ADVERTISEMENT

ಸಾವಿನ ಕುರಿತು ಪೊಲೀಸರ ಎದುರು ಹಲವು ಪ್ರಶ್ನೆಗಳನ್ನಿಟ್ಟ ಚಂದ್ರಶೇಖರ್ ತಂದೆ ರಮೇಶ್‌

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2022, 12:51 IST
Last Updated 6 ನವೆಂಬರ್ 2022, 12:51 IST
ಮೃತ ಚಂದ್ರಶೇಖರ್‌
ಮೃತ ಚಂದ್ರಶೇಖರ್‌   

ಹೊನ್ನಾಳಿ: ‘ನನ್ನಲ್ಲಿ ಹಲವು ಪ್ರಶ್ನೆಗಳಿವೆ, ತಾಕತ್ತಿದ್ದರೆ ಎಸ್‌ಪಿ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲಿ’ ಎಂದು ಮೃತ
ಎಂ.ಆರ್. ಚಂದ್ರಶೇಖರ್ ಅವರ ತಂದೆ ಎಂ.ಪಿ. ರಮೇಶ್ ಶನಿವಾರ ಸವಾಲು ಹಾಕಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ
ಅವರು, ‘ನನ್ನ ಮಗ ಯಾವತ್ತೂ ಓವರ್ ಸ್ಪೀಡ್ ವಾಹನ ಚಾಲನೆ ಮಾಡಿಲ್ಲ. ಆತನ ಡ್ರೈವರ್‌ಗೆ ಯಾವಾಗಲೂ ನಿಧಾನಕ್ಕೆ ಗಾಡಿ ಓಡಿಸು ಎಂದು ಹೇಳುತ್ತಿದ್ದ. ಸ್ವಲ್ಪ ಜೋರಾಗಿ ಓಡಿಸಿದರೆ ಆತನಿಗೆ ಇಳಿದು ಹೋಗು ಎನ್ನುತ್ತಿದ್ದ. ಆದರೆ ಪೊಲೀಸರು ಓವರ್ ಸ್ಪೀಡ್ ಎಂದು ಹೇಳಿಕೆ ಕೊಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾರಿನಲ್ಲಿ ನನ್ನ ಮಗ ಒಬ್ಬನೇ ಇದ್ದ ಎನ್ನುವುದು ಕಾರಿನ ಡೋರ್ ತೆಗೆದಾಗ ತಿಳಿಯಿತು. ಒಬ್ಬನೇ ಇದ್ದರೆ ಎರಡು ಏರ್ ಬ್ಯಾಗ್ ಓಪನ್ ಆಗಲು ಹೇಗೆ ಸಾಧ್ಯ? ಕಾರು ಓವರ್ ಸ್ಪೀಡ್ ಇದ್ದರೆ, ಸೀಟ್ ಬೆಲ್ಟ್ ಹಾಕಿದ್ದರೆ ಡ್ರೈವರ್ ಸ್ಥಳದಲ್ಲಿಯೇ ಕೂರಬೇಕಾಗಿತ್ತು. ಇಲ್ಲವೇ ಮುಂದಕ್ಕೆ ಹೋಗಿ ಬೀಳಬೇಕಿತ್ತು. ಇಲ್ಲವೇ ಬಲಕ್ಕೆ ವಾಲಬೇಕಾಗಿತ್ತು. 5.8 ಇಂಚು ಎತ್ತರ ಇರುವ ನನ್ನ ಮಗ ಚಿಕ್ಕದಾದ ಕಾರಿನ ಹಿಂಬದಿಯಲ್ಲಿ ಹೋಗಿ ಬೀಳಲು ಸಾಧ್ಯವೇ? ಹೀಗೆ ಬಿದ್ದಿದ್ದರೆ ಆತನಿಗೆ ಆದ ಗಾಯಗಳು ಕ್ರೂರತ್ವದಿಂದ ಕೂಡಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

ADVERTISEMENT

ಕಾರಿನ ಮ್ಯಾಟ್ ಕೆಳಗೆ ಮೊಬೈಲ್: ‘ಎಫ್‍ಎಸ್‍ಎಲ್ ತಂಡ ಕಾರು ಪರಿಶೀಲನೆ ಮಾಡುತ್ತಿದ್ದಾಗ ಚಂದ್ರು ಅವರ ಮೊಬೈಲ್ ಕಾರಿನ ಮ್ಯಾಟ್ ಕೆಳಗೆ ಸಿಕ್ಕಿದೆ. ಅ. 30 ರಂದು ಮೊಬೈಲ್ ಲೋಕೇಶನ್ ಮಾರುತಿ ರೈಸ್ ಮಿಲ್ ಬಳಿ ತೋರಿಸುತ್ತಿದೆ ಎಂದು ಪೊಲೀಸರು ಹೇಳಿದ್ದರು. ನಂತರ ‘ನಿಮ್ಮ ಮನೆಯ ಸುತ್ತಲೂ ತೋರಿಸುತ್ತಿದೆ’ ಎಂದರು. ‘ಆದರೆ ಕಾರಿನ ಕೆಳಗೆ ಮೊಬೈಲ್ ಸಿಕ್ಕಿದೆ. ಇದು ಹೇಗೆ ಸಾಧ್ಯ? ಪೊಲೀಸರು ತನಿಖೆ ನಡೆಸದೆಯೇ, ಸಿಸಿಟಿವಿ ಫೂಟೇಜ್ ನೊಡದೆಯೇ ಇಂತಹ ಹೇಳಿಕೆಗಳನ್ನು ಕೊಟ್ಟರೆ?’ ಎಂದು ಕೇಳಿದರು.

‘ಅ. 30ರ ರಾತ್ರಿ 10ರ ಮೇಲೆ ಒಬ್ಬನೇ ವ್ಯಕ್ತಿ 10ಕ್ಕೂ ಹೆಚ್ಚು ಬಾರಿ ಮೊಬೈಲ್ ಕರೆ ಮಾಡಿದ್ದಾನೆ ಎನ್ನುವುದು ಸಿಡಿಆರ್‌ನಲ್ಲಿ ಸಿಕ್ಕಿದೆ. ಚಂದ್ರುವಿನ ಸ್ನೇಹಿತ ಶಿವಮೊಗ್ಗದ ಕಿರಣ್ ಎಂಬಾತನನ್ನು ವಿಚಾರಣೆ ಮಾಡುತ್ತಿದ್ದಾರೆ. ನಮಗೆ ಕಿರಣ್ ಮೇಲೆ ಸಾಕಷ್ಟು ಅನುಮಾನವಿದೆ’ ಎಂದು ರಮೇಶ್ ಹೇಳಿದರು.

‘ಪೊಲೀಸರು ಯಾರದ್ದೋ ಪ್ರಭಾವಕ್ಕೆ ಒಳಗಾಗಿ ಹೀಗೆ ಸುಳ್ಳು ಹೇಳುತ್ತಿದ್ದಾರೆ. ಅದನ್ನು ಬಿಟ್ಟು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸಬೇಕು. ಪೊಲೀಸ್ ಇಲಾಖೆ ಮೇಲೆ ನಂಬಿಕೆ ಕಳೆದು
ಕೊಳ್ಳುವಂತೆ ಮಾಡಬಾರದು ಎಂದರು. ಎಡಿಜಿಪಿ ಅಲೋಕ್‌ಕುಮಾರ್ ಅವರು ತನಿಖೆ
ಪೂರ್ಣಮಟ್ಟದಲ್ಲಿ ಆಗದೇ ಅವಸರದಲ್ಲಿ ಹೇಳಿಕೆಗಳನ್ನು ಕೊಡುವುದನ್ನು ಬಿಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.