಗುವ ಎಲ್ಲ ಸಾಧ್ಯತೆಗಳಿವೆ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್. ಅರುಣ್ ಕುಮಾರ್ ತಿಳಿಸಿದರು.

ಚನ್ನಗಿರಿ ತಾಲ್ಲೂಕು ಹಿರೇಉಡ ಗ್ರಾಮದ ರೈತರ ಜಮೀನಿನಲ್ಲಿ ಗಿಳಿಗಳ ಹಿಂಡು ಮೆಕ್ಕೆಜೋಳ ಕಾಳಿನ ರಸವನ್ನು ಹೀರಿ ಬಿಟ್ಟಿರುವುದು
ತಾಲ್ಲೂಕಿನ 21,000 ಹೆಕ್ಟೇರ್‌ನಲ್ಲಿ ಬಿತ್ತನೆ | ಎಕರೆಗೆ 20–25 ಕ್ವಿಂಟಲ್ ಇಳುವರಿ ನಿರೀಕ್ಷೆ |ಕಪ್ಪುಮಣ್ಣಿನಲ್ಲಿ 30 ಕ್ವಿಂಟಲ್‌ ಇಳುವರಿ ಸಾಧ್ಯತೆ

ಯೂರಿಯಾ ಸಮಸ್ಯೆ ಇಲ್ಲ

ಸದ್ಯಕ್ಕೆ ತಾಲ್ಲೂಕಿನಲ್ಲಿ ಯೂರಿಯಾ ಗೊಬ್ಬರದ ಸಮಸ್ಯೆ ಇಲ್ಲ. ತಡವಾಗಿ ಬಿತ್ತನೆ ಮಾಡಿದ ಬೆಳೆಗಳಿಗೆ ಹಾಗೂ ಭತ್ತದ ಬೆಳೆಗಳಿಗೆ ಯೂರಿಯಾ ಗೊಬ್ಬರ ಅವಶ್ಯಕತೆ ಇದ್ದು ಒಂದು ವಾರದಲ್ಲಿ ತಾಲ್ಲೂಕಿನ ತುಮ್ಕೋಸ್ ಸೇರಿದಂತೆ ಸಹಕಾರ ಸಂಘಗಳಿಗೆ ಯೂರಿಯಾ ಪೂರೈಕೆಯಾಗಲಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎಚ್. ಅರುಣ್ ಕುಮಾರ್ ಮಾಹಿತಿ ನೀಡಿದರು. ಮೆಕ್ಕೆಜೋಳಕ್ಕೆ ಗಿಳಿಗಳ ಕಾಟ ವಿಪರೀತವಾಗಿದೆ. ಸಂತೇಬೆನ್ನೂರು 1 ಮತ್ತು 2ನೇ ಹೋಬಳಿಯ ಗ್ರಾಮಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಹಿಂಡು ಹಿಂಡಾಗಿ ಬರುವ ಗಿಳಿಗಳು ಮೆಕ್ಕೆಜೋಳದ ತೆನೆಯ ರಸವನ್ನು ಹೀರುತ್ತಿವೆ. ಈ ಭಾಗದಲ್ಲಿ ಇಳುವರಿ ಕಡಿಮೆಯಾಗಲಿದೆ. ಇನ್ನುಳಿದಂತೆ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.