ADVERTISEMENT

ಜಾತಿಗಣತಿ ವರದಿ ಬಗ್ಗೆ ಮಹಾ ಅಧಿವೇಶನದಲ್ಲಿ ನಿರ್ಣಯ: ವಚನಾನಂದ ಶ್ರೀ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 15:57 IST
Last Updated 17 ಡಿಸೆಂಬರ್ 2023, 15:57 IST
ವಚನಾನಂದ ಶ್ರೀ
ವಚನಾನಂದ ಶ್ರೀ   

ಹರಿಹರ: ‘ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಿದ ಜಾತಿಗಣತಿ ವರದಿಯನ್ನು ಒಪ್ಪುವ ಅಥವಾ ತಿರಸ್ಕರಿಸುವ ಕುರಿತು ದಾವಣಗೆರೆಯಲ್ಲಿ ನಡೆಯುವ ಅಖಿಲ ಭಾರತ ವೀರಶೈವ ಮಹಾಸಭಾದ ಅಧಿವೇಶನದಲ್ಲಿ ನಿರ್ಣಯಿಸಲಾಗುವುದು’ ಎಂದು ಇಲ್ಲಿನ ವೀರಶೈವ ಲಿಂಗಾಯಿತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ ಹೇಳಿದರು.

ಗುರುಪೀಠದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾತಿಗಣತಿ ಸರಿಯಾಗಿ ನಡೆದಿಲ್ಲ, ಆ ವರದಿಯಿಂದ ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವುದಿಲ್ಲ ಎಂಬ ಊಹಾಪೋಹಗಳು ಎದ್ದಿವೆ, ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ’ ಎಂದರು.

‘ರಾಜ್ಯದಲ್ಲಿ ಒಬಿಸಿ ಪಟ್ಟಿಯಲ್ಲಿರುವವರೆಲ್ಲ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮೀಸಲಾತಿ ಪಡೆದಿದ್ದಾರೆ, ಆದರೆ, ವೀರಶೈವರಿಗೆ ಮಾತ್ರ ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಮೀಸಲಾತಿ ದೊರೆತಿಲ್ಲ. ಪರಿಣಾಮವಾಗಿ ಸಮುದಾಯದ ಯುವಕರಿಗೆ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ನಿರೀಕ್ಷಿತ ಪ್ರಾತಿನಿಧ್ಯ ಹಾಗೂ ವಿದ್ಯಾರ್ಥಿಗಳಿಗೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಪ್ರವೇಶ ಸಿಗದೆ ಅವಕಾಶ ವಂಚಿತರಾಗುತ್ತಿದ್ದಾರೆ’ ಎಂದರು.

ADVERTISEMENT

‘ವೀರಶೈವರಲ್ಲಿನ 99 ಒಳಪಂಗಡಗಳ ಜನರು ಒಂದೇ ವೇದಿಕೆಯಲ್ಲಿ ಸೇರುವ ಮಹಾ ಅಧಿವೇಶನದ ಯಶಸ್ಸಿಗೆ ಎಲ್ಲ ಸಹಕಾರ ನೀಡಲಾಗುವುದು’ ಎಂದರು.

ಗುರುಪೀಠದ ಆಡಳಿತಾಧಿಕಾರಿ ಪಿ.ರಾಜಕುಮಾರ್, ಗುರುಪೀಠದ ಪ್ರದಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಮಾತನಾಡಿದರು.

ಗುರುಪೀಠದ ಧರ್ಮದರ್ಶಿ ಚಂದ್ರಶೇಖರ್ ಪೂಜಾರ್, ಸಮುದಾಯದ ಮುಖಂಡ ಹೊನ್ನಾಳಿ ಬಾಬಣ್ಣ ಇದ್ದರು.

ಬರಗಾಲ ಇರುವುದರಿಂದ ಪ್ರತಿ ವರ್ಷ ಗುರುಪೀಠದಿಂದ ನಡೆಸಲಾಗುತ್ತಿದ್ದ ಹರ ಜಾತ್ರೆಯನ್ನು ಈ ಬಾರಿ ನಡೆಸಬೇಕಾ ಬೇಡವೇ ಎಂಬ ಚರ್ಚೆ ನಡೆಯುತ್ತಿದೆ. ಸಮುದಾಯದ ಮುಖಂಡರ ಸಭೆ ಕರೆದು ನಿರ್ಧರಿಸಲಾಗುವುದು
-ವಚನಾನಂದ ಶ್ರೀ ವೀರಶೈವ ಲಿಂಗಾಯಿತ ಪಂಚಮಸಾಲಿ ಗುರುಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.