ADVERTISEMENT

ಚನ್ನಗಿರಿ: ನಳನಳಿಸುತ್ತಿರುವ ಮೆಕ್ಕೆಜೋಳ

ನಾಲ್ಕೈದು ದಿನಗಳಿಂದ ವಿರಾಮ ನೀಡಿರುವ ಮಳೆರಾಯ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 8:10 IST
Last Updated 12 ಆಗಸ್ಟ್ 2024, 8:10 IST
ಚನ್ನಗಿರಿ ತಾಲ್ಲೂಕು ಮಾವಿನಕಟ್ಟೆ ಗ್ರಾಮದಲ್ಲಿ ಸೂಲಂಗಿ ಬಿಟ್ಟು ನಳನಳಿಸುತ್ತಿರುವ ಮೆಕ್ಕೆಜೋಳ
ಚನ್ನಗಿರಿ ತಾಲ್ಲೂಕು ಮಾವಿನಕಟ್ಟೆ ಗ್ರಾಮದಲ್ಲಿ ಸೂಲಂಗಿ ಬಿಟ್ಟು ನಳನಳಿಸುತ್ತಿರುವ ಮೆಕ್ಕೆಜೋಳ   

ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಾಂತ ನಾಲ್ಕೈದು ದಿನಗಳಿಂದ ಮಳೆ ವಿರಾಮ ನೀಡಿದ್ದು, ಬಿಸಿಲು ಕಾಣಿಸಿಕೊಂಡಿದೆ. ಮೆಕ್ಕೆಜೋಳ ಬೆಳೆ ಸೇರಿದಂತೆ ಎಲ್ಲ ಬೆಳೆಗಳೂ ಹಸಿರು ಹೊದ್ದು ನಳನಳಿಸುತ್ತಿವೆ. 

ತಾಲ್ಲೂಕಿನಲ್ಲಿ ಅಡಿಕೆ ಹೊರತುಪಡಿಸಿದರೆ ಮೆಕ್ಕೆಜೋಳ ಎರಡನೇ ಪ್ರಮುಖ ವಾಣಿಜ್ಯ ಬೆಳೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ 25,000 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. ಉತ್ತಮ ಮಳೆಯಾಗಿರುವುದರಿಂದ ಪೈರು ಸಮೃದ್ಧವಾಗಿ ಬೆಳೆದು ನಿಂತಿದ್ದು, ಕಣ್ಮನ ಸೆಳೆಯುವಂತಿವೆ. ಜೂನ್ ತಿಂಗಳಲ್ಲಿ ಬಿತ್ತನೆ ಮಾಡಿರುವ ಮೆಕ್ಕೆಜೋಳ ಈಗಾಗಲೇ ಸೂಲಂಗಿ ಬಿಟ್ಟು ಕಂಗೊಳಿಸುತ್ತಿದೆ. ಈಗ ಕಾಳು ಕಟ್ಟುವ ಸಮಯ. ಕಾಳು ಕಟ್ಟಲು ಮಳೆ ವಿರಾಮ ನೀಡುವುದು ಅಗತ್ಯವಾಗಿತ್ತು. ಹದಿನೈದು ದಿನಗಳಿಂದ ಬಿಡದೇ ಮಳೆಯಾಗಿದ್ದರಿಂದ ಬೆಳೆಗಳು ಶೀತದಿಂದ ನಲುಗಿದ್ದವು. ನಾಲ್ಕೈದು ದಿನಗಳಿಂದ ಮಳೆ ನಿಂತಿದ್ದು, ಬಿಸಿಲು ಬೀಳುತ್ತಿದೆ. ಬೆಳೆಗಳು ಚೇತರಿಕೆ ಕಾಣುತ್ತಿವೆ.

ಎರಡು ತಿಂಗಳ ಹಿಂದೆ ಬಿತ್ತನೆ ಮಾಡಿರುವ ಮೆಕ್ಕೆಜೋಳ ಬೆಳೆ ಕಬ್ಬಿನ ದಂಟಿನಂತೆ ಬೆಳೆದು ನಿಂತಿವೆ. ಇದೇ ರೀತಿ ಇನ್ನೂ ಒಂದು ವಾರ ಬಿಸಿಲು ಮುಂದುವರಿದು, ವಾರದ ನಂತರ ಒಂದೆರಡು ಬಾರಿ ಮಳೆಯಾದರೆ ಉತ್ತಮ ಇಳುವರಿ ಸಿಗುವ ನಿರೀಕ್ಷೆಯಿದೆ ಎನ್ನುತ್ತಾರೆ ಮಾವಿನಕಟ್ಟೆ ಗ್ರಾಮದ ರೈತ ಲೋಕೇಶ್.

ADVERTISEMENT

ಉತ್ತಮ ಮಳೆಯಿಂದಾಗಿ ಹತ್ತಿ, ಅಲಸಂದೆ, ಅವರೆ, ಸೋಯಾಬಿನ್, ತೊಗರಿ, ತರಕಾರಿ ಮುಂತಾದ ಬೆಳೆಗಳೂ ಸಮೃದ್ಧವಾಗಿ ಬೆಳೆದು ನಿಂತಿವೆ. ಎರಡು ತಿಂಗಳ ಹಿಂದೆ ಬಿತ್ತನೆ ಮಾಡಿರುವ ಬೆಳೆಗಳಿಗೆ, ಮುಂದಿನ ದಿನಗಳಲ್ಲಿ ಒಂದೆರಡು ಬಾರಿ ಮಳೆಯಾದರೂ ಸಾಕು. ಆದರೆ ತಡವಾಗಿ ಬಿತ್ತನೆ ಮಾಡಿರುವ ಬೆಳೆಗಳಿಗೆ ಮುಂದಿನ ದಿನಗಳಲ್ಲಿ ಮಳೆಯ ಅವಶ್ಯಕತೆ ಇದೆ.

ಭದ್ರಾ ನಾಲೆಯಲ್ಲಿ ನೀರು ಹರಿಸಿರುವುದರಿಂದ ತಾಲ್ಲೂಕಿನ ಭತ್ತ ಬೆಳೆಯುವ ಪ್ರದೇಶದ ಪೈಕಿ 10000 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ನಾಟಿ ಕಾರ್ಯ ಭರದಿಂದ ನಡೆಯುತ್ತಿದೆ

– ಎಸ್.ಎಚ್. ಅರುಣ್ ಕುಮಾರ್ ಕೃಷಿ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.