ADVERTISEMENT

ಅನಾಥ ಶವಗಳ ಮಾರಾಟ: ಸಿಬಿಐ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 16:43 IST
Last Updated 4 ಜನವರಿ 2020, 16:43 IST
   

ದಾವಣಗೆರೆ: ನಗರದ ಕೆಲವು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿಅನಾಥ ಶವಗಳನ್ನು ಮಾರಾಟ ಮಾಡುವ ದಂಧೆ ಇದ್ದು, ಈ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಹೈಕೋರ್ಟ್‌ನ ಮೊರೆಹೋಗುವುದಾಗಿ ಸಾಮಾಜಿಕ ಕಾರ್ಯಕರ್ತ ಹರೀಶ್ ಹಳ್ಳಿ ಎಚ್ಚರಿಸಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನಾಥ ಶವಗಳನ್ನು ಅನಾಟಮಿ ಆಕ್ಟ್ 1956ರ ಅನುಸಾರ ವಿಲೇವಾರಿ ಮಾಡದೆ ಕಡತಗಳಲ್ಲಿ ಮಾಹಿತಿ ಸಂಗ್ರಹಿಸದೇ ವೈದ್ಯಕೀಯ ಕಾಲೇಜುಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರು ನೀಡಿದ್ದೇನೆ’ ಎಂದು ಆರೋಪಿಸಿದರು.

‘2007ರಿಂದ 2017ರ ಮಧ್ಯೆ ಪೊಲೀಸ್‌ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾಸ್ಪತ್ರೆಯವರು ವಾರಸುದಾರರಿಲ್ಲದ ಶವದ ಬಗ್ಗೆ ಒಂದೊಂದು ರೀತಿಯ ವರದಿ ನೀಡಿದ್ದಾರೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯವರು 32 ವಾರಸುದಾರರಿಲ್ಲದ ಶವಗಳನ್ನು ಪೊಲೀಸ್‌ ಇಲಾಖೆಗೆ ನೀಡಲಾಗಿದೆ ಎಂದಿದ್ದಾರೆ. ಆದರೆ ಮಹಾನಗರ ಪಾಲಿಕೆ ಕೇವಲ 4 ಶವದ ಮಾಹಿತಿ ನೀಡಿದರೆ, ಪೊಲೀಸರು 13 ಶವಗಳ ಬಗ್ಗೆ ತಿಳಿಸುತ್ತಿದ್ದಾರೆ.ಇದರಲ್ಲಿ ದೊಡ್ಡ ಮರ್ಮವೇ ಅಡಗಿದೆ’ ಎಂದು ಆರೋಪಿಸಿದರು.

ADVERTISEMENT

‘ಕೆಲ ಖಾಸಗಿ ವೈದ್ಯಕೀಯ ಕಾಲೇಜುಗಳು ಅಪರಾಧವೆಂದು ಗೊತ್ತಿದ್ದರೂ ಅನಾಟಮಿ ಆಕ್ಟ್ ಕಾಯ್ದೆಯನ್ನು ಉಲ್ಲಂಘಿಸಿರುವುದು ದುರಂತ. ಸತತ 2 ವರ್ಷಗಳಿಂದ ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದಿರುವ ದಾಖಲೆಗಳಿಂದ ಈ ಎಲ್ಲಾ ಮಾಹಿತಿ ತಿಳಿದುಬಂದಿದ್ದು, ಈ ಬಗ್ಗೆ ಪೂರ್ವವಲಯ ಐಜಿಪಿ ಕಚೇರಿಗೆ ದೂರು ಸಲ್ಲಿಸಲಾಗಿದೆ’ ಎಂದರು.

‘ಜಿಲ್ಲಾಧಿಕಾರಿಗಳು ಜಿಲ್ಲಾಡಳಿತದ ವ್ಯಾಪ್ತಿಗೆ ಒಳಪಡುವ ಇಲಾಖೆಗಳ ಅಧಿಕಾರಿಗಳು ನೀಡಿರುವ ದಾಖಲಾತಿಗಳನ್ನು ವಶಪಡಿಸಿಕೊಂಡು ಅಕ್ರಮ ಎಸಗಿರುವವರ ವಿರುದ್ಧ ಕ್ರಮ ಕೈಗೊಂಡು ಏಳು ದಿವಸದ ಒಳಗೆ ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪವನ್‌ರಾಜ್, ವೀರಾಚಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.