ದಾವಣಗೆರೆ: ಆರ್‌ಟಿಐ ಕಾಯ್ದೆಯಡಿ ಸಲ್ಲಿಕೆಯಾಗುವ ದ್ವಿತೀಯ ಮೇಲ್ಮನವಿ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಲು ಮಾಹಿತಿ ಹಕ್ಕು ಆಯೋಗ ಮುಂದಾಗಿದ್ದು, ನವೆಂಬರ್ ವೇಳೆಗೆ ಜಿಲ್ಲಾ ಹಂತದಲ್ಲಿ ಲೋಕ ಅದಾಲತ್ ಮಾದರಿಯಲ್ಲಿ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಚಿಂತನೆ ಇದೆ ಎಂದು ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ತಿಳಿಸಿದರು.
ರಾಜ್ಯದಲ್ಲಿ ದ್ವಿತೀಯ ಮೇಲ್ಮನವಿಗೆ ಸಂಬಂಧಿಸಿ 56,000 ಪ್ರಕರಣಗಳಿದ್ದವು. ಸತತ ಕಲಾಪಗಳನ್ನು ನಡೆಸುವ ಮೂಲಕ ಅವುಗಳ ಸಂಖ್ಯೆಯನ್ನು 46,446ಕ್ಕೆ ತಗ್ಗಿಸಲಾಗಿದೆ. ಈ ಪ್ರಕರಣಗಳ ಸಂಖ್ಯೆಯನ್ನು ಶೂನ್ಯಕ್ಕೆ ತರುವ ಗುರಿ ಇದೆ ಎಂದು ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ 11,428 (ಅತಿ ಹೆಚ್ಚು) ದ್ವಿತೀಯ ಮೇಲ್ಮನವಿ ಪ್ರಕರಣಗಳಿದ್ದರೆ, ಕೊಡಗು ಜಿಲ್ಲೆಯಲ್ಲಿ (75) ಅತಿ ಕಡಿಮೆ ಪ್ರಕರಣಗಳಿವೆ. ದಾವಣಗೆರೆಯಲ್ಲಿ 558 ಪ್ರಕರಣಗಳಿವೆ ಎಂದು ತಿಳಿಸಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸುವ ಅರ್ಜಿಗಳಿಗೆ ಲಭ್ಯವಿರುವ ದಾಖಲೆಗಳನ್ನು ಒದಗಿಸಬೇಕು. ಕಾಯ್ದೆಯಡಿ ನಿಗದಿತ ಸಮಯದಲ್ಲಿಯೇ ಮಾಹಿತಿ ನೀಡಬೇಕು. ಮಾಹಿತಿ ಲಭ್ಯವಿಲ್ಲವಾದಲ್ಲಿ ಸಂಬಂಧಿಸಿದ ಹಿಂಬರಹವನ್ನು ನೀಡಬೇಕು ಎಂದರು.
ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ನೀಡದಿದ್ದರೆ ಅರ್ಜಿದಾರರು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬೇಕು. ಇಲ್ಲಿಯೂ ನ್ಯಾಯ ಸಿಗದಿದ್ದಲ್ಲಿ ದ್ವಿತೀಯ ಮೇಲ್ಮನವಿ ಪ್ರಾಧಿಕಾರವಾದ ಮಾಹಿತಿ ಹಕ್ಕು ರಾಜ್ಯ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬೇಕು ಎಂದು ಹೇಳಿದರು.
ಮಾಹಿತಿ ಹಕ್ಕು ಕಾಯ್ದೆಯು ದೇಶಕ್ಕೆ ದೊರೆತ ಎರಡನೇ ಸ್ವಾತಂತ್ರ್ಯ ಎಂದರೆ ತಪ್ಪಾಗಲಾರದು. ಕಾಯ್ದೆ ಬರುವುದಕ್ಕೂ ಮುಂಚೆ ಜನಸಾಮಾನ್ಯರಿಗೆ ಸರ್ಕಾರದ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಮಾಹಿತಿ ಹಕ್ಕು ಕಾಯ್ದೆ ಬಂದ ನಂತರ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿದೆ. ಆಡಳಿತದಲ್ಲಿ ಶಿಸ್ತು ಮೂಡಿದೆ ಎಂದು ಮಾಹಿತಿ ಹಕ್ಕು ಆಯೋಗದ ಆಯುಕ್ತ ರಾಜಶೇಖರ್ ತಿಳಿಸಿದರು.
‘ಕೆಲವರು ಮಾಹಿತಿ ಕೇಳುವುದನ್ನೇ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯುವ ದಾಖಲೆಗಳು ಸಾರ್ವಜನಿಕ ಹಿತಾಸಕ್ತಿ ಮತ್ತು ಸ್ವ ಹಿತಾಸಕ್ತಿಯಿಂದ ಕೂಡಿರಬೇಕು. ಆದರೆ, ಅವ್ಯವಹಾರಕ್ಕೆ ಅವಕಾಶ ಮಾಡಿಕೊಡಬಾರದು’ ಎಂದರು.
ಮಾಹಿತಿ ಹಕ್ಕು ಕಾಯ್ದೆಯಡಿ 30 ಸೆಕ್ಷನ್‍ಗಳಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಅರ್ಥ ಮಾಡಿಕೊಂಡು ಅನುಷ್ಠಾನ ಮಾಡಬೇಕು. ಯಾವುದೇ ವೇದಿಕೆ, ಸಮಿತಿಗಳು ಕಾಯ್ದೆಯ ಹೆಸರು, ಲಾಂಛನವನ್ನು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ. ಒಂದೇ ಮಾಹಿತಿಗೆ ಸಂಬಂಧಿಸಿದಂತೆ ಎರಡನೇ ಮೇಲ್ಮನವಿ ಪ್ರಾಧಿಕಾರಕ್ಕೆ ಹಲವು ಅರ್ಜಿಗಳನ್ನು ಸಲ್ಲಿಸಿದವರನ್ನು ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ಆಯೋಗ ಪರಿಶೀಲಿಸಲಿದೆ ಎಂದು ತಿಳಿಸಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡದ ಅಧಿಕಾರಿಗಳಿಗೆ ದಿನಕ್ಕೆ ₹250 ರಂತೆ ಗರಿಷ್ಠ ₹25,000 ದವರೆಗೆ ದಂಡ ವಿಧಿಸಲು ಮತ್ತು ಅರ್ಜಿದಾರರಿಗೆ ಪರಿಹಾರ ನೀಡಲು ಶಿಫಾರಸು ಮಾಡುವ ಅಧಿಕಾರ ಆಯೋಗಕ್ಕಿದೆ ಎಂದರು.
ಜಿಲ್ಲೆಯಲ್ಲಿನ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಮೊದಲ ಮೇಲ್ಮನವಿ ಪ್ರಾಧಿಕಾರಗಳ ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಉಪಸ್ಥಿತರಿದ್ದರು.
ಜಿಲ್ಲೆಯ ದ್ವಿತೀಯ ಮೇಲ್ಮನವಿ ಅರ್ಜಿ ವಿವರ
ಕಂದಾಯ ಇಲಾಖೆ 161, ಪಂಚಾಯತ್ ರಾಜ್ ಇಲಾಖೆ 90, ನಗರಾಭಿವೃದ್ಧಿ ಇಲಾಖೆ 75, ಜಲಸಂಪನ್ಮೂಲ 53, ಲೋಕೋಪಯೋಗಿ ಇಲಾಖೆ 35, ಶಿಕ್ಷಣ ಇಲಾಖೆ 31, ಸಮಾಜ ಕಲ್ಯಾಣ 30, ಗೃಹ ಇಲಾಖೆ 13, ಅಲ್ಪಸಂಖ್ಯಾತರ ಇಲಾಖೆ 11, ಅರಣ್ಯ ಇಲಾಖೆ 11, ಆರೋಗ್ಯ 10, ಇಂಧನ 9, ಸಹಕಾರ 8, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ 7, ಕೈಗಾರಿಕೆ ಮತ್ತು ವಾಣಿಜ್ಯ 4, ಕೃಷಿ 2, ಸಾರಿಗೆ 2, ವಸತಿ 2 ಸೇರಿ ಇತರೆ 5 ಅರ್ಜಿಗಳು ಬಾಕಿ ಇವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.